ADVERTISEMENT

ಮತದಾನಕ್ಕೆ ಎಲ್ಲೆಡೆ ಬಂದೋಬಸ್ತ್, ಮತಗಟ್ಟೆಯತ್ತ ತೆರಳಿದ ಸಿಬ್ಬಂದಿ

ವಿವಿ ಪ್ಯಾಟ್, ಇವಿಎಂ ಯಂತ್ರಗಳೊಂದಿಗೆ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 13:27 IST
Last Updated 22 ಏಪ್ರಿಲ್ 2019, 13:27 IST
ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ್ ನಗರದ ಗವಿಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾದ ಮಸ್ಟ್‌ರಿಂಗ್ ಮತ್ತು ಡಿಮಾಸ್ಟ್‌ರಿಂಗ್‌  ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ, ಪರಿಶೀಲಿಸಿದರು
ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ್ ನಗರದ ಗವಿಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾದ ಮಸ್ಟ್‌ರಿಂಗ್ ಮತ್ತು ಡಿಮಾಸ್ಟ್‌ರಿಂಗ್‌  ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ, ಪರಿಶೀಲಿಸಿದರು   

ಕೊಪ್ಪಳ: ಪ್ರಜಾತಂತ್ರದ ಹಬ್ಬವೆಂದೇ ಕರೆಯಲಾಗುವ ಚುನಾವಣೆಗೆ ಕ್ಷಣಗಣನೆ ಆರಂಭವಾಯಿತು. ಸೋಮವಾರ ನಗರದ ಗವಿಸಿದ್ಧೇಶ್ವರ ಕಾಲೇಜಿನಲ್ಲಿ ಚುನಾವಣೆ ಸಿಬ್ಬಂದಿಗೆ ವಿವಿ ಪ್ಯಾಟ್, ಇವಿಎಂ ಯಂತ್ರವನ್ನು ನೀಡಲಾಯಿತು.

ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ನೇತೃತ್ವದಲ್ಲಿ ಎಲ್ಲ ಮತಕೇಂದ್ರಗಳಿಗೆ ಮತಯಂತ್ರಗಳನ್ನು ಸಿಬ್ಬಂದಿಗೆ ನೀಡಲಾಯಿತು. ಭದ್ರತೆಗೆ ನಿಯೋಜಿತಗೊಂಡ ಪೊಲೀಸರೊಂದಿಗೆ ಚುನಾವಣೆ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿ ಬಸ್, ಟೆಂಪೊ, ಟ್ರ್ಯಾಕ್ಸ್‌ಗಳಲ್ಲಿ ತಮಗೆ ನಿಗದಿ ಮಾಡಿದ ಸ್ಥಳಗಳಿಗೆ ತಲುಪಿದರು. ಜಿಲ್ಲೆಯಐದು ವಿಧಾನಸಭಾ ಕ್ಷೇತ್ರದ ಚುನಾವಣೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಬೆಳಿಗ್ಗೆ 7ಗಂಟೆಯಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದ್ದು, ಮತಗಟ್ಟೆಗಳಿಗೆ ಶುಕ್ರವಾರವೇ ತೆರಳಿ ಎಲ್ಲ ಸಿದ್ಧತೆಯನ್ನು ಸಿಬ್ಬಂದಿ ಮಾಡಿಕೊಂಡರು. ಬಹಿರಂಗ ಪ್ರಚಾರಕ್ಕೆ ಭಾನುವಾರವೇ ತೆರೆ ಬಿದ್ದಿದ್ದು, ಸೋಮವಾರ ಅಭ್ಯರ್ಥಿಗಳು ಮನೆ, ಮನೆಗೆ ತೆರಳಿ ಮತಯಾಚನೆ ಮಾಡುತ್ತಿರುವುದು ಕಂಡು ಬಂತು.

ADVERTISEMENT

ಮತದಾನಕ್ಕೆ ಕರ್ತವ್ಯಕ್ಕಾಗಿ ಎಂಟು ಕ್ಷೇತ್ರಗಳಿಂದ 435 ವಿವಿಧ ಮಾರ್ಗಗಳಲ್ಲಿ 215 ಕ್ರೂಸರ್, 256 ಕೆ.ಎಸ್.ಆರ್.ಟಿ.ಸಿ. ಬಸ್, 28 ಮ್ಯಾಕ್ಸಿ ಕ್ಯಾಬ್ ಹಾಗೂ 47 ಇತರ ವಾಹನಗಳು ಸೇರಿ 546 ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮತದಾನಕ್ಕೆ 2,479 ಬ್ಯಾಲೆಟ್ ಯೂನಿಟ್, 2,526 ಕಂಟ್ರೋಲ್ ಯೂನಿಟ್ ಹಾಗೂ 2,920 ವಿವಿ ಪ್ಯಾಟ್‌ಗಳನ್ನು ಒದಗಿಸಲಾಗಿದೆ.

ಮಾದರಿ ಮತಗಟ್ಟೆ:

ಚುನಾವಣೆ ವಿಶೇಷವಾಗಿ ಈ ಸಾರಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಾದರಿ ಮತಗಟ್ಟೆ, ‘ಸಖಿ‘ ಮತದಾನ ಕೇಂದ್ರ, ಅಂಗವಿಕಲರ ಮತಗಟ್ಟೆಯನ್ನು ತೆರೆಯಲಾಗಿದೆ. ಮಾದರಿ ಮತದಾನ ಕೇಂದ್ರದಲ್ಲಿ ಎಸಿ, ಕುಡಿಯುವ ನೀರು, ಸ್ವಚ್ಛತೆ, ಸುಖಾಸನಗಳು ಗಮನ ಸೆಳೆಯಲಿವೆ. ಸಖಿ ಮತದಾನ ಕೇಂದ್ರಗಳಲ್ಲಿ ಮಹಿಳೆಯರೇ ಕಾರ್ಯನಿರ್ವಹಿಸುತ್ತಾರೆ. ಕಳೆದ ಸಾರಿಯ ಪಿಂಕ್ ಮತಗಟ್ಟೆ ಕೇಂದ್ರದಲ್ಲಿ ಪಿಂಕ್ ಸೀರೆ ಧರಿಸಿ ಮಹಿಳಾ ಸಿಬ್ಬಂದಿ ಗಮನ ಸೆಳೆದಿದ್ದರು. ಈ ಸಾರಿ ಬಿಳಿಬಣ್ಣದ ಸೀರೆಯಲ್ಲಿ ಸಖಿ ಮತದಾನ ಕೇಂದ್ರ ಕಂಗೊಳಿಸಲಿದೆ.

ಅಂಗವಿಕಲ ಸ್ನೇಹಿ ಮತಗಟ್ಟೆಯಲ್ಲಿ ಅಂಗವಿಕಲರೇ ಕಾರ್ಯ ನಿರ್ವಹಿಸುವುದು ವಿಶೇಷವಾಗಿದೆ. ಇಲ್ಲಿ ಗಾಲಿ ಖುರ್ಚಿ, ವಾಹನದ ಮೂಲಕ ಅಂಗವಿಕಲ ಮತದಾರರನ್ನು ಕರೆತರುವುದು, ಅಂಧರಿಗೆ ಬ್ರೈಲ್‌ ಲಿಪಿ ಮತಪತ್ರ ಇರುವುದು ವಿಶೇಷವಾಗಿದೆ.

ಭದ್ರತೆಗೆ 3 ಸಾವಿರಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಚುನಾವಣೆ ವೀಕ್ಷಕರಾಗಿ ರಣವಿಜಯ್ ಅವರು ಕಾರ್ಯ ನಿರ್ವಹಿಸಲಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೇಣುಕಾ ಕೆ. ಸುಕುಮಾರ್ ನೇತೃತ್ವದಲ್ಲಿ ಕೇಂದ್ರದ ಸಿಐಎಸ್‌ಎಫ್ ಭದ್ರತಾ ಪಡೆ, ಗೋವಾ ವಿಶೇಷ ಪೊಲೀಸರು, ಸ್ಥಳೀಯ ಪೊಲೀಸ್, ಮೀಸಲು ಪಡೆ, ಹೋಂ ಗಾರ್ಡ್‌ಗಳು ಕಾರ್ಯ ನಿರ್ವಹಿಸಲಿದ್ದಾರೆ.

ಬ್ಯಾಗ್‌ ಮೇಲೆ ನಾಯಕರ ಚಿತ್ರ:

ಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾದ ಕೆಲವು ಸಿಬ್ಬಂದಿ ಮಸ್ಟ್‌ರಿಂಗ್ ಕೇಂದ್ರಕ್ಕೆ ಬಂದಾಗ ಅವರ ಚೀಲಗಳ ಮೇಲೆ ಕುಷ್ಟಗಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಕನಕಗಿರಿಯ ಶಿವರಾಜ ತಂಗಡಗಿ ಅವರ ಭಾವಚಿತ್ರಗಳು ಇದ್ದವು. ಮಸ್ಟ್‌ರಿಂಗ್ ಕೇಂದ್ರದಲ್ಲಿ ಚರ್ಚೆಯ ವಸ್ತುವಾಯಿತು. ಕಳೆದ ವರ್ಷ ಶಿಕ್ಷಕರ ಜಯಂತಿಯಂದು ನೀಡಿದ ಬ್ಯಾಗ್‌ಗಳನ್ನೇ ಶಿಕ್ಷಕರು ಕೇಂದ್ರಕ್ಕೆ ತಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.