ಕೊಪ್ಪಳ: ಜಿಲ್ಲಾಕೇಂದ್ರದ ಸಮೀಪದಲ್ಲಿ ತನ್ನ ಉಕ್ಕಿನ ಕಾರ್ಖಾನೆ ವಿಸ್ತರಿಸಲು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅನುಮತಿ ಲಭಿಸಿದೆ ಎಂದು ಬಲ್ಡೋಟಾ ಸಂಸ್ಥೆ ಹೇಳಿಕೊಂಡ ಬೆನ್ನಲ್ಲೇ ಸ್ಥಳೀಯ ಸಂಘಟನೆಗಳು ಹೋರಾಟ ತೀವ್ರಗೊಳಿಸಲು ನಿರ್ಧರಿಸಿವೆ.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಂಜೆ ತುರ್ತು ಸಭೆ ನಡೆಸಿದ ಕೊಪ್ಪಳ ಬಚಾವೊ ಆಂದೋಲನ ಸಮಿತಿ ಹಾಗೂ ಕೊಪ್ಪಳ ಪರಿಸರ ಹಿತರಕ್ಷಣಾ ಹೋರಾಟ ಪದಾಧಿಕಾರಿಗಳು ಈ ತೀರ್ಮಾನ ಕೈಗೊಂಡಿದ್ದಾರೆ.
ಸಮಿತಿ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ‘ಕಾರ್ಖಾನೆ ವಿಸ್ತರಣೆಗೆ ಪರಿಸರ ಸಚಿವಾಲಯದ ಅನುಮತಿ ಲಭಿಸಿದೆ ಎಂದು ಕಂಪನಿಯೇ ಹೇಳಿಕೊಂಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದ್ದರಿಂದ ಬಲ್ಡೋಟಾ ವಿರುದ್ಧದ ಹೋರಾಟ ತೀವ್ರಗೊಳಿಸುವ ಅಗತ್ಯವಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಉದಾರೀಕರಣ ನೆಪದಲ್ಲಿ ಕಾರ್ಪೊರೇಟ್ ಕಂಪನಿಗಳ ಪರವಾಗಿಯೇ ಲಾಬಿ ಮಾಡುತ್ತಿವೆ ಎನ್ನುವುದು ಸ್ಪಷ್ಟವಾಗುತ್ತಿದೆ’ ಎಂದರು.
ಸಮಿತಿ ಪದಾಧಿಕಾರಿ ಡಿ.ಎಚ್. ಪೂಜಾರ ಮಾತನಾಡಿ ‘ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಬೇಕು, ಜನಾಂದೋಲನವಾಗಿ ರೂಪಿಸಬೇಕು’ ಎಂದರು.
ಹೋರಾಟಗಾರ ಮಹಾಂತೇಶ ಕೊತಬಾಳ ‘ಜನಪ್ರತಿನಿಧಿಗಳು ಏನಾದರೂ ಮಾಡಲಿ. ನಾವು ಹೋರಾಟ ಮುಂದುವರೆಸೋಣ. ಗವಿಸಿದ್ಧೇಶ್ವರ ಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯನ್ನು ಮತ್ತೊಮ್ಮೆ ಆಹ್ವಾನಿಸೋಣ’ ಎಂದು ಹೇಳಿದರು.
ಕೊಪ್ಪಳ ಪರಿಸರ ಹಿತರಕ್ಷಣಾ ಹೋರಾಟ ಸಮಿತಿ ಸಂಚಾಲಕ ಶರಣಪ್ಪ ಸಜ್ಜನ ‘ಕೊಪ್ಪಳ ಬಂದ್ ವೇಳೆ ಗವಿಮಠದ ಸ್ವಾಮೀಜಿ ಜನಪ್ರತಿನಿಧಿಗಳಿಗೆ ಜವಾಬ್ದಾರಿ ನೀಡಿದ್ದಾರೆ. ಜನಪ್ರತಿನಿಧಿಗಳು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದಾರೆ. ಈಗ ಸ್ಥಳೀಯವಾಗಿ ಧರಣಿ ಮಾಡಿ ಮುಖ್ಯಮಂತ್ರಿ ಮತ್ತು ಸಚಿವರನ್ನು ಭೇಟಿಯಾಗಿ ಘಟಕ ವಿಸ್ತರಣೆ ರದ್ದತಿಗೆ ಆಗ್ರಹಿಸಬೇಕು’ ಎಂದು ಸಲಹೆ ನೀಡಿದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ, ಸಂಘಟನೆಯ ಪ್ರಮುಖರಾದ ಕೆ.ಬಿ.ಗೋನಾಳ, ಸೋಮರಡ್ಡಿ ಅಳವಂಡಿ, ರಮೇಶ ತುಪ್ಪದ, ಶಿವಕುಮಾರ ಕುಕನೂರ, ಶರಣು ಪಾಟೀಲ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.