ADVERTISEMENT

ಗಂಗಾವತಿ: ಫೋನ್ ಕರೆಯಿಂದ ಬಯಲಾದ ವಕೀಲನ ತಂದೆಯ ಕೊಲೆ ಸಂಚು

ತನ್ನನ್ನು ಕರೆತಂದ ವಕೀಲನಿಗೇ ಚಾಕು ಇರಿತ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2022, 7:48 IST
Last Updated 20 ನವೆಂಬರ್ 2022, 7:48 IST
   

ಗಂಗಾವತಿ: ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ತನ್ನ ತಂದೆಯನ್ನು ಕೊಲೆ ಮಾಡಲು ಬೆಂಗಳೂರಿನಿಂದ ಕಾರು ಚಾಲಕರ ನೆಪದಲ್ಲಿ ಇಬ್ಬರು ಹಂತಕರನ್ನು ವ್ಯಕ್ತಿಯೊಬ್ಬರು ಕರೆತರುತ್ತಿದ್ದ ಸಂದರ್ಭದಲ್ಲೇ ಅವರು ತಮ್ಮನ್ನು ಕರೆ ತರುತ್ತಿದ್ದ ವ್ಯಕ್ತಿಗೆ ಹಲ್ಲೆ ಮಾಡಿ ಗಾಯಗೊಳಿಸಿ ಹಣದೊಂದಿಗೆ ಪರಾರಿಯಾದ ಘಟನೆ ನಡೆದಿದೆ.

ಗಾಯಗೊಂಡಿದ್ದ ವಕೀಲ ಯೋಗೇಶ ದೇಸಾಯಿ ಎಂಬುವವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ವಿಚಾರಣೆ ನಡೆಸಿದಾಗ ಅವರು ತನ್ನ ತಂದೆಯನ್ನು ಆಸ್ತಿಗಾಗಿ ಕೊಲೆ ಮಾಡಲು ಸಂಚು ರೂಪಿಸಿದ್ದ ಸಂಗತಿ ಹೊರಬಿದ್ದಿದೆ.

ಯೋಗೇಶ ದೇಸಾಯಿ ಮೊದಲು ಬೆಂಗಳೂರಿನ ಯಶವಂತಪುರದ ನಿವಾಸಿ ಎಂದು ಹೇಳಿದ್ದು, ತನಿಖೆ ಬಳಿಕ ಕೊಪ್ಪಳ ಜಿಲ್ಲೆಯ ಕವಲೂರು ಗ್ರಾಮದ ನಿವಾಸಿ ಎಂದು ಗೊತ್ತಾಗಿದೆ.

ADVERTISEMENT

ನಡೆದಿದ್ದೇನು: ಪೊಲೀಸರು ಜಯನಗರದಲ್ಲಿ ರಾತ್ರಿ ಗಸ್ತು ತಿರುಗುವಾಗ ಕಾರಿನಲ್ಲಿ ಬಂದ ಮೂವರ ಪೈಕಿ ಒಬ್ಬನನ್ನು ಇನ್ನಿಬ್ಬರು ಸೇರಿ ಚಾಕುವಿನಿಂದ ತಿವಿದು ರಸ್ತೆ ಮಧ್ಯದಲ್ಲಿ ಬಿಟ್ಟು ಹೋಗಿರುತ್ತಾರೆ. ಇದನ್ನು ನೋಡಿದ ಪೊಲೀಸರು ಗಾಯಗೊಂಡಿದ್ದ ಯೋಗೇಶ ಅವರನ್ನು ಆಸ್ಪತ್ರೆಗೆ ಸೇರಿಸಿ ಬೆಳಿಗ್ಗೆ ವಿಚಾರಣೆ ನಡೆಸುತ್ತಾರೆ.

ಯೋಗೇಶ ತನ್ನ ಕಾರು ನಡೆಸಲು ಚಾಲಕ ಬೇಕಾಗಿದ್ದಾರೆ ಎಂದು ಹೇಳಿ ಸೋಹಾನ್ ಎಂಬ ಕಾರು ಚಾಲಕನನ್ನು ಕರೆದುಕೊಂಡು ನ. 15ಕ್ಕೆ ಕೊಪ್ಪಳಕ್ಕೆ ಕರೆದುಕೊಂಡು ಬಂದಿದ್ದರು. ಜೊತೆಗೆ ಚಾಲಕನ ಸ್ನೇಹಿತ ಕೂಡ ಇದ್ದ.

ಬೆಂಗಳೂರಿನಿಂದ ಬರುವಾಗ ಯೋಗೇಶ ₹ 1.5 ಲಕ್ಷ, ₹ 5 ಸಾವಿರ ಹಾಗೂ ನ.16 ಹಗರಿಬೊಮ್ಮನಹಳ್ಳಿಯಲ್ಲಿ ಮತ್ತೆ ₹ 1.5 ಲಕ್ಷ ಹಣ ತೆಗೆದುಕೊಂಡು ಆನೆಗೊಂದಿ, ಮಲ್ಲಾಪುರದ ಪ್ರತ್ಯಾಂಗ ದೇವಸ್ಥಾನದಲ್ಲಿ ಉಳಿದುಕೊಂಡಿದ್ದರು. ನ. 17ರ ರಾತ್ರಿ ಸೋಹನ್ ಹಾಗೂ ಆತನ ಸ್ನೇಹಿತ ಸೇರಿ ಯೋಗೇಶ ಅವರಿಗೆ ಚಾಕುವಿನಿಂದ ತಿವಿದು ₹ 3 ಲಕ್ಷ ದೋಚಿ ಪರಾರಿಯಾಗಿದ್ದಾರೆ ಎಂದು ಮೊದಲು ಹೇಳಿಕೆ ನೀಡಲಾಗಿತ್ತು.

ಈ ಕುರಿತು ಪೊಲೀಸರು ಯೋಗೇಶ ಅವರನ್ನು ವಿಚಾರಣೆ ನಡೆಸುವ ವೇಳೆ ಬಂದ ಫೋನ್ ಕರೆ ಸ್ವೀಕರಿಸಿದಾಗ ಕಾರು ತಂದ ಇಬ್ಬರಲ್ಲಿ ಒಬ್ಬ ವ್ಯಕ್ತಿ ಮಲಯಾಳಂ ಹಾಗೂ ಇಂಗ್ಲಿಷ್‌ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಲಾರಂಭಿಸಿದ. ಕಾರಿನಲ್ಲಿ ₹ 3 ಲಕ್ಷವಿದೆ ಎಂದು ಹೇಳಿದ್ದೀಯಾ; ಇಲ್ಲಿ ₹ 1 ಲಕ್ಷ ಮಾತ್ರವಿದೆ. ₹ 3 ಲಕ್ಷ ನೀಡುವುದಾಗಿ ಹೇಳಿ ಮೋಸ ಮಾಡುತ್ತೀಯಾ? ನಿನ್ನ ಮೇಲೆ ಪ್ರಕರಣ ದಾಖಲಿಸುತ್ತೇವೆ, ನಿನ್ನ ಚರಿತ್ರೆ ತಿಳಿಸುತ್ತೇವೆ ಎಂಬ ಫೋನ್ ಕರೆಯ ಸಂಭಾಷಣೆ ಪೊಲೀಸರ ಎದುರೇ ಬಹಿರಂಗವಾಗಿದೆ.

ಇದರಿಂದ ಪೊಲೀಸರಲ್ಲಿ ಅನುಮಾನ ಹೆಚ್ಚಾಗಿ ಯೋಗೇಶ ಅವರನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ಯೋಗೇಶ ತನ್ನ ತಂದೆ ಮನೋಹರ ದೇಸಾಯಿ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದು ಬಯಲಿದೆ ಬಂದಿದೆ.

ಯೋಗೇಶ ಯಶವಂತಪುರದಲ್ಲಿ ತಂಗಿ ರೂಪಾ, ಅಳಿಯ ಆನಂದನ ಜೊತೆ ವಾಸವಾಗಿದ್ದರು. ಯೋಗೇಶ್ ತಂದೆ ಮನೋಹರ ದೇಸಾಯಿ ಗಂಗಾವತಿಯಲ್ಲಿ ಕರ್ಣಂ ಕಲಾವತಿ ಎಂಬುವವರ ಜೊತೆ ವಾಸವಾಗಿದ್ದಾರೆ.

‘ತಂದೆಯ ಜೊತೆ ಆಸ್ತಿ ವ್ಯಾಜ್ಯವಿದ್ದು, ತಂದೆ ಹಾಗೂ ಕರ್ಣಂ ಕಲಾವತಿ ಅವರ ಕೊಲೆಗೆ ಸಂಚು ರೂಪಿಸಿ ಬೆಂಗಳೂರಿನಿಂದ ಮಹ್ಮದ್ ಫಯಾಜ್, ಸೋಹಾನ್‌ ಎಂಬಾತನನ್ನು ಕರೆದುಕೊಂಡು ಬಂದಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಂಗಾವತಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.