ADVERTISEMENT

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿಗೆ ಬೆಂಕಿ ಹಚ್ಚಲು ಯತ್ನ: ಪತಿ ಬಂಧನ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 12:59 IST
Last Updated 19 ನವೆಂಬರ್ 2025, 12:59 IST
   

ಕೊಪ್ಪಳ: ನಡುವಳಿಕೆ ಬಗ್ಗೆ ಪದೇ ಪದೇ ಅನುಮಾನ ಮಾಡುತ್ತಿದ್ದ ಪತಿ ಚಿರಂಜೀವಿ ಭೋವಿಯಿಂದ ದೂರವಾಗಲು ಬಯಸಿ ಪತ್ನಿ ರೋಜಾ ಇಲ್ಲಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದಲ್ಲಿ ವಕೀಲರು ಬುಧವಾರ ಮಧ್ಯಸ್ಥಿಕೆ ನಡೆಸುತ್ತಿರುವಾಗ ಗಂಡ ತನ್ನ ಪತ್ನಿ, ಅತ್ತೆ ಹಾಗೂ ಮಾವನ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ.

ಸಂಬಂಧಿಕರಾದ ಕೊಪ್ಪಳ ತಾಲ್ಲೂಕಿನ ಹಳೆಕುಮಟಾ ಗ್ರಾಮದ ರೋಜಾ ಹಾಗೂ ಕಾರಟಗಿ ತಾಲ್ಲೂಕಿನ ಸಿದ್ದಾಪುರದ ಚಿರಂಜೀವಿ 12 ವರ್ಷಗಳ ಹಿಂದೆ ಪ್ರೀತಿಸಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದುಡಿಯಲು ಇಬ್ಬರೂ ಬೆಂಗಳೂರಿಗೆ ಹೋಗಿದ್ದಾಗ ಪತಿ ಅನುಮಾನ ಪಡುವುದು, ಮದ್ಯ ಕುಡಿದು ಬಂದು ಹೊಡೆಯುವುದು ಮಾಡಿದ್ದರಿಂದ ಆರಂಭದ ಒಂದು ವರ್ಷ ಹೊರತುಪಡಿಸಿ ಅನೇಕ ಬಾರಿ ದಾಂಪತ್ಯ ಕಲಹಗಳು ನಡೆದಿವೆ. ಎರಡೂ ಕಡೆಯ ಹಿರಿಯರು ಬುದ್ದಿವಾದ ಹೇಳಿ ಹೊಂದಿಕೊಂಡು ಹೋಗುವಂತೆ ತಿಳಿಸಿದರೂ ಸುಧಾರಣೆಯಾಗಲಿಲ್ಲ ಎಂದು ಯುವತಿಯ ಕುಟುಂಬದವರು ತಿಳಿಸಿದರು.  

ಎರಡು ತಿಂಗಳ ಹಿಂದೆ ಕಲಹ ತಾರಕಕ್ಕೇರಿದಾಗ ಬೇಸತ್ತ ರೋಜಾ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು ಇಬ್ಬರ ನಡುವೆಯೂ ಮಧ್ಯಸ್ಥಿಕೆ ನಡೆಯುತ್ತಿತ್ತು. ಆಗ ರೋಜಾ ಪತಿ ಚಿರಂಜೀವಿ ’ನನ್ನ ಪತ್ನಿಯನ್ನು ದೂರ ಮಾಡಿ ಕರೆದುಕೊಂಡು ಹೋಗುತ್ತಿದ್ದೀರಾ?, ನನ್ನ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೀರಾ. ನಿಮ್ಮನ್ನು ಜೀವಸಹಿತ ಬಿಡುವುದಿಲ್ಲ’ ಎಂದು ಆಕ್ರೋಶಗೊಂಡು ಪತಿ, ಅತ್ತೆ ಶಾಂತಮ್ಮ ಹಾಗೂ ಮಾವ ಶಂಕ್ರಪ್ಪ ಭೋವಿ ಮೇಲೆ ಪ್ಲಾಸ್ಟಿಕ್‌ ಬಾಟಲಿಯಲ್ಲಿ ತಂದಿದ್ದ ಪೆಟ್ರೋಲ್‌ ಸುರಿದು ಲೈಟರ್‌ನಿಂದ ಬೆಂಕಿ ಹಚ್ಚಲು ಮುಂದಾದಾಗ ಅಲ್ಲಿಯೇ ಇದ್ದ ವಕೀಲರು ತಡೆದಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ADVERTISEMENT

‘ನನ್ನ ಜೊತೆಗೆ ತಂದೆ ತಾಯಿಗೆ ಅವಾಚ್ಯ ಪದಗಳಿಂದ ನಿಂದಿಸಿ ಪೆಟ್ರೋಲ್‌ ಉಗ್ಗಿ ಕೊಲೆ ಮಾಡಲು ಯತ್ನಿಸಿದ್ದಾನೆ’ ಎಂದು ರೋಜಾ ನೀಡಿದ ದೂರಿನ ಮೇರೆಗೆ ಇಲ್ಲಿನ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.