ADVERTISEMENT

ಕುಕನೂರು: ಕೀಡೆಗಳ ಹಾವಳಿ, ಹಾಳಾಗುತ್ತಿರುವ ಕಡಲೆ

ಮಂಜುನಾಥ ಅಂಗಡಿ
Published 9 ಡಿಸೆಂಬರ್ 2021, 19:30 IST
Last Updated 9 ಡಿಸೆಂಬರ್ 2021, 19:30 IST
ಕುಕನೂರು ತಾಲ್ಲೂಕಿನ ಯರೇಹಂಚಿನಾಳ ಗ್ರಾಮದ ಜಮೀನಿನಲ್ಲಿ ರೈತ ಕಡಲೆ ಬೆಳೆಗೆ ಔಷಧಿ ಸಿಂಪಡಣೆ ಮಾಡುತ್ತಿರುವುದು
ಕುಕನೂರು ತಾಲ್ಲೂಕಿನ ಯರೇಹಂಚಿನಾಳ ಗ್ರಾಮದ ಜಮೀನಿನಲ್ಲಿ ರೈತ ಕಡಲೆ ಬೆಳೆಗೆ ಔಷಧಿ ಸಿಂಪಡಣೆ ಮಾಡುತ್ತಿರುವುದು   

ಕುಕನೂರು: ಮಳೆಯಿಂದಾಗಿ ಸಂತೋಷ­­­ಪಟ್ಟ ರೈತರು ಕಡಲೆ ಬೆಳೆದು ಲಾಭ ಪಡೆಯುವ ಉದ್ದೇಶದಿಂದ ಬೀಜ ಬಿತ್ತಿದರು. ಉತ್ತಮವಾಗಿ ಮೊಳಕೆಯೊಡೆದು ಬೆಳೆದು ನಿಂತಿದೆ. ಆದರೆ ಕಡಲೆ ಕಾಯಿ­ಯಾಗುವ ಹೊತ್ತಿನಲ್ಲಿಯೇ ಕೀಡೆಗಳ ಹಾವಳಿ ಹೆಚ್ಚಾಗಿದ್ದು, ಕಡಲೆ ಬೆಳೆಯು ಹಾಳಾಗುತ್ತಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕಡಲೆ ಬೆಳೆಯನ್ನು ಏನಾದರೂ ಮಾಡಿ ಉಳಿಸಿಕೊಳ್ಳಲೆಬೇಕು ಎಂಬ ನಿರ್ಧಾರ ಮಾಡಿರುವ ತಾಲ್ಲೂಕಿನ ರೈತರು, ರಾಸಾಯನಿಕ ಔಷಧಿಗಳ ಮೊರೆ ಹೋಗುತ್ತಿ­ರುವುದು ಅನಿವಾರ್ಯವಾಗಿದೆ.

ಕಡಲೆ ಬೆಳೆಯು ಉತ್ತರ ಕರ್ನಾಟದ ಮುಖ್ಯವಾದ ಹಿಂಗಾರು ದ್ವಿದಳ ಧಾನ್ಯ ಬೆಲೆಯಾಗಿದೆ. ಅದರಲ್ಲೂ ತಾಲ್ಲೂಕಿನಲ್ಲಿ ಕಪ್ಪು ಮಣ್ಣಿನ ಪ್ರದೇಶ ಹೆಚ್ಚು ಇರುವ ಕಾರಣ ಸಾಕಷ್ಟು ವಿಶ್ವಾಸದಿಂದ ಕಡಲೆ ಬಿತ್ತಿದರು. ಆದರೆ ರೈತರು ತಾವೊಂದು ಬಗೆದರೆ ಪ್ರಕೃತಿಯೊಂದು ಬಗೆಯುತ್ತಿದೆ. ಹೀಗಾಗಿ ಬೆಳೆ ಕೀಟಗಳ ಪಾಲಾಗುತ್ತಿದೆ. 37929 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ರೈತರು ಸಂಕಷ್ಟದಲ್ಲಿದ್ದಾರೆ.

ADVERTISEMENT

ಪ್ರಾರಂಭಿಕ ಹಂತದಲ್ಲಿ ಕೀಡೆಯು ಎಲೆಯ ಹಸಿರು ಭಾಗವನ್ನು ಸಂಪೂರ್ಣ ತಿಂದಿದೆ. ಕಡಲೆಯ ಬೆಳೆಗೆ ಎಲ್ಲ ಬೆಳೆಗಳಂತೆ ಮುಗುಳು ಮುಖ್ಯವಾದದ್ದು ಇಂತಹ ಅವಶ್ಯಕವಾದ ಭಾಗವನ್ನೇ ಕೀಟಗಳು ತಿನ್ನುತ್ತಿರುವದರಿಂದ ಕಡಲೆಯ ಗಿಡ ಬರಿ ಕಡ್ಡಿಯಂತಾಗಿ ಜಮೀನುಗಳಲ್ಲಿ ನಿಂತಿರುವದನ್ನು ಕಂಡು ರೈತರು ಆಂತಕಪಡುವಂತಾಗಿದೆ.

ಹೆಣ್ಣು ಪತಂಗವು ಎಲೆಯ ಮೇಲ್ಭಾಗದಲ್ಲಿ ವಿಪರೀತ ತತ್ತಿಗಳನ್ನು ಇಡುತ್ತಿರುವುದರಿಂದ ಕೀಡೆಗಳು ಬಹು ಬೇಗ ಉತ್ಪತ್ತಿಯಾಗುತ್ತಿವೆ. ಹೀಗಾಗಿ ಬೆಳೆದು ನಿಂತಿರುವ ಕಡಲೆಯ ಪೈರು ಸಂಪೂರ್ಣ ಕೀಡೆಯ ಬಾಧೆಗೆ ತುತ್ತಾಗುತ್ತಿದೆ. ಹೀಗಾಗಿ ಹೆಣ್ಣು ಪತಂಗವು ರೈತರ ವೈರಿ ಎನ್ನುವುದು ಸಾಬಿತಾಗಿದೆ.

‘ಕಡಲೆ ಬೆಳೆ ಹಿಂಗಾರು ಬೆಳೆಗಳಲ್ಲಿ ಬಹು ಪ್ರಮುಖವಾದ್ದು ಮತ್ತು ಉತ್ತಮ ಆದಾಯ ನೀಡುತ್ತದೆ ಎನ್ನುವ ಆಸೆಯಿಂದ ಸಾಕಷ್ಟು ಭರವಸೆಯನ್ನಿಟ್ಟುಕೊಂಡು ಕಡಲೆಯನ್ನು ಬಿತ್ತಿದೆವು. ಅದರಂತೆ ಉತ್ತಮ ಬೆಳೆಯೂ ಬಂತು. ಆದರೆ ಪ್ರಸ್ತುತ ಸಮಯದಲ್ಲಿ ಕಡಲೆಗೆ ಕೀಡೆಯ ಬಾಧೆ ವಿಪರೀತವಾಗಿದೆ. ಔಷಧೋಪ­ಚಾರ ಮಾಡಿದರೂ ಕಡಿಮೆಯಾಗುತ್ತಿಲ್ಲ. ಇದರಿಂದಾಗಿ ಎಲ್ಲ ರೈತರು ತುಂಬಾ ಆತಂಕ ಎದುರಿಸುವಂತಾಗಿದೆ’ ಎಂದು ರೈತ ಪ್ರಶಾಂತ ಹೇಳಿದರು.

**

2 ಗ್ರಾಂ ಇಮಾಮೋ­ಮೇಟ್ರಿಂಗ್‌, 3 ಎಂ.ಎಲ್ ಪ್ರಫ್ನೊಪಾಸ್ ಅಥವಾ 3 ಎಂ.ಎಲ್ ಇಂಡಾಕ್ಷ್‌ ಕಾರ್ಬನ್ ನೀರಿನಲ್ಲಿ ಬೆರೆಸಿ ಬೆಳೆಗೆ ಸಿಂಪಡಣೆ ಮಾಡುವುದರಿಂದ ಕೀಟವನ್ನು ಹತೋಟಿಗೆ ತರಲು ಸಾಧ್ಯವಿದೆ
–ಪ್ರಸನ್ ಕುಮಾರ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.