ADVERTISEMENT

ತಾವರಗೇರಾ: ರೈತನ ಕೈಹಿಡಿದ ಡ್ರ್ಯಾಗನ್‌ಫ್ರೂಟ್

ಐದು ಎಕರೆ ಜಮೀನಿನಲ್ಲಿ 7,500 ಗಿಡ ಬೆಳೆದ ರೈತ ಪ್ರೇಣೆಂದ್ರ ರಡ್ಡಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2021, 11:41 IST
Last Updated 29 ಅಕ್ಟೋಬರ್ 2021, 11:41 IST
ತಾವರಗೇರಾ ಸಮೀಪದ ಕನ್ನಾಳ ಗ್ರಾಮದ ಹೊರ ವಲಯದಲ್ಲಿ ರೈತ ಪ್ರೇಣೆಂದ್ರ ರಡ್ಡಿ ತೋಟದಲ್ಲಿ ಡ್ರ್ಯಾಗನ್ ಫ್ರೂಟ್’ ಬೆಳೆ ವೀಕ್ಷಣೆ ಮಾಡುತ್ತಿರುವ ತೋಟಗಾರಿಕೆ ಅಧಿಕಾರಿಗಳು
ತಾವರಗೇರಾ ಸಮೀಪದ ಕನ್ನಾಳ ಗ್ರಾಮದ ಹೊರ ವಲಯದಲ್ಲಿ ರೈತ ಪ್ರೇಣೆಂದ್ರ ರಡ್ಡಿ ತೋಟದಲ್ಲಿ ಡ್ರ್ಯಾಗನ್ ಫ್ರೂಟ್’ ಬೆಳೆ ವೀಕ್ಷಣೆ ಮಾಡುತ್ತಿರುವ ತೋಟಗಾರಿಕೆ ಅಧಿಕಾರಿಗಳು   

ತಾವರಗೇರಾ: ಕಷ್ಟಗಳಿವೆ ಎಂದು ಕೈಕಟ್ಟಿ ಕುಳಿತುಕೊಂಡರೆ ಏನು ಮಾಡಲು ಸಾಧ್ಯವಿಲ್ಲ. ದಿಟ್ಟ ನಿರ್ಧಾರದಿಂದ ಒಂದಿಲ್ಲೊಂದು ಪ್ರಯೋಗ ಮಾಡುತ್ತಲೇ ಇರಬೇಕು. ಆಗ ಮಾತ್ರ ಜಯಗಳಿಸಲು ಸಾಧ್ಯ ಎಂಬ ಮಾತಿದೆ. ಈ ಮಾತಿಗೆ ಸಾಕ್ಷಿ ಎನ್ನುವಂತೆ 5 ಎಕರೆ ಜಮೀನಲ್ಲಿ ತಾವರಗೆರಾ ಸಮೀಪದ ಕನ್ನಾಳ ಹೊರ ವಲಯದಲ್ಲಿ ಜಮೀನಿನಲ್ಲಿ ರೈತ ಪ್ರೇಣೆಂದ್ರ ರಡ್ಡಿ ಅವರು ಡ್ರ್ಯಾಗನ್‌ ಫ್ರೂಟ್ ಬೆಳೆದು ತೋರಿದ್ದಾರೆ.

ಕೆಂಪು ಮಿಶ್ರಿತ ಮಣ್ಣಿನಲ್ಲಿ ತೋಟಗಾರಿಕೆ ಇಲಾಖೆಯ ಸಹಕಾರ ಮತ್ತು ಮಾರ್ಗದರ್ಶನದ ಮೂಲಕ ಡ್ರ್ಯಾಗನ್ ಫ್ರೂಟ್’ ಬೆಳೆದಿದ್ದಾರೆ. ಈಗಾಗಲೇ ಐದು ಎಕರೆ ಭೂಮಿಯಲ್ಲಿ 7500 ಗಿಡ ಬೆಳೆಸಿದ್ದಾರೆ.

’₹25 ಲಕ್ಷ ಖರ್ಚು ಮಾಡಿದ್ದು, ಮೊದಲ ಫಸಲು ₹10 ಲಕ್ಷ ಮೊತ್ತದ ಹಣ್ಣು ಮಾರಾಟ ಮಾಡಲಾಗಿದೆ. ಈ ವರ್ಷದಲ್ಲಿ ಉತ್ತಮ ಇಳುವರಿ ಇದೆ. ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಿಗೆ ಸಿಕ್ಕರೆ ಖರ್ಚು ತೆಗೆದು, ಆದಾಯ ಪಡೆಯಲು ಸಾಧ್ಯ‘ ಎಂದು ರೈತ ಪ್ರೇಣೆಂದ್ರ ರಡ್ಡಿ ಹೇಳುತ್ತಾರೆ.

ADVERTISEMENT

ಸಿಂಧನೂರು ತಾಲೂಕಿನ ಪ್ರೇಣೆಂದ್ರ ರಡ್ಡಿ ಅವರು 9ನೇ ತರಗತಿಯಷ್ಟೇ ಓದಿದ್ದಾರೆ. ಮನೆಯವರ ಸಹಕಾರ, ಶ್ರಮದಿಂದ ಉತ್ತಮವಾದ ಡ್ರ್ಯಾಗನ್ ಫ್ರೂಟ್ ಬೆಳೆದು ಕೈತುಂಬಾ ಆದಾಯ ಗಳಿಸಿದ್ದಾರೆ.

ಸದ್ಯ ಒಂದು ಕೆ.ಜಿ. ಹಣ್ಣಿಗೆ 140 ರಿಂದ 160ರವರೆಗೆ ಬೆಲೆ ಸಿಗುತ್ತಿದೆ. ಬೆಳಗಾವಿ, ಹುಬ್ಬಳ್ಳಿ, ಆಂಧ್ರ ಪ್ರದೇಶದ ವ್ಯಾಪಾರಸ್ಥರು ಹೊಲಕ್ಕೆ ಭೇಟಿ ನೀಡಿ ತೆಗೆದುಕೊಂಡು ಹೋಗುತ್ತಾರೆ.

ಕೃಷಿ ಭೂಮಿಯಲ್ಲಿ ವಿದೇಶಿ ಹಣ್ಣು ಬೆಳೆದಿರುವುದನ್ನು ಸುತ್ತಲಿನ ರೈತರು ಅಚ್ಚರಿಯಿಂದ ನೋಡುತ್ತಿದ್ದಾರೆ. ಮಾರುಕಟ್ಟೆಯಲ್ಲೂ ಹೊಸ ಹಣ್ಣಿನ ರುಚಿ ಸವಿಯುವ ಗ್ರಾಹಕರೂ ಹೆಚ್ಚುತ್ತಿದ್ದಾರೆ. ಪ್ರೇಣೆಂದ್ರ ರಡ್ಡಿ ಅವರ ಹೊಲಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ಪರಿಶ್ರಮಕ್ಕೆ ಸಿಕ್ಕಿದ ಫಲ: ಪರಿಶ್ರಮ, ಲಕ್ಷಾಂತರ ಹಣ ಖರ್ಚು ಮಾಡಿ ಬೆಳೆಸಿದ ಹಣ್ಣಿನ ಗಿಡಗಳು ಒಂದೂವರೆ ವರ್ಷದ ನಂತರ ಫಲ ನೀಡಲಾರಂಭಿಸಿವೆ. ಫಸಲು ಚೆನ್ನಾಗಿ ಬಂದಿದೆ. ಪ್ರತಿ ಗಿಡದಲ್ಲೂ ಹಣ್ಣುಗಳು ಜೋತಾಡುತ್ತಿವೆ. ಕಳದ ಲಾಕ್‌ಡೌನ ಸಂದರ್ಭದಲ್ಲಿ ಮೊದಲ ಕೊಯ್ಲು ಶುರು ಮಾಡಿದ್ದಾರೆ. ಪ್ರೇಣೆಂದ್ರ ರಡ್ಡಿ ಇವರ ಹಣ್ಣಿಗೆ ಹಾಪ್‌ಕಾಮ್ಸ್‌ಗಳಿಂದ ಹೆಚ್ಚಿನ ಬೇಡಿಕೆ ಬಂದಿರುವು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.