ADVERTISEMENT

ಸಾಮೂಹಿಕ ಮದುವೆಯಿಂದ ಆರ್ಥಿಕ ಉಳಿತಾಯ: ಗುಳೇದಗುಡ್ಡದ ಒಪ್ಪತೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 12 ಮೇ 2025, 15:34 IST
Last Updated 12 ಮೇ 2025, 15:34 IST
ಅಳವಂಡಿ ಸಮೀಪದ ಕವಲೂರು ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆದವು
ಅಳವಂಡಿ ಸಮೀಪದ ಕವಲೂರು ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆದವು   

ಅಳವಂಡಿ: ‘ಭಾತೃತ್ವ ಭಾವನೆ, ದೇಶಪ್ರೇಮ ಹೆಚ್ಚಿಸುವ ಗ್ರಾಮ ಕವಲೂರು ಆಗಿದೆ’ ಎಂದು ಗುಳೇದಗುಡ್ಡದ ಒಪ್ಪತೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಕವಲೂರು ಗ್ರಾಮದಲ್ಲಿ ದುರ್ಗಾದೇವಿ ಹಾಗೂ ಪಾರ್ವತಿ ಪರಮೇಶ್ವರ ಜಾತ್ರೆ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಕವಲೂರು ಗ್ರಾಮದಲ್ಲಿ ರಾಷ್ಟ್ರಕ್ಕೆ ಗೌರವ ಕೊಡುವ ಕೆಲಸವಾಗಿದೆ. ನೂತನ ದಂಪತಿಗಳು ಸಪ್ತಪದಿ ತುಳಿಯುವ ಮೂಲಕ ಸಾರ್ಥಕ ಬದುಕಿಗೆ ಹೆಜ್ಜೆ ಇಡುವಂತ ಪುಣ್ಯದ ಕೆಲಸ ಇಲ್ಲಿ ನಡೆಯುತ್ತದೆ’ ಎಂದರು.

ADVERTISEMENT

ಕುಕನೂರಿನ ಮಹಾದೇವ ಸ್ವಾಮೀಜಿ ಮಾತನಾಡಿ, ‘ಈ ಜಗತ್ತಿನಲ್ಲಿ ಯಾರು ಕಾಯಕ ತತ್ವವನ್ನು ಅಳವಡಿಸಿಕೊಳ್ಳುತ್ತಾರೋ ಅವರು ದೊಡ್ಡವರಾಗುತ್ತಾರೆ. ಈ ನಿಟ್ಟಿನಲ್ಲಿ ಬಸವಣ್ಣ ಕಾಯಕದ ಮೂಲಕವೇ ದೊಡ್ಡವರಾಗಿದ್ದಾರೆ. ಮನೆ ಬೆಳಗಲು ಮಹಿಳೆಯ ಪಾತ್ರ ಅವಶ್ಯ. ಹೀಗಾಗಿ ಊರು ಬೆಳಗಲು ಈ ಗ್ರಾಮದಲ್ಲಿ ಸಂಸ್ಕಾರಯುತ ಜನರಿದ್ದಾರೆ. ಬುದ್ದ, ಬಸವ, ಅಂಬೇಡ್ಕರ್, ವಾಲ್ಮೀಕಿ ಹೀಗೆ ಅನೇಕರು ದೊಡ್ಡವರಾಗಿದ್ದು ತಮ್ಮಲ್ಲಿರುವ ಉತ್ತಮ ಸಂಸ್ಕಾರಯುತ ಮನೋಭಾವನೆಯಿಂದ’ ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ‘ಸಾಮೂಹಿಕ ಮದುವೆಯಿಂದ ಬಡವರಿಗೆ ಆರ್ಥಿಕ ಉಳಿತಾಯ ಆಗಲಿದೆ. ನೂತನ ದಂಪತಿಗಳು ಜೀವನದಲ್ಲಿ ಕಾಯಕ ತತ್ವ ಅಳವಡಿಸಿಕೊಳ್ಳಿ. ದುಡಿಮೆಗೆ ತಕ್ಕ ಫಲ ಸಿಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ದುಡಿದು ಸ್ವಾವಲಂಬಿ ಜೀವನ ಸಾಗಿಸಬೇಕು. ಅಂದಾಗ ನೆಮ್ಮದಿಯ ಜೀವನ ನಡೆಸಲು ಸಾಧ್ಯ, ಸಾಮೂಹಿಕ ಮದುವೆಯಲ್ಲಿ ದೇವರನ್ನು ಕಾಣಬಹುದು’ ಎಂದರು.

ಪ್ರಮುಖರಾದ ವೈ.ಎನ್.ಗೌಡರ, ಭರಮಪ್ಪ ನಗರ, ಹೊನ್ನಪ್ಪಗೌಡ, ತೋಟಪ್ಪ, ಗವಿಸಿದ್ದಯ್ಯ, ಮಲ್ಲಮ್ಮ, ಅನ್ನಪೂರ್ಣ, ಸೈಯದ್, ಗುರುಮೂರ್ತಿಸ್ವಾಮಿ, ಭೀಮೇಶಪ್ಪ, ನೀಲಪ್ಪ, ಬಸಮ್ಮ, ಅನಿತಾ, ಸಣ್ಣ ಜಂಬಣ್ಣ, ಶ್ರೀ ದುರ್ಗಾದೇವಿ ಸಂಘದ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.