ADVERTISEMENT

ಕೊಪ್ಪಳ| ಕೇಂದ್ರದಿಂದ ರೈತ, ಕಾರ್ಮಿಕ ವಿರೋಧಿ ನೀತಿ: ಎಸ್. ವರಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 5:36 IST
Last Updated 3 ಫೆಬ್ರುವರಿ 2026, 5:36 IST
ಕೊಪ್ಪಳದಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಸಮಾವೇಶದಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ಮಾತನಾಡಿದರು
ಕೊಪ್ಪಳದಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಸಮಾವೇಶದಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ಮಾತನಾಡಿದರು   

ಕೊಪ್ಪಳ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಹಾಗೂ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದು, ಬಂಡವಾಳಷಾಹಿಗಳ ಪರ ನಿಂತಿವೆ. ಇದರಿಂದ ಕಾರ್ಮಿಕರು ಬೀದಿ ಪಾಲಾಗುವ ಸಂಕಷ್ಟ ಎದುರಾಗಿದೆ’ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ಹೇಳಿದರು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಫೆ. 12ರಂದು ಅಖಿಲ ಭಾರತ ಮಟ್ಟದಲ್ಲಿ ಮುಷ್ಕರ ನಡೆಯಲಿದ್ದು, ಪೂರ್ವಭಾವಿಯಾಗಿ ಸೋಮವಾರ ನಗರದ ಸಾಹಿತ್ಯ ಭವನದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಾಗೂ ಸಂಯುಕ್ತ ಹೋರಾಟ ಕರ್ನಾಟಕದ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ‘ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ದೇಶದ ಕೇವಲ 167 ಶ್ರೀಮಂತರಿಗೆ ಭಾರಿ ಸಬ್ಸಿಡಿ ನೀಡಲಾಗುತ್ತಿದ್ದು, ಸಾಮಾನ್ಯ ಜನರಿಗೆ ಯಾವುದೇ ನೆರವು ದೊರೆಯುತ್ತಿಲ್ಲ. ಜನವಿರೋಧಿ ಆದೇಶಗಳನ್ನು ಜಾರಿಗೊಳಿಸಲಾಗುತ್ತಿದೆ. ಮುಷ್ಕರ ನಡೆಸಬೇಕಾದರೆ 60 ದಿನಗಳ ಮುಂಚಿತ ನೋಟಿಸ್ ನೀಡುವಂತೆ ನಿಯಮ ಜಾರಿಯಲ್ಲಿದೆ’ ಎಂದರು.

‘ಮುಷ್ಕರದ ಸಂದರ್ಭದಲ್ಲಿ ರೈತರಿಗೆ ದಂಡ, ಜೈಲು ಶಿಕ್ಷೆ, ಕಾರ್ಮಿಕರಿಗೆ ಸಂಬಳ ಕಡಿತದಂತಹ ಕಾನೂನುಗಳನ್ನು ತರುತ್ತಿದ್ದಾರೆ. ಮನರೇಗಾ ಕಾಯ್ದೆಯನ್ನು ಹಕ್ಕಿನಿಂದ ಯೋಜನೆಯಾಗಿ ಪರಿವರ್ತಿಸಲಾಗುತ್ತಿದೆ. ಎಲ್‌ಐಸಿಯನ್ನು ಖಾಸಗೀಕರಣದತ್ತ ಒಯ್ಯಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

ADVERTISEMENT

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ವಿರೋಧಿ ಕಾರ್ಮಿಕ ಕೋಡ್‌ಗಳನ್ನು ತಕ್ಷಣವೇ ರದ್ದು ಪಡಿಸಬೇಕು. ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಮುಖಂಡ ಬಸವರಾಜ ಶೀಲವಂತರ ಮಾತನಾಡಿ ‘ರೈತರ ಹಕ್ಕಿಗಾಗಿ ದೆಹಲಿಯಲ್ಲಿ ನಡೆದ ಐತಿಹಾಸಿಕ ರೈತ ಚಳವಳಿಯಲ್ಲಿ ಭಾಗವಹಿಸಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು ಹಾಗೂ ಕಾರ್ಮಿಕರ ಹಿತದ ಬದಲು ದ್ರೋಹ ಮಾಡುತ್ತಿವೆ’ ಎಂದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಹುಸೇನಪ್ಪ ಕೆ., ಮುಖಂಡರಾದ ಸುಂಕಪ್ಪ ಗದಗ, ಬಸವೇಶ್ವರ ಕಂಠಿ, ಮಂಜುನಾಥ ಡಗ್ಗಿ, ಚಂದ್ರಶೇಖರ್ ಗೌಡ, ಅಮರೇಶ ಡಾಣಿ,  ಗಿರಿಜಮ್ಮ, ಪದ್ಮಾವತಿ, ಗಂಗಮ್ಮ ಕೃಷ್ಣಪ್ಪ, ಆರ್.ಕೆ. ದೇಸಾಯಿ, ಕೆ.ಬಿ. ಗೋನಾಳ, ಎಂ.ಬಿ. ನಾಡಗೌಡ್ರು, ಕಲಾವತಿ, ಚಂದ್ರಪ್ಪ ಹೊಸಕೇರಾ, ಹನುಮೇಶ ಕಲ್ಮಂಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ರೈತರ ಹೋರಾಟಗಳಿಗೆ ಸಂಪೂರ್ಣ ಬೆಂಬಲವಿದೆ. ಕೊಪ್ಪಳ ಸುತ್ತಮುತ್ತ ಕೈಗಾರಿಕೆಗಳು ಸ್ಥಾಪನೆಯಾಗುತ್ತಿರುವುದರಿಂದ ರೈತರ ಬದುಕು ಅಪಾಯದಲ್ಲಿದೆ. ಸ್ವಾಮಿನಾಥನ್ ವರದಿ ಜಾರಿಗೆ ಸರ್ಕಾರ ವಿಫಲವಾಗಿದೆ.
ಅಲ್ಲಮಪ್ರಭು ಬೆಟ್ಟದೂರು ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.