ಕೊಪ್ಪಳ: ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ (ಕೆಆರ್‌ಐಡಿಎಲ್) ಇಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದ ಝರಣಪ್ಪ ಎಂ. ಚಿಂಚೋಳಿಕರ್ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕಚೇರಿ ಸಹಾಯಕರಾಗಿ ಕೆಲಸ ಮಾಡಿ ಆರು ತಿಂಗಳ ಹಿಂದೆ ವಜಾಗೊಂಡಿದ್ದ ಕಳಕಪ್ಪ ನಿಡಗುಂದಿ ಹಾಗೂ ಅವರ ಮೇಲೆ ಇಲ್ಲಿನ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜೊತೆಗೆ ಕಾಮಗಾರಿಗಳಿಗೆ ಸಂಬಂಧಿಸಿದ ಗುತ್ತಿಗೆದಾರರ ಮೇಲೂ ಎಫ್‌ಐಆರ್ ಮಾಡಲಾಗಿದ್ದು, ಯಾರ ಹೆಸರನ್ನೂ ಉಲ್ಲೇಖಿಸಿಲ್ಲ.
ಚಿಂಚೋಳಿಕರ್ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದ್ದು, ಕಳಕಪ್ಪ ಎರಡನೇ ಆರೋಪಿಯಾಗಿದ್ದಾರೆ.
ಚಿಂಚೋಳಿಕರ್ ನೆಲೋಗಿಪುರ ಉಪವಿಭಾಗದಲ್ಲಿ ಕಿರಿಯ ಎಂಜಿನಿಯರ್, ಸಹಾಯಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕಾರ್ಯಪಾಲಕ ಎಂಜಿನಿಯರ್ ಮತ್ತು ಅಧೀಕ್ಷಕ ಎಂಜಿನಿಯರ್ ಈ ಎಲ್ಲ ಹುದ್ದೆಗಳಲ್ಲಿ ಒಬ್ಬರೇ ಪ್ರಭಾರ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ ಎನ್ನುವುದು ದೃಢಪಟ್ಟಿದೆ.
2023–25ರ ಅವಧಿಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ 68, ಯಲಬುರ್ಗಾ ಕ್ಷೇತ್ರದ 4, ಗಂಗಾವತಿ ಕ್ಷೇತ್ರದ ಐದು, ಕನಕಗಿರಿ ಕ್ಷೇತ್ರದ 19 ಕಾಮಗಾರಿಗಳು ನಡೆದಿದ್ದು, ಸಿಸಿ ರಸ್ತೆ, ಯಾತ್ರಿ ನಿವಾಸ, ಶೌಚಾಲಯ, ಚರಂಡಿ ನಿರ್ಮಾಣ, ಸೋಲಾರ್ ಲ್ಯಾಂಪ್ ಅಳವಡಿಸುವಿಕೆ, ಅಂಜನಾದ್ರಿ ಪರ್ವತದ ಬಳಿ ವೀಕ್ಷಣಾ ಕೇಂದ್ರ, ವಿಶ್ರಾಂತಿ ಕೇಂದ್ರ, ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು, ತೋಟಗಾರಿಕಾ ಇಲಾಖೆಯ ಕಾಂಪೌಂಡ್ ನಿರ್ಮಾಣ ಸೇರಿದಂತೆ ಒಟ್ಟು 108 ಕಾಮಗಾರಿಗಳಿಗೆ ಯಾವುದೇ ಕ್ರಿಯಾ ಯೋಜನೆ ರೂಪಿಸಿಲ್ಲ ಎನ್ನುವುದನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ಕೆಲವು ಕಾಮಗಾರಿಗಳನ್ನು ಮುಗಿಸದೇ ಪೂರ್ಣಪ್ರಮಾಣದಲ್ಲಿ ಹಣ ಮಂಜೂರು ಮಾಡಿಕೊಂಡಿದ್ದಾರೆ ಎನ್ನುವುದು ಕೂಡ ಗೊತ್ತಾಗಿದೆ. ಎಫ್‌ಐಆರ್ ದಾಖಲಾದ ಮರುದಿನವೇ ಕಳಕಪ್ಪ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.