ADVERTISEMENT

ಗವಿಮಠದಲ್ಲಿ ಭಕ್ತರಿಗೆ ದಾಸೋಹ: 15 ಲಕ್ಷ ಜೋಳದ ರೊಟ್ಟಿ, ಏಳು ಲಕ್ಷ ಶೇಂಗಾ ಹೋಳಿಗೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 7:22 IST
Last Updated 8 ಜನವರಿ 2023, 7:22 IST
   

ಕೊಪ್ಪಳ: ಇಲ್ಲಿನ ಗವಿಸಿದ್ಧೇಶ್ವರ ಮಠದ ಮಹಾ ರಥೋತ್ಸವಕ್ಕೆ ಲಕ್ಷಾಂತರ ಜನ ಸೇರುವುದು ಒಂದು ವಿಶೇಷವಾದರೆ, ಇಲ್ಲಿನ ದಾಸೋಹ ವ್ಯವಸ್ಥೆ ಮತ್ತೊಂದು ವಿಶೇಷ.

ಒಂದು ವಾರದ ಹಿಂದೆಯೇ ಶುರುವಾಗಿರುವ ದಾಸೋಹ ಇನ್ನೊಂದು ತಿಂಗಳು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇದಕ್ಕೂ ಎರಡು ತಿಂಗಳು ಮೊದಲೇ ಜಿಲ್ಲೆ ಹಾಗೂ ಹೊರಜಿಲ್ಲೆಗಳಲ್ಲಿ ಜೋಳದ ರೊಟ್ಟಿ, ಶೇಂಗಾ ಹೋಳಿಗೆ, ಸಿಹಿ ಮಾದಲಿ, ದವಸ ಧಾನ್ಯಗಳನ್ನು ಮಠಕ್ಕೆ ಸಮರ್ಪಣೆ ಮಾಡುತ್ತಿರುವ ಕೆಲಸ ನಿತ್ಯವೂ ನಡೆಯುತ್ತಲೇ ಇದೆ. ತಡರಾತ್ರಿ ಹಾಗೂ ಬೆಳಗಿನ ಜಾವದ ತನಕವೂ ಚಕ್ಕಡಿ, ಟ್ರ್ಯಾಕ್ಟರ್‌ಗಳ ಮೂಲಕ ಜೋಳದ ರೊಟ್ಟಿಗಳನ್ನು ತಂದು ಮಠಕ್ಕೆ ಅರ್ಪಿಸುವ, ದಾಸೋಹ ಸವಿಯುವ ಭಕ್ತರ ಚಿತ್ರಣ ಸಾಮಾನ್ಯವಾಗಿದೆ.

ಈ ಸಲದ ಜಾತ್ರೆಗೆ ಜಿಲ್ಲೆ, ಹೊರಜಿಲ್ಲೆಗಳು ಭಕ್ತರು ಕೊಟ್ಟ ಜೋಳದ ರೊಟ್ಟಿಯೇ 15 ಲಕ್ಷಕ್ಕಿಂತಲೂ ಹೆಚ್ಚಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರಿನ ಗೆಳೆಯರ ಬಳಗ ಹಾಗೂ ಅಲ್ಲಿನ ಗವಿಸಿದ್ದೇಶ್ವರ ಆಗ್ರೊ ಫುಡ್ಸ್ ಮಾಲೀಕ ವಿಜಯಕುಮಾರ ಗುಡಿಹಾಳ ನೇತೃತ್ವದಲ್ಲಿ ನಾಲ್ಕು ಲಕ್ಷ ಶೇಂಗಾ ಹೋಳಿಗೆ ಮಠಕ್ಕೆ ಸಮರ್ಪಣೆಯಾಗಿವೆ. ಒಟ್ಟು ಏಳು ಲಕ್ಷಕ್ಕೂ ಹೆಚ್ಚು ಶೇಂಗಾ ಹೋಳಿಗೆ ಸಂಗ್ರಹವಾಗಿವೆ.

ADVERTISEMENT

ಗೆಳೆಯರ ಬಳಗ 90 ಕ್ವಿಂಟಲ್‌ ಹೋಳಿಗೆ ತಯಾರಿ ಮಾಡಿದೆ. ಇದಕ್ಕಾಗಿ 90 ಕ್ವಿಂಟಲ್ ಶೇಂಗಾ, 75 ಕ್ವಿಂಟಲ್ ಬೆಲ್ಲ ಹಾಗೂ 25 ಕ್ವಿಂಟಲ್ ಮೈದಾಹಿಟ್ಟು ಬಳಸಲಾಗಿದೆ. 32 ಹಳ್ಳಿಗಳಿಗೆ ಮನೆಮನೆಗೆ 3 ಕೆ.ಜಿ. ಶೇಂಗಾ, 2 ಕೆ.ಜಿ. ಬೆಲ್ಲ, 1 ಕೆ.ಜಿ. ಮೈದಾಹಿಟ್ಟು ಪ್ಯಾಕೆಟ್ ಮಾಡಿ ಭಕ್ತರಿಗೆ ಕೊಟ್ಟು, ಹೋಳಿಗೆ ತಯಾರಿ ಮಾಡಿಸಲಾಗಿದೆ. ಸಿಂಧನೂರಿನ ಗೆಳೆಯರ ಬಳಗ ಹಿಂದಿನ ಜಾತ್ರಾ ಮಹೋತ್ಸವದ ಮಹಾದಾಸೋಹಕ್ಕೆ ಮಾದಲಿ, ಸಿಹಿ ಬೂಂದಿ ಹಾಗೂ ಮಿರ್ಚಿ ಸೇವೆ ಒದಗಿಸಿತ್ತು.

ಮಾದಲಿ: ಕೊಪ್ಪಳದ ಗವಿಸಿದ್ಧೇಶ್ವರ ಗೆಳೆಯರ ಬಳಗ 275 ಕ್ವಿಂಟಲ್‌ ಸಿಹಿ ಮಾದಲಿ ಅರ್ಪಿಸಿದೆ.

ಇದಕ್ಕಾಗಿ 100 ಕ್ವಿಂಟಲ್‌ ಗೋಧಿ, 150 ಕ್ವಿಂಟಲ್‌ ಬೆಲ್ಲ, 10 ಕ್ವಿಂಟಲ್‌ ಹುರಿದ ಗೋಧಿ ಹಿಟ್ಟು, 5 ಕ್ವಿಂಟಲ್‌ ಕಡ್ಲಿಬೇಳೆ, 50 ಕೆ.ಜಿ. ಶುಂಠಿ, 50 ಕೆ.ಜಿ. ಕಸಕಸಿ, 150 ಕೆ.ಜಿ. ಪುಟಾಣಿ, 50 ಕೆ.ಜಿ. ಕೊಬ್ಬರಿ, 20 ಕೆ.ಜಿ. ಯಾಲಕ್ಕಿ ಬಳಸಿದೆ.

ಸಮಾನ ಮನಸ್ಕರ ಗೆಳೆಯರ ಬಳಗ ಹಿಂದಿನ ಸತತ 13 ವರ್ಷಗಳಿಂದ ಜಾತ್ರಾ ಮಹೋತ್ಸವದ ಮಹಾದಾಸೋಹಕ್ಕೆ ಸಿಹಿ ಮಾದಲಿ ಸಲ್ಲಿಸುತ್ತಲೇ ಬಂದಿದೆ.

‘ಮೊದಲು ಐದು ಜನ ಸೇರಿ ಸಿಹಿ ಮಾದಲಿ ಮಾಡಿಸಿಕೊಡುತ್ತಿದ್ದೆವು. ಈಗ 15 ಜನ ಸದಸ್ಯರು ತಂಡದಲ್ಲಿದ್ದೇವೆ. ಅಜ್ಜನ ಜಾತ್ರೆ ಎಂದರೆ ಸಾಕು; ಲಕ್ಷಾಂತರ ಜನ ಬರುತ್ತಾರೆ. ಮಾದಲಿ ಸೇವೆ ಮಾಡಲು ಅವಕಾಶ ಲಭಿಸಿದ್ದು ನಮ್ಮ ಪುಣ್ಯ’ ಎಂದು ಗವಿಸಿದ್ಧೇಶ್ವರ ಗೆಳೆಯರ ಬಳಗ ಪೂರೈಸಿದೆ ಎಂದು ಬಳಗದ ರಾಜೇಂದ್ರ ಶೆಟ್ಟರ್ ಹೇಳಿದರು.

ಸಿದ್ಧತೆ ಪರಿಶೀಲಿಸಿದ ಸ್ವಾಮೀಜಿ

ಮಠದ ಕೈಲಾಸ ಮಂಟಪ, ದಾಸೋಹ ವಿಭಾಗದಲ್ಲಿ ನಡೆಯುತ್ತಿರುವ ಕೆಲಸವನ್ನು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಪರಿಶೀಲಿಸಿದರು.

ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿರುವ ಎನ್ಎಸ್ಎಸ್, ಎನ್ ಸಿಸಿ ವಿದ್ಯಾರ್ಥಿಗಳು, ಪೊಲೀಸ್ ಹಾಗೂ ಹೋಮ್ ಗಾರ್ಡ್ ಸಿಬ್ಬಂದಿಯ ಕುಶಲೋಪರಿ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.