ಬಿನ್ನಾಳ (ಕೊಪ್ಪಳ): ಇನ್ನೂ ಸೂರ್ಯೋದಯವಾಗಿರಲಿಲ್ಲ; ಆಗಲೇ ಕೊಪ್ಪಳದ ಅಶೋಕ ಸರ್ಕಲ್‌ನಲ್ಲಿ ಶ್ವೇತವಸ್ತ್ರಧಾರಿಗಳಾಗಿದ್ದ ಸಮಾನ ಮನಸ್ಕ ಸ್ನೇಹಿತರು ಸೇರಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸ್ಮರಣೆಯಲ್ಲಿ ತೊಡಗಿದ್ದರು.
ಜಿಲ್ಲಾಧಿಕಾರಿ ಸುರೇಶ ಹಿಟ್ನಾಳ ಅವರು ಕುಕನೂರು ತಾಲ್ಲೂಕಿನ ಬಿನ್ನಾಳ ಗ್ರಾಮದ ಪಾದಯಾತ್ರೆಗೆ ಅಶೋಕ ಸರ್ಕಲ್‌ನಲ್ಲಿ ಚಾಲನೆ ನೀಡಿ ’ಗಾಂಧಿ ಬಳಗ ಮಾದರಿಯ ಕಾರ್ಯ ಮಾಡುತ್ತಿದೆ’ ಎಂದು ಪ್ರಶಂಸೆ ವ್ಯಕ್ತಪಡಿಸಿ ಲೇಬರ್ ಸರ್ಕಲ್ ತನಕ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಮರಳಿ ಕುಕನೂರು ತಾಲ್ಲೂಕಿನ ಭಟಪನಹಳ್ಳಿಗೆ ತೆರಳಿದ ಪಾದಯಾತ್ರಿಗಳ ತಂಡಕ್ಕೆ ಗ್ರಾಮಸ್ಥರು ಸಂಭ್ರಮದಿಂದ ಸ್ವಾಗತಿಸಿದರು. ಬಿನ್ನಾಳಕ್ಕೆ ತೆರಳುವ ಮಾರ್ಗಮಧ್ಯದ ಚಿಕ್ಕೇನಕೊಪ್ಪದ ಗ್ರಾಮದ ಜನ ಗಾಂಧಿ ಬಳಗದ ತಂಡವನ್ನು ಅದ್ದೂರಿಯಾಗಿ ಬರಮಾಡಿಕೊಂಡರು. ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿ, ‘ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಚಿಕ್ಕೇನಕೊಪ್ಪ ದೊಡ್ಡ ಕೊಡುಗೆ ನೀಡಿದೆ’ ಎಂದು ಸ್ಮರಿಸಿದರು.
ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ್ತಿ ಶಾರವ್ವ ಶಿವಪ್ಪ ಕಂಬಳಿ ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು. ಬಳಗದ ನೂರಾರು ಜನರ ಜೊತೆಗೆ ಕಪ್ಪತಗುಡ್ಡದ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ, ಚಿಕ್ಕೇನಕೊಪ್ಪದ ಅನ್ನದಾನ ಭಾರತಿ ಸ್ವಾಮೀಜಿ ಹಾಗೂ ಮಹೇಶ ಶಾಸ್ತ್ರಿ ಸೇರಿಕೊಂಡು ಬಿನ್ನಾಳಕ್ಕೆ ಹಜ್ಜೆ ಹಾಕಿದರು. ಮಾರ್ಗದುದ್ದಕ್ಕೂ ಪಾದಯಾತ್ರಿಗಳು ಘೋಷಣೆಗಳನ್ನು ಕೂಗುತ್ತ ಸಾಗಿದರು. ಗ್ರಾಮ ಸಮೀಪಿಸುತ್ತಿದ್ದಂತೆ ಊರಿನ ಮಹಿಳೆಯರು ಆರತಿ ಮಾಡಿ ಹೂಮಳೆಗೆರೆದು ಸ್ವಾಗತಿಸಿದರು. ಬಳಿಕ ಗ್ರಾಮದ ಬೀದಿಗಳಲ್ಲಿ ಸಂಚರಿಸಿ ಪಾದಯಾತ್ರೆ ಉದ್ದೇಶದ ಬಗ್ಗೆ ಜಾಗೃತಿ ಮೂಡಿಸಿದರು.
ಗ್ರಾಮದ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗ್ರಾಮದ ಮುಖಂಡರು, ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಅಂಚೆ ಪತ್ರದಲ್ಲಿ ಗಾಂಧೀಜಿ ಭಾವಚಿತ್ರ ಬಿಡಿಸುವ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಪ್ರದಾನ ಮಾಡಲಾಯಿತು. ಮದ್ಯ ಮುಕ್ತ ಗ್ರಾಮವಾಗಿ ಬಿನ್ನಾಳ ಘೋಷಣೆ ಮಾಡಿಕೊಂಡಿದ್ದರಿಂದ ಗಾಂಧಿ ಬಳಗ ಈ ಗ್ರಾಮಕ್ಕೆ ಪಾದಯಾತ್ರೆ ಮಾಡಿತ್ತು. ಗ್ರಾಮದ ಜನರಿಗೆ ವಿಜಯದಶಮಿ ದಿನವೇ ಗಾಂಧಿ ಜಯಂತಿಯ ‘ಹಬ್ಬ’ದ ಖುಷಿಯೂ ಲಭಿಸಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಾಕ್ಷಾಯಿಣಿ ತಹಶೀಲ್ದಾರ್, ಸದಸ್ಯರಾದ ಕಮಲಾಕ್ಷಿ ಕಂಬಳಿ, ಚನ್ನಮ್ಮ ಮುತ್ತಾಳ, ಮಹಮ್ಮದ್‌ಸಾಬ್ ಉಮಚಗಿ, ಗೂರಪ್ಪ ಪಂತರ, ಪಿಡಿಒ ಜಂಬಣ್ಣ, ಊರಿನ ಪ್ರಮುಖರಾದ ಸಂಗಯ್ಯ ಭೂಸನೂರಮಠ, ನೂರೊಂದಪ್ಪ ಕೊಪ್ಪದ, ವೀರಬಸಪ್ಪ ಮಳಗಿ, ಷಣ್ಮುಖಪ್ಪ ಕಂಬಳಿ, ಸಂಗಪ್ಪ ತಹಶೀಲ್ದಾರ್, ಬಸವರಾಜ ಬನ್ನಿಕೊಪ್ಪ, ಜಗದೀಶ ಚೆಟ್ಟಿ, ಜೀವನಸಾಬ್ ಬಿನ್ನಾಳ, ಸಂತೋಷ ಮೆಣಸಿನಕಾಯಿ, ಗಾಂಧಿ ಬಳಗದ ಸಂಚಾಲಕ ಪ್ರಾಣೇಶ ಪೂಜಾರ, ನಾಗರಾಜ ಜುಮ್ಮನ್ನವರ, ಶರಣಪ್ಪ ಬಾಚಲಾಪುರ, ಆನಂದತೀರ್ಥ ಪ್ಯಾಟಿ, ಬೀರಪ್ಪ ಅಂಡಗಿ, ಬಸವರಾಜ ಸವಡಿ, ನಾಗರಾಜ ನಾಯಕ ಡೊಳ್ಳಿನ, ಹನುಮಂತಪ್ಪ ಕುರಿ, ಶರಣಬಸನಗೌಡ ಪಾಟೀಲ, ಕಲಾವಿದ ಶಂಕರ ಬಿನ್ನಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಹೂಮಳೆಗೆರೆದು ಪಾದಯಾತ್ರಿಗಳಿಗೆ ಸ್ವಾಗತಿಸಿದ ಗ್ರಾಮಸ್ಥರು | ಕಾರ್ಯಕ್ರಮದಲ್ಲಿ ಅನುರಣಿಸಿದ ರಘುಪತಿ ರಾಘವ ರಾಜಾರಾಂ | ಗಮನ ಸೆಳೆದ ಶಹನಾಯಿ ವಾದಕ ಪಂಡಿತ್ ಮಾರುತಿ ನವಲಗಿ ಪ್ರದರ್ಶನ
ಶುಭ ಕೋರಿದ ಗವಿಶ್ರೀ
ಬಿನ್ನಾಳ ಗ್ರಾಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೊಪ್ಪಳದ ಗವಿಸಿದ್ಧೇಶ್ವರ ಮಠದ ಅಭಿನವ ಗವಿಸಿದ್ದೇರ ಶುಭ ಸಂದೇಶ ಕಳಿಸಿ ’ಭಾರತದ ಭವಿಷ್ಯ ಅದರ ಹಳ್ಳಿಗಳಲ್ಲಿದೆ ಎಂಬ ಗಾಂಧೀಜಿಯವರ ಮಾತಿನ ತತ್ವದಡಿಯಲ್ಲಿ ಗಾಂಧಿ ಬಳಗದವರು ಸೇರಿ ಗಾಂಧಿ ಜಯಂತಿ ಅಂಗವಾಗಿ ಗ್ರಾಮಗಳನ್ನು ದುಶ್ಚಟಗಳಿಂದ ಮುಕ್ತಗೊಳಿಸುವ ಸತ್ ಸಂಕಲ್ಪ ಮಾಡಿದ್ದ ಆದರ್ಶವಾಗಿದೆ. ಇದಕ್ಕಾಗಿ ಬಿನ್ನಾಳವನ್ನು ಆಯ್ಕೆ ಮಾಡಿಕೊಂಡಿದ್ದು’ ಖುಷಿ ನೀಡಿದೆ ಎಂದಿದ್ದಾರೆ. ಅವರ ಸಂದೇಶವನ್ನು ಕಾರ್ಯಕ್ರಮದಲ್ಲಿ ಓದಿದರು. ಕ್ಷೇತ್ರದ ಶಾಸಕರೂ ಆದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಗ್ರಾಮದ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಕಳುಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.