ADVERTISEMENT

ಗಂಗಾವತಿ: ಸಂಭ್ರಮದ ದುರ್ಗಾದೇವಿ ರಥೋತ್ಸವ

ರಥೋತ್ಸವ ಕಣ್ತುಂಬಿಕೊಂಡ ಸಹಸ್ರಾರು ಭಕ್ತರು

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 7:04 IST
Last Updated 4 ಜನವರಿ 2026, 7:04 IST
ಗಂಗಾವತಿ ನಗರದಲ್ಲಿ ಶುಕ್ರವಾರ ದುರ್ಗಾದೇವಿ ಜಾತ್ರೆಯ ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತ ಸಮೂಹ
ಗಂಗಾವತಿ ನಗರದಲ್ಲಿ ಶುಕ್ರವಾರ ದುರ್ಗಾದೇವಿ ಜಾತ್ರೆಯ ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತ ಸಮೂಹ   

ಗಂಗಾವತಿ: ಭತ್ತದ ನಾಡಿನ ಗ್ರಾಮದೇವತೆ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಸಂಜೆ ನಗರದ ರಾಜ ಬೀದಿಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ದುರ್ಗಾದೇವಿಯ ರಥೋತ್ಸವ ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು.

ದುರ್ಗಾದೇವಿ ದೇವಸ್ಥಾನದಿಂದ ಸಕಲವಾದ್ಯಗಳೊಂದಿಗೆ ಆರಂಭಗೊಂಡ ರಥೋತ್ಸವ ರಾಜ ಬೀದಿಯಾದ ಗಣೇಶ ವೃತ್ತದಿಂದ, ಗಾಂಧಿವೃತ್ತ, ಬಸವಣ್ಣ ವೃತ್ತದ ಮೂಲಕ ಕಲ್ಮಠದ ಗಾಳೆಮ್ಮಗುಡಿ ತಲುಪಿ ಮತ್ತೆ ವಾಪಸ್ ದೇವಸ್ಥಾನಕ್ಕೆ ಬಂದು ತಲುಪಿತು.

ರಸ್ತೆಯ ಇಕ್ಕೆಲಗಳಲ್ಲಿ, ಬೃಹತ್ ಕಟ್ಟಡಗಳ ಮೇಲೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನಿಂತು ರಥೋತ್ಸವವನ್ನು ಕಣ್ತುಂಬಿಕೊಂಡರು. ಸಂಜೆ ರಥೋತ್ಸವ ಸಾಗುತ್ತಿದ್ದಾಗ ಮಹಿಳೆಯರು, ಯುವಕರು, ಯುವತಿಯರು, ಮಕ್ಕಳು, ಹಿರಿಯರು ಬಾಳೆಹಣ್ಣು, ಉತ್ತತ್ತಿ, ಹೂವು ಎರಚಿ ಗೌರವ ಸಲ್ಲಿಸಿದರು.

ADVERTISEMENT

ದೇವಿ ಜಾತ್ರೆಯ ರಥೋತ್ಸವ ಕಣ್ತುಂಬಿಕೊಳ್ಳಲು ಕಾರಟಗಿ, ಕನಕಗಿರಿ, ಶ್ರೀರಾಮ ನಗರ, ಹುಲಗಿ ಸೇರಿ ಗಂಗಾವತಿ ತಾಲ್ಲೂಕು ಸುತ್ತಮುತ್ತಲಿನ ಭಕ್ತರು ತಂಡೋಪತಂಡವಾಗಿ ಹರಿದು ಬಂದಿದ್ದರು.

ಬೆಳಿಗ್ಗೆ ದುರ್ಗಾದೇವಿ ಮೂರ್ತಿಗೆ ಅಭಿಷೇಕ, ಹೋಮ ಹವನ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ಸಂಜೆ ಹರಕೆ ಹೊತ್ತು ಸಮುದಾಯದ ಮುಖಂಡರು ಟ್ರಾಕ್ಟರ್ ಮೂಲಕ ಮೆರವಣಿಗೆ ಮಾಡುತ್ತಾ ಬೃಹತ್ ಹೂವಿನ ಹಾರಗಳನ್ನು ರಥಕ್ಕೆ ಸಮರ್ಪಿಸಿದರು.

ಇದಕ್ಕೂ ಮುನ್ನ ಬೆಳಿಗ್ಗೆ ಮಹಿಳೆಯರು ಕುಟುಂಬಸ್ಥರ ಸಮೇತ ದೇವಸ್ಥಾನಕ್ಕೆ ಆಗಮಿಸಿ ಸರತಿಯಲ್ಲಿ ನಿಂತು ದೇವಿ ದರ್ಶನ ಪಡೆದು ಹೂ, ಕರ್ಪೂರ, ತೆಂಗಿನಕಾಯಿ ಸಮರ್ಪಿಸಿದರು. ನಂತರ ಮಕ್ಕಳೊಂದಿಗೆ ಜಾತ್ರೆಯಲ್ಲಿನ ಕಿವಿಯೋಲೆ, ಬಳೆ, ಕುಂಕುಮ, ಮಕ್ಕಳ ಆಟದ ಸಾಮಾನು ಖರೀದಿಸಿದರು.

ಜಾತ್ರೆಯ ಅಂಗವಾಗಿ ದುರ್ಗಾದೇವಿ ದೇವಸ್ಥಾನದ ಮಾರ್ಗದಲ್ಲಿ ಬ್ಯಾರಿಕೇಡ್ ಅಳವಡಿಸಿ, ಸಂಚಾರ ಬಂದ್ ಮಾಡಲಾಗಿತ್ತು. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ಭಾಗವಾಗಿ ಅಗತ್ಯ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಗಣ್ಯರ ಭೇಟಿ, ದೇವಿ ದರ್ಶನ: 

ದುರ್ಗಾದೇವಿ ಜಾತ್ರೆ ನಿಮಿತ್ತ ದುರ್ಗಾದೇವಿ ದೇವಸ್ಥಾನಕ್ಕೆ ಮಾಜಿ ಸಂಸದ ಎಚ್.ಜಿ ರಾಮುಲು, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮೆಗೌಡ ಸೇರಿ ಕ್ಷೇತ್ರ ಹಲವು ಗಣ್ಯರು ಭೇಟಿ ನೀಡಿ, ದೇವಿ ದರ್ಶನ ಪಡೆದರು. ಜೋಗದ ನಾರಾಯಣಪ್ಪ ನಾಯಕ ಸೇರಿ ದೇವಸ್ಥಾನ ಸಮಿತಿ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.