ADVERTISEMENT

ಕೊಲೆ, ದೌರ್ಜನ್ಯ ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 3:26 IST
Last Updated 22 ಜುಲೈ 2021, 3:26 IST
ಕೊಪ್ಪಳದಲ್ಲಿ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆಯಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು
ಕೊಪ್ಪಳದಲ್ಲಿ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆಯಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು   

ಕೊಪ್ಪಳ: ‘ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯವರ ಮೇಲೆ ದೌರ್ಜನ್ಯ ನಡೆದಾಗ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ನ್ಯಾಯ ಒದಗಿಸುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿ ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

‘ಅನ್ಯಜಾತಿ ಹುಡುಗಿಯನ್ನು ಪ್ರೀತಿಸಿದ ಕಾರಣಕ್ಕೆ ಕಾರಟಗಿ ತಾಲ್ಲೂಕಿನ ಬರಗೂರು ಗ್ರಾಮದ ಪರಿಶಿಷ್ಟ ಜಾತಿಯ ಯುವಕ ದಾನಪ್ಪ ಅವರನ್ನು ಕೊಲೆ ಮಾಡಲಾಯಿತು. ಕಕ್ಕರಗೋಳ ಗ್ರಾಮದ ಪತ್ರಿಕೋದ್ಯಮದ ವಿದ್ಯಾರ್ಥಿ ರಾಘವೇಂದ್ರ ಅವರನ್ನೂ ಕೊಲೆ ಮಾಡಲಾಗಿದೆ’ ಎಂದು ದೂರಿದರು.

ಈ ಗ್ರಾಮದಲ್ಲಿರುವ ಸರ್ಕಾರಿ ಭೂಮಿಯನ್ನು ಬಲಾಢ್ಯರು ಒತ್ತುವರಿ ಮಾಡಿದ್ದಾರೆ. ಅದನ್ನು ಬಡ ಪರಿಶಿಷ್ಟರಿಗೆ ಹಂಚಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ADVERTISEMENT

ಕೊಲೆ ಮಾಡಿಸಿದ ಪ್ರಮುಖರನ್ನು ಪ್ರಕರಣದಲ್ಲಿ ಸೇರಿಸಬೇಕು. ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕು ಎಂದು ಅನೇಕ ಬಾರಿ ಮನವಿ, ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಬಲಾಢ್ಯರ ಪರ ನಿಂತಿರುವಇಲ್ಲಿನ ಕಾನೂನು ವ್ಯವಸ್ಥೆ ಜಾಣಮೌನ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕೆಲ ಭಾಗಗಳಲ್ಲಿ ಈಗಲೂ ಕೂಡ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದೆ. ಸಮಾಜ ಕಲ್ಯಾಣ ಅಧಿಕಾರಿಗಳು, ಜಿಲ್ಲಾಡಳಿತ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ. ಇದು ಯಾವ ಪ್ರಮಾಣದಲ್ಲಿ ಅಂದರೆ ಆ ಭಾಗದ ಕೆಲ ಊರುಗಳಲ್ಲಿ ಪರಿಶಿಷ್ಟ ಜಾತಿಯವರ ಮದುವೆಗಳು ನಡೆದರೆ ಆ ಊರಿನ ಅಂಗಡಿ ಮುಂಗ್ಗಟ್ಟುಗಳು ಸಂಪೂರ್ಣವಾಗಿ ಮುಚ್ಚಿರುತ್ತವೆ. ಇನ್ನೂ ದೇವಾಲಯ ಪ್ರವೇಶ ಮಾಡುವಂತಿಲ್ಲ. ಅಲ್ಲದೆ, ನೀರು ಕೊಡಲು ಸಹ ನಿರಾಕರಿಸಲಾಗುತ್ತಿದೆ ಎಂದು ದೂರಿದರು.

ಪರಿಶಿಷ್ಟ ಜಾತಿಯವರ ಮೇಲೆ ದೌರ್ಜನ್ಯ ನಡೆದಾಗ ದೂರು ಕೊಡಲು ಹೋದರೆ ದೌರ್ಜನ್ಯಕ್ಕೆ ಒಳಗಾದವರ ಮೇಲೆಯೇ ಕೌಂಟರ್ ಕೇಸ್ ಹಾಕುವ, ಅವರನ್ನೂ ಬೆದರಿಸುವ ಪ್ರಕರಣಗಳು ಹೆಚ್ಚಾಗಿವೆ. 2018 ರಲ್ಲಿ ಕನಕಗಿರಿ ಹತ್ತಿರ ತಿಪ್ಪನಾಳದಲ್ಲಿ ಸರ್ಕಾರಿ ಭೂಮಿಯಲ್ಲಿ ಸುಮಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ಪರಿಶಿಷ್ಟರನ್ನು ಒಕ್ಕಲೆಬ್ಬಿಸಿದ ಘಟನೆಗಳು ಇನ್ನೂ ಹಾಗೆಯೇ ಇವೆ. ಇದು ಯಾವ ಮಟ್ಟದ ಕ್ರೌರ್ಯವೆಂದರೆ ಫಸಲಿಗೆ ಬಂದ ಬೆಳೆಯನ್ನೂ ಸಂಪೂರ್ಣವಾಗಿ ಜೆಸಿಬಿಗಳಿಂದ ಮಣ್ಣು ಮಾಡಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ವಿಠ್ಠಪ್ಪ ಗೋರಂಟ್ಲಿ, ಬಸವರಾಜ ಶೀಲವಂತರ, ಮಹಾಂತೇಶ ಕೊತ್ತಬಾಳ ನರೇಗಲ್‌, ವಿವಿಧ ಸಂಘಟನೆಗಳ ಮುಖಂಡರಾದ ಡಿ.ಎಚ್‌.ಪೂಜಾರ, ಮಲ್ಲಿಕಾರ್ಜುನ ಪೂಜಾರ, ಶಿವಕುಮಾರ್ ಮಾತನಾಡಿ,‘ಜಿಲ್ಲೆಯ ಪರಿಶಿಷ್ಟ ಜಾತಿಯವರ ಮೇಲೆ ಹಲ್ಲೆ ನಡೆದರೆ ಅವುಗಳಿಗೆ ಪರಿಹಾರ ನೀಡುವ ಬದಲು ಪ್ರಭಾವಿಗಳನ್ನು ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದೆ. ಸಮಸ್ಯೆಗೆ ಕಾರಣವನ್ನು ಪತ್ತೆ ಮಾಡಿ ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.