ADVERTISEMENT

ಕೊಪ್ಪಳ | ಕವನ ವಾಚಿಸಿ ಹೋರಾಟಕ್ಕೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 7:38 IST
Last Updated 3 ನವೆಂಬರ್ 2025, 7:38 IST
ಕೊಪ್ಪಳದಲ್ಲಿ ನಡೆಯುತ್ತಿರುವ ಪರಿಸರ ಮಾಲಿನ್ಯ ಉಂಟುಮಾಡುವ ಕಾರ್ಖಾನೆಗಳ ವಿರುದ್ಧದ ಹೋರಾಟದಲ್ಲಿ ಭಾನುವಾರ ಹೋರಾಟಗಾರರು ಘೋಷಣೆಗಳನ್ನು ಕೂಗಿದರು
ಕೊಪ್ಪಳದಲ್ಲಿ ನಡೆಯುತ್ತಿರುವ ಪರಿಸರ ಮಾಲಿನ್ಯ ಉಂಟುಮಾಡುವ ಕಾರ್ಖಾನೆಗಳ ವಿರುದ್ಧದ ಹೋರಾಟದಲ್ಲಿ ಭಾನುವಾರ ಹೋರಾಟಗಾರರು ಘೋಷಣೆಗಳನ್ನು ಕೂಗಿದರು   

ಕೊಪ್ಪಳ: ಪರಿಸರ ಕಲುಷಿತ ಮಾಡುವ ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿ ಜಿಲ್ಲಾ ಬಚಾವೊ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ಸಮಿತಿ ನಗರದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಭಾನುವಾರ ಮೂರನೇ ದಿನಕ್ಕೆ ಕಾಲಿರಿಸಿದ್ದು, ಕವನಗಳನ್ನು ವಾಚನ ಮಾಡುವ ಮೂಲಕ ಕವಿಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಭಾನುವಾರ ಜೆಡಿಎಸ್ ಪ್ರಮುಖರು, ಕೊಪ್ಪಳದ ಸಾಹಿತಿಗಳು, ಬರಹಗಾರರು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಪರಿಸರ, ಆರೋಗ್ಯ, ಜೀವಪರವಾದ ಕವನಗಳನ್ನು ಕವಿಗಳಾದ ಈಶ್ವರ ಹತ್ತಿ, ಸಾವಿತ್ರಿ ಮುಜುಮದಾರ, ಪುಷ್ಪಲತಾ ಏಳುಭಾವಿ, ಮಹೇಶ ಮನ್ನಾಪೂರ, ಅಲ್ಲಮಪ್ರಭು ಬೆಟ್ಟದೂರು ವಾಚನ ಮಾಡಿದರು.

ಜೆಡಿಎಸ್‌ ರಾಜ್ಯ ಕೋರ್‌ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್‌ ಮಾತನಾಡಿ ‘ಜಿಲ್ಲೆಯ ಕಾಂಗ್ರೆಸ್ ಶಾಸಕರು ಮನಸ್ಸು ಮಾಡಿದರೆ ವಿಸ್ತರಣೆಗೆ ಮುಂದಾಗಿರುವ ಕಾರ್ಖಾನೆಗಳ ಕೆಲಸ ನಿಲ್ಲಿಸಬಹುದು. ಅವರು ಈ ಕೆಲಸ ಮಾಡಿದರೆ ಜನಪ್ರತಿನಿಧಿಗಳ ಮನೆಯ ತನಕ ಹೋಗಿ ದೀರ್ಘದಂಡ ನಮಸ್ಕಾರ ಹಾಕಿ ಅವರನ್ನು ಸನ್ಮಾನಿಸುತ್ತೇನೆ’ ಎಂದರು.

ADVERTISEMENT

ಜೆಡಿಎಸ್‌ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ ಶನಿವಾರ ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರು, ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಕರಿಯಪ್ಪ ಹಾಲವರ್ತಿ, ಜ್ಞಾನಬಂಧು ಶಿಕ್ಷಣ ಸಂಸ್ಥೆಯ ದಾನಪ್ಪ ಕವಲೂರು, ಕವಿಗಳಾದ ಮಾಲಾ ಬಡಿಗೇರ, ರವಿ ಕಾಂತನವರ, ಡಿ. ಎಂ. ಬಡಿಗೇರ, ಶಂಭುಲಿಂಗಪ್ಪ ಆರ್. ಹರಗೇರಿ, ಬಸವರಾಜ ಪೂಜಾರ, ಹೋರಾಟಗಾರರಾದ ಡಿ.ಎಚ್. ಪೂಜಾರ, ಮಂಜುನಾಥ ಗೊಂಡಬಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.