
ಯಲಬುರ್ಗಾ: ಮೀನು ಹಿಡಿಯಲು ಹೋಗಿ ಇಬ್ಬರು ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮಲ್ಕಸಮುದ್ರ ಗ್ರಾಮದ ಕೆರೆಯಲ್ಲಿ ನಡೆದಿದೆ. ಅಗ್ನಿಶಾಮಕ ದಳದವರು ಕಳೆದ ಎರಡು ದಿನಗಳ ಕಾಲ ನಿರಂತರ ಶೋಧ ಕಾರ್ಯ ನಡೆಸಿ ಮಂಗಳವಾರ ಮಧ್ಯಾಹ್ನ ಶವಗಳನ್ನು ಹೊರತೆಗೆದಿದ್ದಾರೆ.
ಭಾನುವಾರ ಸಂಜೆ ಬೋಟ್ ಬಳಸಿಕೊಂಡು ನಾಲ್ವರು ಮೀನು ಹಿಡಿಯಲು ಕೆರೆಯೊಳಗೆ ತೆರಳಿದ್ದರು. ಸ್ವಲ್ಪ ದೂರ ಹೋದ ನಂತರ ಬೋಟ್ ಮುಗಿಚಿಬಿದ್ದ ಪರಿಣಾಮ ನಾಲ್ವರಲ್ಲಿ ಯಲಬುರ್ಗಾದ ಪಟ್ಟಣದ ಶರಣಪ್ಪ ಹಣಗಿ ಹಾಗೂ ಹನುಮೇಶ ಗೊಂಡಬಾಳ ಇಬ್ಬರು ಈಜಿ ದಡ ಸೇರಿದ್ದಾರೆ. ವಜ್ರಬಂಡಿ ಗ್ರಾಮದ ಫಕೀರಸಾಬ ಮುಜಾವರ(36), ಗುತ್ತೂರು ಗ್ರಾಮದ ಶರಣಪ್ಪ ಎಮ್ಮೆರ(32) ಈಜಿ ದಡ ಸೇರಲು ಸಾಧ್ಯವಾಗದೇ ಮುಳುಗಿ ಮೃತರಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು ಅಗ್ನಿಶಾಮಕ ದಳದ ಸಿಬ್ಬಂದಿ ನೆರವು ಪಡೆದು ಮೃತರ ಶೋಧಕಾರ್ಯ ನಡೆಸಿದ್ದಾರೆ. ಎರಡು ದಿನಗಳ ನಂತರ ಪತ್ತೆಯಾಗಿವೆ. ಮೃತರ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಬಹಳಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು.
ಸಾಂತ್ವನ: ಮಲ್ಕಸಮುದ್ರ ಕೆರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿ ಒತ್ತಾಯಿಸುವುದಾಗಿ ಭರವಸೆ ನೀಡಿದರು.
ಮಾಜಿ ಸಚಿವ ಹಾಲಪ್ಪ ಆಚಾರ ಭೇಟಿ ನೀಡಿ ಸಂತ್ರಸ್ಥ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಆರ್ಥಿಕವಾಗಿ ಹಿಂದುಳಿದ ಮೃತರ ಕುಟುಂಬಕ್ಕೆ ಸರ್ಕಾರ ಹೆಚ್ಚಿನ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ರಾಮ ಎಲ್.ಅರಸಿದ್ದಿ, ತಹಶೀಲ್ದಾರ್ ಬಸವರಾಜ ತೆನ್ನಳ್ಳಿ ಸೇರಿ ಅನೇಕರು ಸ್ಥಳಕ್ಕೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.