ADVERTISEMENT

ಹೇಮಗುಡ್ಡ: ವೈಭವದ ಆನೆ ಅಂಬಾರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 6:53 IST
Last Updated 3 ಅಕ್ಟೋಬರ್ 2025, 6:53 IST
ವಿಜಯದಶಮಿ ಅಂಗವಾಗಿ ಗುರುವಾರ ಆನೆಗೊಂದಿ ಸಮೀಪದ ಆದಿಶಕ್ತಿ ದುರ್ಗಾದೇವಿ ಮೂರ್ತಿಯನ್ನು ಅಂಬಾರಿ ಮೇಲೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಗಣ್ಯರು ಇದ್ದರು
ವಿಜಯದಶಮಿ ಅಂಗವಾಗಿ ಗುರುವಾರ ಆನೆಗೊಂದಿ ಸಮೀಪದ ಆದಿಶಕ್ತಿ ದುರ್ಗಾದೇವಿ ಮೂರ್ತಿಯನ್ನು ಅಂಬಾರಿ ಮೇಲೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಗಣ್ಯರು ಇದ್ದರು   

ಗಂಗಾವತಿ: ಆಯುಧ ಪೂಜೆಯ ದಿನವಾದ ಬುಧವಾರ ತಾಲ್ಲೂಕಿನ ಹೇಮಗುಡ್ಡದಲ್ಲಿ ಆನೆಯ ಮೇಲೆ ದುರ್ಗಾ ಪರಮೇಶ್ವರಿ ದೇವಿಯ ಮೂರ್ತಿಯ ಮೆರವಣಿಗೆ ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು. ಈ ಜಂಬೂ ಸವಾರಿಗೆ ನೂರಾರು ಜನ ಸಾಕ್ಷಿಯಾದರು.

ಬೆಳಿಗ್ಗೆಯಿಂದಲೇ ದೇವಿಗೆ ವಿಶೇಷ ಪೂಜೆಗಳು ಜರುಗಿದವು. ನಂತರ ಪ್ರತಿವರ್ಷದಂತೆ ಈ ವರ್ಷವೂ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ 53 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವು.

ಕೆಲವರು ಹೇಮಗುಡ್ಡಕ್ಕೆ ಪಾದಯಾತ್ರೆ ನಡೆಸಿದ ದೃಶ್ಯಗಳು ಕಂಡು ಬಂದವು.

ADVERTISEMENT

ಹೇಮಗುಡ್ಡದಲ್ಲಿ ವಿದ್ಯುತ್ ದೀಪಗಳ ಹೊಳಪು, ತಳಿರು ತೋರಣ, ಬಾಳೆದಿಂಡು, ರಂಗೋಲಿ ಸೇರಿ ಜನರ ಕಣ್ಮನ ಸೆಳೆಯುವ ರೀತಿಯಲ್ಲಿ ಅಲಂಕಾರ ಮಾಡಲಾಗಿತ್ತು. ಸಂಜೆ ಅಂಬಾರಿ ಮೆರವಣಿಗೆ ಆರಂಭದಿಂದ ಅಂತ್ಯದವರೆಗೆ ಭಕ್ತರು ಜೈಕಾರ ಹಾಕಿದರು. ಹೂವಿನ ಮಳೆಗೆರೆದರು. 

ದುರ್ಗಾ ಪರಮೇಶ್ವರಿ ದೇವಿ ಮೂರ್ತಿ ಹೊತ್ತು ಸಾಗುತ್ತಿರುವ ಆನೆ ಅಂಬಾರಿ ಮೆರವಣಿಗೆಯ ಸುಂದರ ದೃಶ್ಯಗಳನ್ನು ಮೊಬೈಲ್ ಪೋನ್‌ಗಳಲ್ಲಿ ಜನರು ಸೆರೆ ಹಿಡಿದರು. ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.ಆನೆ ಮೇಲಿನ ದೇವಿಯ ಸುಂದರ ಅಲಂಕಾರ ನೋಡುಗರನ್ನು ಭಕ್ತಿ ಪರವಶರನ್ನಾಗಿ ಮಾಡಿತು.

ಮಾಜಿ ಸಂಸದ ಎಚ್.ಜಿ ರಾಮುಲು, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್ ಶ್ರೀನಾಥ, ಶಾಸಕ ಜಿ.ಜನಾರ್ದನರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೆಸೂಗೂರು, ಮಾಜಿ ಶಾಸಕ ಪರಣ್ಣ ಮುನವಳ್ಳಿ,‌ ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಮನೋಹರಗೌಡ ಸೇರಿ ನೂರಾರು ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

ಆನೆಗೊಂದಿ: ಸಂಭ್ರಮದ ಮೆರವಣಿಗೆ

ಗಂಗಾವತಿ:ವಿಜಯದಶಮಿ ನಿಮಿತ್ತ ಗುರುವಾರ ತಾಲ್ಲೂಕಿನ ಆನೆಗೊಂದಿ ಸಮೀಪದ ಆದಿಶಕ್ತಿ ದುರ್ಗಾದೇವಿ ದೇವ ಸ್ಥಾನದ ದುರ್ಗಾದೇವಿ ಮೂರ್ತಿಯನ್ನು ಆನೆ ಮೇಲೆ ಕೂರಿಸಿ ಸಂಭ್ರಮದಿಂದ ಮೆರವಣಿಗೆ ಮಾಡಲಾಯಿತು. ಬೆಳಿಗ್ಗೆ ದೇವಿಗೆ ಪಂಚಾಮೃತ ಅಭಿಷೇಕ ಕುಂಕುಮಾರ್ಚನೆ ಸಹಸ್ರ ನಾಮಾರ್ಚನೆ ಮಹಾ ಮಂಗಳಾರತಿ ಸೇರಿ ವಿವಿಧ ಪೂಜೆ ಕಾರ್ಯಕ್ರಮಗಳು ನೆರವೇರಿದವು. ನಂತರ ದೇವಸ್ಥಾನ ಆವರಣದಿಂದ 108 ಕುಂಭ ಕಳಸ ಹೊತ್ತು ಮಹಿಳೆಯರು ಮೆರವಣಿಗೆಯುದ್ದಕ್ಕೂ ಸಾಗಿದರು. ಮೆರವಣಿಗೆಯಲ್ಲಿ ವೀರಗಾಸೆ ಡೊಳ್ಳುಕುಣಿತ ಸೇರಿ ವಿವಿಧ ಕಲಾ ತಂಡಗಳು ನೃತ್ಯ ಪ್ರದರ್ಶನ ತೋರಿದವು. ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಆನೆಗೊಂದಿ ಗ್ರಾಮ ಸೇರಿ ಗ್ರಾಮದ ರಾಜ ಬೀದಿಗಳಲ್ಲಿ ಸಂಚಾರ ಮಾಡಿತು.ಮೆರವಣಿಗೆಗೆ ನೂರಾರು ಸಂಖ್ಯೆಯ ಭಕ್ತರು ಸಾಕ್ಷಿಯಾದರು. ದುರ್ಗಾದೇವಿ ದೇವಸ್ಥಾನದ ಬ್ರಹ್ಮಾನಂದ ಸ್ವಾಮೀಜಿ ರಾಜವಂಶಸ್ಥೆ ಲಲಿತರಾಣಿ ಶ್ರೀರಂಗದೇವರಾಯಲು ರಾಜ ಶ್ರೀಕೃಷ್ಣದೇವರಾಯ ರತ್ನಶ್ರೀ ಶ್ರೀರಂಗದೇವರಾಯಲು ಶಾಸಕ ಜಿ.ಜನಾರ್ದನರೆಡ್ಡಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ದುರ್ಗಾದೇವಿ ದೇವಸ್ಥಾನದ ಆಡಳಿತಾಧಿಕಾರಿ ರಾಜಣ್ಣಸ್ವಾಮಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.