ADVERTISEMENT

ಕೊಪ್ಪಳ: 104 ಕೆರೆ ತುಂಬಿಸುವ ಯೋಜನೆಗೆ ₹ 1527 ಕೋಟಿ ಮೊತ್ತದ ಪ್ರಸ್ತಾವ

ನೀರಾವರಿ ಇಲಾಖೆಗೆ ಪ್ರಸ್ತಾವ: ಆಮೆಗತಿಯಲ್ಲಿ ಕಾರ್ಯ: ಒಂದೇ ಯೋಜನೆ ಪೂರ್ಣ

ಸಿದ್ದನಗೌಡ ಪಾಟೀಲ
Published 11 ಅಕ್ಟೋಬರ್ 2019, 7:27 IST
Last Updated 11 ಅಕ್ಟೋಬರ್ 2019, 7:27 IST
ಕೆರೆ ತುಂಬಿಸುವ ಯೋಜನೆಯಲ್ಲಿ ಆಯ್ಕೆಯಾದ ಕೊಪ್ಪಳದ ಹುಲಿಕೆರೆ ನೀರಿಗಾಗಿ ಬಾಯ್ದೆರೆದು ನಿಂತಿದೆ
ಕೆರೆ ತುಂಬಿಸುವ ಯೋಜನೆಯಲ್ಲಿ ಆಯ್ಕೆಯಾದ ಕೊಪ್ಪಳದ ಹುಲಿಕೆರೆ ನೀರಿಗಾಗಿ ಬಾಯ್ದೆರೆದು ನಿಂತಿದೆ   

ಕೊಪ್ಪಳ: ತುಂಗಭದ್ರಾ, ಕೃಷ್ಣಾ ಮತ್ತು ಸಿಂಗಟಾಲೂರ ಏತ ನೀರಾವರಿಯಿಂದ ಜಿಲ್ಲೆಯ ನಾಲ್ಕು ತಾಲ್ಲೂಕಿನ104ಕೆರೆತುಂಬಿಸುವ ಯೋಜನೆಗೆ ₹ 1527 ಕೋಟಿ ಪ್ರಸ್ತಾವ ಸಲ್ಲಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳಲಿವೆಯೇ ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಬರಗಾಲಪೀಡಿತ ಜಿಲ್ಲೆಯ ಜನರ ನೀರಿನ ಬವಣೆ ಅರಿತ ಸರ್ಕಾರ ಕೆರೆ ತುಂಬಿಸುವ ಯೋಜನೆಗಳಿಗೆ ಚಾಲನೆ ನೀಡಿತ್ತು.ಕೆಲವು ಯೋಜನೆ ಆರಂಭಿಸಬೇಕು ಎಂದು ಕಾರ್ಯಾದೇಶ ನೀಡಿದ್ದರೂ ಶೇ 95ರಷ್ಟು ಕಾಮಗಾರಿ ನಿಗದಿತ ಅವಧಿಯಲ್ಲಿ ನಡೆಯದೇ ಯೋಜನೆ ದುಬಾರಿಯಾಗುತ್ತಾ ಸಾಗಿದೆ.

ಬೃಹತ್ ನೀರಾವರಿ ಮತ್ತು ಸಣ್ಣ ನೀರಾವರಿ ಮತ್ತು ಅಂತರ್ಜಲ ವೃದ್ಧಿಇಲಾಖೆಯಿಂದ ಪ್ರಸ್ತಾವ ಸಲ್ಲಿಸಲಾಗಿದೆ. ಕೆಲವು ತಾಂತ್ರಿಕ, ರಾಜಕೀಯ ಅಡ್ಡಿಗಳಿಂದ ಈ ಯೋಜನೆಗಳು ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡದೇ ಇರುವುದರಿಂದ ಸಾಧಕ-ಬಾಧಕ ಪರಿಶೀಲಿಸುವಂತೆ ಮಾಡಿದೆ.

ADVERTISEMENT

ಪ್ರಸ್ತಾವ ಸಲ್ಲಿಸಿದ ಯೋಜನೆ:ತುಂಗಭದ್ರಾ ನದಿಯಿಂದ ಸಿಂಗಟಾಲೂರ ಏತ ನೀರಾವರಿಯ ಮುಂಡರಗಿ ಶಾಖಾ ಕಾಲುವೆ ಮೂಲಕ ₹ 19.45 ಕೋಟಿ ವೆಚ್ಚದಲ್ಲಿ ಕವಲೂರ ಗ್ರಾಮದ 3, ಅಳವಂಡಿ, ಮೋರನಾಳ ಗ್ರಾಮದ 2, ಮುಲ್ಲಾಪುರ, ಘಟರೆಡ್ಡಿಹಾಳ, ಬೆಳಗಟ್ಟಿ, ಹಟ್ಟಿ, ಬೆಟಗೇರಿ, ಹಿರೇಸಿಂದೋಗಿ, ಕೊಳೂರು, ಹಂದ್ರಾಳದ ತಲಾ ಒಂದು ಕೆರೆ ತುಂಬಿಸುವ, ಅಂತರ್ಜಲ ಮರುಪೂರಣ ಮತ್ತು ಜನಜಾನುವಾರುಗಳಿಗೆ ಕುಡಿಯುವ ನೀರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ತುಂಗಭದ್ರಾ ನದಿಯಿಂದ ಚಿಕ್ಕಬೆಣಕಲ್, ಲಿಂಗದಳ್ಳಿ, ಮುಕ್ಕುಂಪಿ, ಗೋಲಮ್ಮನಗುಂಡಿನ ಕೆರೆ ಎಚ್‌ಆರ್‌ಜಿ ನಗರ ವೆಂಕಟಗಿರಿ, ಗಡ್ಡಿ ಜಿನುಗು ಕೆರೆ ಆಗೋಲಿ, ಹಂಪಸದುರ್ಗ, ಉಡುಮ್ಮಕಲ್ ಕೆರೆಗಳನ್ನು ತುಂಬಿಸುವ ಕಾಮಗಾರಿ ₹ 93 ಕೋಟಿ ಡಿಪಿಆರ್‌ ತಯಾರಿಸಿ ನೀರಾವರಿನಿಗಮಕ್ಕೆಸಲ್ಲಿಸಲಾಗಿದೆ.

ಸಿದ್ದರಾಮಪುರ, ಬೆಣ್ಣಳ್ಳಿ ಗ್ರಾಮದ ಹತ್ತಿರ ಬರುವ ಕುಡಿಯುವ ನೀರಿಗಾಗಿ ಕಾರಟಗಿಯ ನಂ.32 ವಿತರಣಾ ಕಾಲುವೆಯ ಕೊನೆಯ ಭಾಗದಲ್ಲಿ ನೀರಾವರಿ ವಂಚಿತ ಪ್ರದೇಶಕ್ಕೆ ಏತ ನೀರಾವರಿ ಯೋಜನೆ ಕಾಮಗಾರಿ ಅನುಷ್ಠಾನಕ್ಕೆ ₹ 86 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ.

ಕಾರ್ಯಾದೇಶ:ಗಂಗಾವತಿ ತಾಲ್ಲೂಕಿನವಡ್ಡರಹಟ್ಟಿ ವಿಭಾಗದಿಂದ ಕರಣೋಣಾ, ಸಿರವಾರ ಕೆರೆಗಳಿಗೆ ಕಾಟಾಪುರ ಕೆರೆಯಿಂದ ನೀರು ತುಂಬಿಸುವ ಮತ್ತು ರಾಮದುರ್ಗ ಹೊಸ ಕೆರೆಗಳಿಗೆ ರಾಂಪುರ ಕೆರೆಯಿಂದ ಕುಡಿಯುವ ನೀರಿಗೆ ಕೆರೆ ತುಂಬಿಸುವ ಹಾಗೂ ನಂ.25 ಮತ್ತು 31 ವಿತರಣಾ ಕಾಲುವೆಯ ಕೊನೆಯ ಭಾಗದಲ್ಲಿ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶಕ್ಕೆ ಏತ ನೀರಾವರಿ ಮೂಲಕ ₹ 115 ಕೋಟಿ ಮೊತ್ತದ ಕಾಮಗಾರಿಗೆ ಅನುಮೋದನೆ ದೊರೆತಿದ್ದು ಕಾಮಗಾರಿ ಆರಂಭವಾಗಿದೆ.

ಬೃಹತ್ ಯೋಜನೆ:ಕೃಷ್ಣಾ ನದಿಯಿಂದ ಕುಷ್ಟಗಿ ತಾಲ್ಲೂಕಿನ 15 ಕೆರೆಗಳಿಗೆ ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ಧಿಗೆ ₹ 498.80 ಕೋಟಿ ಯೋಜನೆಗೆ2019ರ ಜುಲೈ ತಿಂಗಳಲ್ಲಿಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಎರಡು ಹಂತಗಳಲ್ಲಿ ಕೆರೆ ತುಂಬಿಸುವ ಯೋಜನೆ ಇದಾಗಿದೆ.

ತುಂಗಭದ್ರಾ ನದಿಯಿಂದ ಗಂಗಾವತಿ ತಾಲ್ಲೂಕಿನ ಇಂದಿರಾನಗರ, ಜಬ್ಬಲಗುಡ್ಡಸೇರಿದಂತೆ 32 ಗ್ರಾಮದ ಕೆರೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ₹ 400 ಕೋಟಿ ವೆಚ್ಚದ ಯೋಜನೆ ತಯಾರಿಸಲಾಗಿದ್ದು, ಸಮಗ್ರ ಯೋಜನಾ ವರದಿ ಸಲ್ಲಿಕೆ ಮಾತ್ರ ಬಾಕಿ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.