ಕೊಪ್ಪಳ: ‘ಖಾದಿ ಉತ್ಪಾದನೆ ಉತ್ತೇಜಿಸಲು ರಾಜ್ಯ ಸರ್ಕಾರ ಪ್ರತಿ ವರ್ಷ ಖಾದಿ ಬಟ್ಟೆಗಳಿಗೆ ಶೇ. 35ರಷ್ಟು ಹಾಗೂ ರೇಷ್ಮೆ ಖಾದಿ ಬಟ್ಟೆಗಳಿಗೆ ಶೇ. 25ರಷ್ಟು ರಿಯಾಯಿತಿ ನೀಡುತ್ತಿದ್ದು, ಇದರಿಂದ ಖಾದಿ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಅನುಕೂಲವಾಗುತ್ತದೆ’ ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರೂ ಆದ ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ ಹೇಳಿದರು.
ನಗರದ ಶಾದಿಮಹಲ್‌ನಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಹಯೋಗದಲ್ಲಿ ಆರಂಭವಾದ ರಾಜ್ಯಮಟ್ಟದ ಖಾದಿ, ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಮಹಾತ್ಮ ಗಾಂಧೀಜಿ ಅವರ ಸ್ವದೇಶಿ ಚಳವಳಿಯ ಪ್ರತೀಕವಾಗಿ ಖಾದಿಯಿದೆ. ಖಾದಿ ಕೇವಲ ಬಟ್ಟೆಯಲ್ಲ. ಅದು ನಮ್ಮ ಸ್ವಾಭಿಮಾನ, ಸ್ವಾವಲಂಬನೆ ಮತ್ತು ಪರಿಸರ ಜೀವನ ಶೈಲಿಯ ಪ್ರತೀಕವಾಗಿದೆ’ ಎಂದರು.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ ‘ಕೈಯಲ್ಲಿ ಬಟ್ಟೆಗಳನ್ನು ನೇಯ್ದು ತಯಾರಿಸಿ ಮಾರಾಟ ಮಾಡುವವರಿಗೆ ಇಲಾಖೆ ಪ್ರೋತ್ಸಾಹ ಕೊಡಬೇಕು. ಭಾಗ್ಯನಗರ ಮತ್ತು ಕಿನ್ನಾಳನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೈ ಮಗ್ಗದಿಂದ ಬಟ್ಟೆಗಳನ್ನು ನೇಯ್ಯಲಾಗುತ್ತಿದ್ದು ಅವರಿಗೆ ನೆರವಾಗಬೇಕು. ಶ್ರಮ ಸಂಸ್ಕೃತಿಯನ್ನು ಜೀವಾಳವಾಗಿರಿಸಿಕೊಂಡ ಕಾರ್ಮಿಕರಿಗೆ ಮತ್ತು ಗುಡಿ ಕೈಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಹೆಚ್ಚು ನೆರವಾಗಬೇಕು’ ಎಂದು ಹೇಳಿದರು.
ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಕಾರ್ಯನಿರ್ವಾಹಣಾಧಿಕಾರಿ ಡಿ.ಬಿ. ನಟೇಶ್, ಜಿಲ್ಲಾ ಅಭಿವೃದ್ಧಿ ಅಧಿಕಾರಿ ಕೆ.ವೀರೇಶ, ಧಾರವಾಡ ಜಿಲ್ಲಾ ಅಭಿವೃದ್ಧಿ ಅಧಿಕಾರಿ ನಾಗನಗೌಡ ನೆಗಳೂರು, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ರಾಮಣ್ಣ ನಾಯಕ, ನಗರಸಭೆ ಸದಸ್ಯ ಅಕ್ಬರ್ ಪಾಶಾ ಪಲ್ಟನ್, ಮುಖಂಡ ಪ್ರಸನ್ನ ಗಡಾದ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
- ಖಾದಿ ಬಟ್ಟೆಗಳು ಬೇಸಿಗೆ ಕಾಲದಲ್ಲಿ ನಮ್ಮ ದೇಹಕ್ಕೆ ತಂಪಾಗಿಸಿ ಶೀತಕಾಲದಲ್ಲಿ ಬಿಸಿ ನೀಡುತ್ತದೆ. ಇಂಥ ವಸ್ತುಗಳು ಜನಪದದ ಸಂಕೇತವಾಗಿದೆ.ಹೇಮಲತಾ ನಾಯಕ ವಿಧಾನಪರಿಷತ್ ಸದಸ್ಯೆ
ಖಾದಿ ಮತ್ತು ಗ್ರಾಮೋದ್ಯೋಗ ಕ್ಷೇತ್ರದಲ್ಲಿ ರಾಜ್ಯದಲ್ಲಿ ₹650 ಕೋಟಿಗೂ ಮಿಗಿಲಾದ ವಹಿವಾಟಿನೊಂದಿಗೆ 21 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸೃಷ್ಟಿಸಲಾಗಿದೆ. ಮೂರು ತಿಂಗಳಲ್ಲಿ ಆರು ಕಡೆ ಮೇಳ ನಡೆಯಲಿದೆ.ಬಸವನಗೌಡ ತುರುವಿಹಾಳ ರಾಜ್ಯ ಖಾದಿ ಮಂಡಳಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.