ADVERTISEMENT

ಕೊಪ್ಪಳ: ಉಚಿತವಾಗಿ ರಸಗೊಬ್ಬರ ಕೊಟ್ಟರೂ ಬೇಡವಂತೆ!

ಪ್ರಮೋದ ಕುಲಕರ್ಣಿ
Published 4 ಆಗಸ್ಟ್ 2025, 7:08 IST
Last Updated 4 ಆಗಸ್ಟ್ 2025, 7:08 IST
<div class="paragraphs"><p>ಕೊಪ್ಪಳದ ಸೌಮ್ಯ ಪಾಟೀಲ ಹಾಗೂ ರಾಜೇಶ ಪಾಟೀಲ ದಂಪತಿ</p></div>

ಕೊಪ್ಪಳದ ಸೌಮ್ಯ ಪಾಟೀಲ ಹಾಗೂ ರಾಜೇಶ ಪಾಟೀಲ ದಂಪತಿ

   

ಮುಂಗಾರಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ರೈತರು ಯೂರಿಯಾ ಸೇರಿದಂತೆ ಅನೇಕ ರಾಸಾಯನಿಕ ಗೊಬ್ಬರಗಳಿಗೆ ನಿತ್ಯ ಸರತಿಯಲ್ಲಿ ನಿಂತಿದ್ದರು. ರಾತ್ರಿ ಪೂರ್ತಿ ಸೊಸೈಟಿಗಳ ಮುಂದೆ ಮಲಗಿದ್ದರು. ಗೊಬ್ಬರ ಸಿಗದ ಕಾರಣಕ್ಕೆ ಹತಾಶೆಗೊಂಡ ರೈತರೊಬ್ಬರು ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೇಂದ್ರ ಸರ್ಕಾರದಿಂದ ರಸಗೊಬ್ಬರ ಕಂಪನಿಗಳಿಗೆ ಕೋಟಿಗಟ್ಟಲೇ ಮೊತ್ತದ ಸಬ್ಸಿಡಿ ಸಿಗುತ್ತದೆ. ಆದರೆ, ನೆಲ, ಜಲ,ಪರಿಸರ ಸಂರಕ್ಷಣೆ ಮಾಡುವ ಸಾವಯವ ವಿಧಾನ ಅಳವಡಿಸಿಕೊಳ್ಳುವ ರೈತರಿಗೆ ಮಾತ್ರ ಸಿಕ್ಕಿದ್ದು ಸೊನ್ನೆ. ಎರೆಗೊಬ್ಬರ ಘಟಕದಂಥ ಪ್ರಾಚೀನ ಯೋಜನೆಗಳಿಗೆ ಕಿಲುಬು ಕಾಸಿನ ಸಬ್ಸಿಡಿ ನೀಡಲಾಗುತ್ತಿದ್ದು, ಅದೂ ಅಸಲಿ ರೈತರಿಗೆ ತಲುಪುತ್ತಿಲ್ಲ ಎಂಬುದು ದುರಂತ.

ADVERTISEMENT

ಸರ್ಕಾರಗಳು ರಾಸಾಯನಿಕ ಗೊಬ್ಬರಕ್ಕೆ ಮಣೆ ಹಾಕುತ್ತಿರುವ ಕಾಲಘಟ್ಟದಲ್ಲಿಯೂ ಜಿಲ್ಲೆಯ ಕೆಲವು ರೈತರು ’ನಮಗೆ ಉಚಿತವಾಗಿ ರಸಗೊಬ್ಬರ ಕೊಟ್ಟರೂ ಬೇಡ’ ಎಂದು ದೂರ ಉಳಿದು ಸಾವಯವ ಕೃಷಿಗೆ ಜೈ ಎಂದು ಕೃಷಿ ಜೊತೆಗೆ ಅನ್ನ ನೀಡುವ ಭೂಮಿಯನ್ನು ಉಳಿಸಿದ್ದಾರೆ. ಅಂಥ ಸಾವಯವ ಕೃಷಿಕರ ಸಾಧನೆಯ ಪರಿಚಯ ಇಲ್ಲಿದೆ.  

ಸಾವಯವದಲ್ಲಿಯೇ ಸರ್ವ ಕೃಷಿ

ಕೊಪ್ಪಳದ ಸೌಮ್ಯ ಪಾಟೀಲ ಹಾಗೂ ರಾಜೇಶ ಪಾಟೀಲ ದಂಪತಿ ಜಿಲ್ಲಾಕೇಂದ್ರದ ಸಮೀಪದ ಮಾದಿನೂರು ಗ್ರಾಮದ ಬಳಿ ಒಂಬತ್ತು ಎಕರೆ ಜಮೀನು ಹೊಂದಿದ್ದು ಸರ್ವ ಕೃಷಿ ಚಟುವಟಿಕೆಗೂ ಸಾವಯವ ಗೊಬ್ಬರಗಳೇ ಜೀವಾಳವಾಗಿದೆ.

ಒಟ್ಟು ಜಮೀನಿನ ಮೂರು ಎಕರೆಯಲ್ಲಿ ಸೀತಾಫಲ, ನುಗ್ಗೇಕಾಯಿ, ನಿಂಬೆ, ಕರಿಬೇವು, ಸುತ್ತಲೂ ಬಿದಿರು ಬೆಳೆದಿದ್ದಾರೆ. ಇನ್ನುಳಿದ ಭೂಮಿಯಲ್ಲಿ ಮುಂಗಾರು ಆಧಾರಿತವಾಗಿ ಹೆಸರು, ಕಡಲೆ ಬೆಳೆದಿದ್ದಾರೆ. ಈ ದಂಪತಿಯ ಕೃಷಿ ಚಟುವಟಿಕೆಗೆ ಹೊಲದಲ್ಲಿ ಉಳಿಯುವ ಕಳೆ, ಗೋಮೂತ್ರ, ಬೇವಿನ ಎಣ್ಣೆ, ಜೀವಾಮೃತವೇ ರಸಗೊಬ್ಬರ.

ಈ ಎಲ್ಲ ಗೊಬ್ಬರವನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ಇದರಿಂದ ಉತ್ತಮ ಫಸಲಿನ ಜೊತೆಗೆ ಭೂಮಿಯ ಫಲವತ್ತತೆಯೂ ಉಳಿಯಲು ಸಾಧ್ಯವಾಗುತ್ತಿದೆ. ಸಾವಯವ ಗೊಬ್ಬರ ಬಳಕೆಯಿಂದ ಬಿಸಿಲಿನ ಕಾಲದಲ್ಲಿಯೂ ಭೂಮಿ ತಂಪಾಗಿಸುತ್ತದೆ. ಸೂಕ್ಷಾಣು ಜೀವಿಗಳು ಕೆಲಸ ಮಾಡುತ್ತವೆ.

‘ಸಾವಯವ ಕೃಷಿಯಿಂದ ಹೆಚ್ಚು ಲಾಭವಿದೆ. ರೈತರಿಗೆ ಲಾಭ ಬರುವ ತನಕ ಕಾಯುವ ತಾಳ್ಮೆ ಬೇಕಷ್ಟೇ. ರಾಸಾಯನಿಕ ಗೊಬ್ಬರಕ್ಕೆ ಸರ್ಕಾರ ನೀಡುವಷ್ಟು ಪ್ರೋತ್ಸಾಹ ಸಾವಯವ ಕೃಷಿಕರಿಗೂ ನೀಡಿದ್ದರೆ ಭೂಮಿ ಸತ್ವ ಹೆಚ್ಚಾಗುತ್ತಿತ್ತು. ಭೂಮಿ ಹಾಳು ಮಾಡುವ ರಾಸಾಯನಿಕಕ್ಕೆ ಪ್ರೋತ್ಸಾಹ ನೀಡುವಂತೆ ಎಪಿಎಂಸಿಯಲ್ಲಿಯೇ ಸಾವಯವ ಗೊಬ್ಬರಗಳ ಮಾರಾಟಕ್ಕೆ ಅವಕಾಶ ಕೊಡಬೇಕು, ಬೆಂಬಲ ಬೆಲೆ ನೀಡಬೇಕು’ ಎಂದು ಸೌಮ್ಯ ಪಾಟೀಲ ಆಗ್ರಹಿಸುತ್ತಾರೆ.

ಎರೆಹುಳವೇ ಯೂರಿಯಾದಂತೆ

ಕೊಪ್ಪಳ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ಅತಿಥಿ ಶಿಕ್ಷಕ ಹಾಗೂ ಸಾವಯವ ಕೃಷಿಕ ದೇವರಾಜ ಮೇಟಿ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಮೊದಲು ರಾಸಾಯನಿಕ ಗೊಬ್ಬರಗಳನ್ನು ಬಳಸಿ ಕೃಷಿ ಮಾಡುತ್ತಿದ್ದರು. ಭೂಮಿ ಫಲವತ್ತತೆ ಕ್ರಮೇಣ ಹಾಳಾಗುತ್ತಿರುವುದನ್ನು ಗಮನಿಸಿ ಐದು ವರ್ಷಗಳ ಹಿಂದೆ ಸಾವಯವ ಕೃಷಿಯ ಮೊರೆ ಹೋದರು.     

ಆಕಳ ಮೂತ್ರ, ಸೆಗಣಿ, ಎರೆಹುಳು ಗೊಬ್ಬರ, ಜೀವಾಮೃತವೇ ಇವರ ಜಮೀನಿಗೆ ಜೀವಜಲ ಇದನ್ನು ಬಳಸಿಕೊಂಡೇ ಲಿಂಬೆ, ಪೇರಲ, ಸಜ್ಜೆ, ಮೆಣಸಿನಕಾಯಿ, ತೆಂಗು, ಬದನೇಕಾಯಿ ಹಾಗೂ ಅನೇಕ ತರಕಾರಿ ಬೆಳೆಗಳನ್ನು ಬೆಳೆದಿದ್ದಾರೆ. ಸಜ್ಜೆಗೂ ರಾಸಾಯನಿಕ ಗೊಬ್ಬರದ ಸೋಂಕು ತೋರಿಸಿಲ್ಲ. ಇವರಿಗೆ ಎರೆಹುಳುವೇ ಯೂರಿಯಾದಂತೆ.

‘ಸ್ವಲ್ಪ ಬೆಳೆ ಬಾಡಿದರೆ ಸಾಕು ರೈತರು ರಾಸಾಯನಿಕ ಗೊಬ್ಬರದ ಮೊರೆ ಹೋಗುತ್ತಾರೆ. ಇದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತದೆ. ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕರಷ್ಟೇ ಸಾಕು ಎಂದು ಯೋಚಿಸಿದರೆ ಕೆಲ ವರ್ಷಗಳಲ್ಲಿ ಭೂಮಿಯಲ್ಲಿ ಸತ್ವವೇ ಇರುವುದಿಲ್ಲ. ಸಾವಯವ ಕೃಷಿ ಮಾಡುತ್ತಲೂ ಆದಾಯ ಗಳಿಸಬೇಕು. ಈ ರೀತಿಯ ಕೃಷಿಕರಿಗೆ ಸರ್ಕಾರ ಪ್ರೋತ್ಸಾಹಧನ ನೀಡಬೇಕು’ ಎಂದು ದೇವರಾಜ ಮೇಟಿ ಹೇಳುತ್ತಾರೆ.

‘ಕೋಟಿ ಕೊಟ್ಟರೂ ರಾಸಾಯನಿಕದ ಗೊಡವೆ ಬೇಡ’

ಕೊಪ್ಪಳ ತಾಲ್ಲೂಕಿನ ಕಾಮನೂರು ಗ್ರಾಮದ ಸಾವಯವ ಕೃಷಿಕ ಮಲ್ಲಪ್ಪ ಕಾಮನೂರು ಒಂದು ಎಕರೆ ಜಮೀನು ಹೊಂದಿದ್ದು ಮಿಶ್ರ ಕೃಷಿಯಲ್ಲಿ ಬಂಪರ್‌ ಫಸಲು ಪಡೆಯುತ್ತಿದ್ದಾರೆ. ಮಾವು, ನೇರಳೆ, ಸೀತಾಫಲ, ಪೇರಲ, ಅಂಜೂರ್‌, ಟೊಮೆಟೊ, ಮೆಣಸಿನಕಾಯಿ, ತೊಗರಿ, ಬಳ್ಳಿ ಆಲೂಗಡ್ಡೆ ಹಾಗೂ ಮನೆಗೆ ಬೇಕಾಗುವಷ್ಟು ತರಕಾರಿ ಬೆಳೆಯುತ್ತಿದ್ದಾರೆ.

ಜಮೀನಿನ ಒಳಗೆ ಹೊರಗಿನಿಂದ ಬರುವ ಕೀಟಗಳನ್ನು ನಿಯಂತ್ರಿಸಲು ಬಳ್ಳಿ ಹಬ್ಬಿಸುವ ತಂತ್ರ ಮಾಡುತ್ತಾರೆ. ಬೆಳೆಗೆ ರೋಗದ ಭೀತಿ ಕಾಡಿದರೆ ಬೇವಿನ ಎಣ್ಣೆ, ಗಂಜಲ, ಗೋ ಕೃಪಾಮೃತ ಮಿಶ್ರಣ ಮಾಡಿ ಔಷಧ ಸಿಂಪಡಣೆ ಮಾಡುತ್ತಾರೆ. ರಾಸಾಯನಿಕ ಗೊಬ್ಬರ ಸಿಂಪಡಣೆಯ ಗೊಡವೆಗೂ ಹೋಗುವುದಿಲ್ಲ. ಸಾವಯವ ಮಾದರಿಯ ಕೃಷಿಯ ಫಸಲಿಗೆ ಉತ್ತಮ ಬೇಡಿಕೆಯೂ ಇದೆ.  

‘ರಾಸಾಯನಿಕ ಗೊಬ್ಬರ ಬಳಕೆಯಿಂದ ಬೆಳೆಗಳಿಗೆ ಹಾಗೂ ಭೂಮಿಗೆ ಹಾನಿಯಾಗುತ್ತದೆ. ಇದರ ಬಳಕೆಯಿಂದ ರೋಗವನ್ನು ನಾವೇ ಆಹ್ವಾನಿಸಿಕೊಂಡಂತೆ ಆಗುತ್ತದೆ. ಉಚಿತವಾಗಿ ಯೂರಿಯಾ ಸೇರಿದಂತೆ ಯಾವುದೇ ರಾಸಾಯನಿಕ ಗೊಬ್ಬರ ಕೊಟ್ಟರೂ ಜಮೀನಿಗೆ ಹಾಕುವುದಿಲ್ಲ’ ಎಂದು ಮಲ್ಲಪ್ಪ ಹೇಳಿದರು.

ಸಾವಯವ ಕೃಷಿಕ ದೇವರಾಜ ಮೇಟಿ ಅವರ ಜಮೀನಿನಲ್ಲಿ ನಿಂಬೆ ಕೃಷಿ
ಕೊಪ್ಪಳ ತಾಲ್ಲೂಕಿನ ಕಾಮನೂರು ಗ್ರಾಮದಲ್ಲಿರುವ ಮಲ್ಲಪ್ಪ ಅವರ ಸಾವಯವ ತೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.