ADVERTISEMENT

ಕೊಪ್ಪಳದ ಕನಕಗಿರಿ ಜಾತ್ರೆ: ಗರುಡೋತ್ಸವಕ್ಕೆ ಹರಿದುಬಂದ ಜನಸಾಗರ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 3:25 IST
Last Updated 31 ಮಾರ್ಚ್ 2024, 3:25 IST
<div class="paragraphs"><p>ಗರುಡೋತ್ಸವಕ್ಕೆ ಹರಿದುಬಂದ ಜನಸಾಗರ</p></div>

ಗರುಡೋತ್ಸವಕ್ಕೆ ಹರಿದುಬಂದ ಜನಸಾಗರ

   

ಕನಕಗಿರಿ: ವಿಶಿಷ್ಟತೆಯಿಂದ ಕೂಡಿರುವ ಗರುಡೋತ್ಸವ (ಕಲ್ಯಾಣೋತ್ಸವ) ಕಾರ್ಯಕ್ರಮ ವೀಕ್ಷಿಸಲು ಭಾನುವಾರ ನಸುಕಿನ ಜಾವ ಇಲ್ಲಿ ಜನಸಾಗರವೇ ಹರಿದು ಬಂದಿತ್ತು.

ಇಲ್ಲಿನ ಕನಕಾಚಲಪತಿ ಮಹಾರಥೋತ್ಸವದ ಹಿಂದಿನ ದಿನ ವಿಜೃಂಭಣೆಯಿಂದ ನಡೆದ ಈ ಉತ್ಸವವನ್ನು ಭಕ್ತರು ರಾಜಬೀದಿಯ ಎರಡು‌ ಬದಿ, ಮನೆ,‌ ಮಾಳಿಗೆ‌ ಮೇಲೆ‌ ನಿಂತು ವೀಕ್ಷಿಸಿ ಭಕ್ತಿ ಸಮರ್ಪಿಸಿದರು.

ADVERTISEMENT

ಶನಿವಾರ ಬೆಳಿಗ್ಗೆಯಿಂದಲೇ ದೇಗುಲದ ಕಡೆ ಬಂದ ಜನತೆ ಕನಕಾಚಲಪತಿ ಸೇರಿದಂತೆ ಇತರೆ ದೇಗುಲಗಳ ಪ್ರಾಂಗಣ, ಆವರಣ, ಮನೆ, ಮಾಳಿಗೆ ಹಾಗೂ ರಾಜಬೀದಿಯ ಎರಡು ಬದಿಯಲ್ಲಿ ನಿಂತು ಗರುಡೋತ್ಸವದ ಮೆರವಣಿಗೆ ಸಂಭ್ರಮ ಕಣ್ತುಂಬಿಕೊಂಡರು.

ದೀವಟಗಿ, ಪಂಜಿನ ಬೆಳಕಿನಲ್ಲಿ ಕಂಗೊಳಿಸಿದ ಉತ್ಸವ ಗತ ವೈಭವವನ್ನು ಮೆಲುಕು ಹಾಕುವಂತೆ ಮಾಡಿ ಜನಮನ ಸೊರೆಗೊಂಡಿತು.

ಕನಕಾಚಲಪತಿ ಹಾಗೂ ಲಕ್ಷ್ಮೀ ಕಲ್ಯಾಣೋತ್ಸವ (ವಿವಾಹ) ನಸುಕಿನ ಜಾವ ನಡೆಯಿತು.

ಜಿಲ್ಲಾಧಿಕಾರಿ ನಲಿನ್ ಆತುಲ್ ದಂಪತಿ, ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಸೇರಿದಂತೆ ಅನೇಕ ಅಧಿಕಾರಿಗಳು ಪಾಲ್ಗೊಂಡಿದ್ದರು.

ಅರ್ಚಕರಿಂದ ವೇದ, ಆಗಮ ಮಂತ್ರ, ಘೋಷಣೆಗಳು ಮೊಳಗಿದವು. ಯುವಕ, ಯುವತಿಯರು, ಮಕ್ಕಳು ಹೊಸ ಬಟ್ಟೆ ಧರಿಸಿ ಬಹು ಉತ್ಸಾಹದಿಂದಲೆ ಭಾಗವಹಿಸಿದ್ದರು.

ಗರುಡೋತ್ಸವದ ಮುಂದೆ ಭಕ್ತರ ಕೈಯಲ್ಲಿದ್ದ ದೀವಟಗಿಯಲ್ಲಿ ಕರ್ಪೂರ, ಕೊಬ್ಬರಿ ತುಂಡುಗಳನ್ನು ಹಾಕಿ ದಹಿಸಿದರು. ಸೂರ್ಯೋದಯಕ್ಕಿಂತ ಮುಂಚೆ ಹಳದಿ ಬಣ್ಣದ ಗರುಡ ವಾಹನದ ಮೇಲೆ ಲಕ್ಷ್ಮೀ, ನರಸಿಂಹ ದೇವರ ಮೆರವಣಿಗೆಯಲ್ಲಿ ನೆರೆದ ಸಾವಿರಾರು ಭಕ್ತರು ಗೋವಿಂದ, ಗೋವಿಂದ ಎನ್ನುತ್ತಾ ದೇವರ ಸ್ಮರಣೆ ಮಾಡಿ ಮುಂದಕ್ಕೆ ಸಾಗಿದರು.

ಕನಕಾಚಲಪತಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ರಾಜಬೀದಿ ಮೂಲಕ ಎದುರು ಹನುಮಂತ ದೇವಸ್ಥಾನ ತಲುಪಿ ಮತ್ತೆ ದೇವಸ್ಥಾನಕ್ಕೆ ವಾಪಸ್ ಆಯಿತು. ಭಕ್ತರು ಬೃಹತ್ ಪ್ರಮಾಣದ ಹೂವಿನ ಹಾರ ಹಾಕಿ ಧನ್ಯತೆ ಮರೆದರು.

ಕೋಟೆ ಕ್ಯಾಂಪ್ ಮಹಿಳೆಯರ ಕೋಲಾಟ, ಬಾಜಾ ಭಜಂತ್ರಿ, ತಾಷ ಮೇಳ ಹಾಗೂ ವಿವಿಧ ವಾದ್ಯಗಳು ಗರುಡೋತ್ಸವಕ್ಕೆ ಮೆರುಗು ತಂದವು.

ಉದ್ಯಮಿ ಸತೀಶ ಸೂರ್ಯಬಾಬು ಅವರು ಮೆರವಣಿಗೆಗೆ ಬೆಳಕಿನ ವ್ಯವಸ್ಥೆ ಮಾಡಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಮಾಜಿ ಶಾಸಕ ಬಸವರಾಜ ದಢೇಸೂಗೂರ, ತಹಶೀಲ್ದಾರ್ ವಿಶ್ವನಾಥ ಮುರುಡಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಲೋಕಸಭೆ ಚುನಾವಣೆಯ ಅಭ್ಯರ್ಥಿಗಳಾದ ರಾಜಶೇಖರ ಹಿಟ್ನಾಳ, ಡಾ. ಬಸವರಾಜ ಕ್ಯಾವಟರ್ ( ಬಿಜೆಪಿ) ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಪಟ್ಟಣ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಆಗಮಿಸಿದ್ದರು.

ಹೈದರಾಬಾದ್, ಬೆಂಗಳೂರು, ಧಾರವಾಡ, ಬೀದರ್ ವಿಜಯನಗರ, ಕೊಪ್ಪಳ, ಹುಬ್ಬಳ್ಳಿ, ಬಳ್ಳಾರಿ, ದಾವಣಗೆರೆ, ಬೆಳಗಾವಿ, ಕಲಬುರಗಿ, ವಿಜಯಪುರ ಸೇರಿ ಅನೇಕ ಊರುಗಳಿಂದ ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.