ADVERTISEMENT

ನಕಲಿ ಅಂಕಪಟ್ಟಿ ಸಲ್ಲಿಕೆ: ಶಿಕ್ಷಕ ವಜಾ

ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮಗ್ಗದ ಆದೇಶ; 7 ವರ್ಷಗಳ ನಂತರ ಪ್ರಕರಣಕ್ಕೆ ತಾರ್ಕಿತ ಅಂತ್ಯ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 6:26 IST
Last Updated 29 ಜುಲೈ 2021, 6:26 IST

ಕುಷ್ಟಗಿ (ಕೊಪ್ಪಳ ಜಿಲ್ಲೆ): ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ತಾಲ್ಲೂಕಿನ ಮಿಟ್ಟಲಕೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಆರ್‌.ಗಂಗಾಧರಪ್ಪ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮಗ್ಗದ ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಗಂಗಾಧರಪ್ಪ 2002ರ ಆಗಸ್ಟ್ 13ರಿಂದ ಮಿಟ್ಟಲಕೋಡ ಶಾಲೆಯ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸತೊಡಗಿದರು. ನೇಮಕಾತಿ ವೇಳೆ ಅವರು ನೀಡಿದ್ದ ದಾಖಲೆಗಳಲ್ಲಿ ದ್ವಿತೀಯ ಪಿಯು ಅಂಕಪಟ್ಟಿ ನಕಲಿ ಎಂಬುದನ್ನು ಪಿಯು ಮಂಡಳಿ ದೃಢಪಡಿಸಿದ ನಂತರ ಶಿಕ್ಷಣ ಇಲಾಖೆಯು ಅವರನ್ನು ಶಿಕ್ಷಕ ಹುದ್ದೆಯಿಂದ 2014ರಲ್ಲಿ ವಜಾಗೊಳಿಸಿತು.

ತಡೆಯಾಜ್ಞೆ: ಶಿಕ್ಷಣ ಇಲಾಖೆ ಕ್ರಮ ಪ್ರಶ್ನಿಸಿ ಗಂಗಾಧರಪ್ಪ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೊರೆ ಹೋಗಿದ್ದರು. ಸೇವೆಯಿಂದ ವಜಾಗೊಳಿಸುವ ಮುನ್ನ ಅನುಸರಿಸಬೇಕಿದ್ದ ನಿಯಮಗಳನ್ನು ಇಲಾಖೆ ಪಾಲಿಸದಿರುವುದು ನಿಯಮ ಬಾಹಿರ ಎಂದು ಅಭಿಪ್ರಾಯಪಟ್ಟ ಮಂಡಳಿ ವಜಾ ಆದೇಶಕ್ಕೆ ತಡೆಯಾಜ್ಞೆ ನೀಡಿತು. ನಂತರ ಮತ್ತೆ ಶಿಕ್ಷಕ ಹುದ್ದೆಯ ಕರ್ತವ್ಯಕ್ಕೆ ಹಾಜರಾಗಲು ಶಿಕ್ಷಣ ಇಲಾಖೆ ಗಂಗಾಧರಪ್ಪ ಅವರಿಗೆ ಆದೇಶಿಸಿತು.

ADVERTISEMENT

ನಂತರ ತನಿಖೆ ನಡೆಸಿ ಆರೋಪಪಟ್ಟಿ ಸಿದ್ಧಪಡಿಸಿದ್ದ ಶಿಕ್ಷಣ ಇಲಾಖೆ ಶಿಕ್ಷಕ ಗಂಗಾಧರಪ್ಪ ಅವರಿಗೆ ಆರೋಪ ಪಟ್ಟಿಯನ್ನು ಸಲ್ಲಿಸಿ ಹೇಳಿಕೆ ನೀಡುವಂತೆ ಸೂಚಿಸಿತ್ತು. ಆದರೆ, ಗಂಗಾಧರಪ್ಪ ಆರೋಪವನ್ನು ನಿರಾಕರಿಸಿದ್ದರು. ನಂತರ ನಡೆದ ವಿಚಾರಣೆ ವೇಳೆ ಗಂಗಾಧರಪ್ಪ ಅವರ ಮೇಲಿನ ಆರೋಪ ಸಾಬೀತಾಗಿದ್ದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೇವೆಯಿಂದ ವಜಾಗೊಳಿಸಿದ್ದರು.

ಈ ಕುರಿತು ಮತ್ತೆ ವಿಚಾರಣೆ ನಡೆಸಿದ ಮಂಡಳಿ ‘ಅಂತಿಮ ಆದೇಶ ಹೊರಡಿಸುವ ಮುನ್ನ ಎರಡನೇ ಬಾರಿ ಕಾರಣ ಕೇಳುವ ನೋಟಿಸ್‌ ಜಾರಿ ಮಾಡದೇ ಸೇವೆಯಿಂದ ವಜಾಗೊಳಿಸಲಾಗಿದೆ’ ಎಂದು ಶಿಕ್ಷಣ ಇಲಾಖೆಯ ಆದೇಶವನ್ನು ಅನೂರ್ಜಿತಗೊಳಿಸಿತ್ತು.

‘ಶಿಕ್ಷಕ ಗಂಗಾಧರಪ್ಪ ಅವರಿಗೆ ಮತ್ತೆ ಕಾರಣ ಕೇಳುವ ನೋಟಿಸ್‌ ಜಾರಿ ಮಾಡಿದ ಇಲಾಖೆ ಅವರಿಂದ ಪಡೆದ ಲಿಖಿತ ಹೇಳಿಕೆಯನ್ನು ಪರಿಶೀಲನೆಗೆ ಒಳಪಡಿಸಿತ್ತು. ಆದರೆ, ಶೋಕಾಸ್‌ ನೋಟಿಸ್‌ಗೆ ಗಂಗಾಧರಪ್ಪ ನೀಡಿದ ಹೇಳಿಕೆ ಸಮಂಜಸವಾಗಿಲ್ಲ ಮತ್ತು ನೇಮಕಾತಿ ಸಂದರ್ಭದಲ್ಲಿ ಸಲ್ಲಿಸಿದ್ದ ದ್ವಿತೀಯ ಪಿಯು ಅಂಕಪಟ್ಟಿ ನಕಲಿಯಾಗಿದ್ದು ಶಿಕ್ಷಣ ಇಲಾಖೆಯನ್ನು ವಂಚಿಸಿರುವುದು ರುಜುವಾತಾಗಿದೆ. ಈ ಕಾರಣಕ್ಕೆ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) 1957ರ ನಿಯಮ 8(8)ರ ಅನ್ವಯ ಜುಲೈ 27 ರಿಂದ ಜಾರಿಗೆ ಬರುವಂತೆ ಗಂಗಾಧರಪ್ಪ ಅವರನ್ನು ಶಿಕ್ಷಕ ಸೇವೆಯಿಂದ ವಜಾಗೊಳಿಸಲಾಗಿದೆ’ ಎಂದುಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮಗ್ಗದ ಆದೇಶ ಹೊರಡಿಸಿದ್ದಾರೆ.

ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವುದಕ್ಕೆ ಸುಮಾರು ಏಳು ವರ್ಷ ಸಮಯ ತೆಗೆದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.