ADVERTISEMENT

ಸಂಭ್ರಮದ ಗಣೇಶೋತ್ಸವ

ಕೋವಿಡ್‌ ಮಾರ್ಗಸೂಚನೆಯ ಕಟ್ಟಳೆ: ಮೆರವಣಿಗೆ ಅಬ್ಬರ ಕಡಿಮೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 3:49 IST
Last Updated 12 ಸೆಪ್ಟೆಂಬರ್ 2021, 3:49 IST
ಕೊಪ್ಪಳದ ಜವಾಹರ್ ರಸ್ತೆಯಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಲು ಟ್ರ್ಯಾಂಕ್ಟರ್‌ನಲ್ಲಿ ಕೊಂಡೊಯ್ಯುತ್ತಿರುವ ಯುವಕರು
ಕೊಪ್ಪಳದ ಜವಾಹರ್ ರಸ್ತೆಯಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಲು ಟ್ರ್ಯಾಂಕ್ಟರ್‌ನಲ್ಲಿ ಕೊಂಡೊಯ್ಯುತ್ತಿರುವ ಯುವಕರು   

ಕೊಪ್ಪಳ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕೋವಿಡ್‌-19 ಸೋಂಕಿನ ಹಿನ್ನೆಲೆಯಲ್ಲಿ ಗಣೇಶ ಉತ್ಸವವನ್ನು ಸರಳವಾಗಿ ಆಚರಿಸುವಂತೆ ಸರ್ಕಾರದ ಸೂಚನೆಯಂತೆ ಸರಳ ಮತ್ತು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.

ಪ್ರತಿವರ್ಷ ಅದ್ಧೂರಿ ಮೆರವಣಿಗೆಯಲ್ಲಿ ಆಳೆತ್ತರದ ಗಣಪತಿ ಪ್ರತಿಮೆಗಳ ಮೆರವಣಿಗೆ ಅಬ್ಬರದಿಂದ ಹಬ್ಬಕ್ಕೆ ಮೆರುಗು ಹೆಚ್ಚುವಂತೆ ಯುವಕರು ಕುಣಿದು, ಕುಪ್ಪಳಿಸಿ ಪಟಾಕಿ ಸಿಡಿಸಿ ಪ್ರತಿಷ್ಠಾಪನೆ ತರುತ್ತಿದ್ದರು. ವಿವಿಧ ನಿರ್ಬಂಧನೆಯಿಂದ 4 ಅಡಿಗಳಿಗಿಂತ ಚಿಕ್ಕದಾದ ಮೂರ್ತಿಗಳನ್ನು ಸೀಮಿತ ಜನರು ಮೆರವಣಿಗೆಯಲ್ಲಿ ತರುತ್ತಿರುವುದು ಕಂಡು ಬಂತು.

ಹಬ್ಬದ ಸಡಗರ ಮನೆಯಲ್ಲಿ ಹೆಚ್ಚಾಗಿತ್ತು. ಸಾಂಪ್ರದಾಯಿಕವಾಗಿ ಗಣೇಶನ ಪ್ರತಿಷ್ಠಾಪನೆ ಮಾಡುವ ಭಕ್ತರು ತಮ್ಮ ಮನೆಗಳಲ್ಲಿ ವಿವಿಧ ಆಕಾರದ, ವೈವಿಧ್ಯಮಯ ಗಣೇಶನನ್ನು ಪ್ರತಿಷ್ಠಾಪಿಸಿರುವುದು ಕಂಡು ಬಂತು. ಪರಿಸರ ಸ್ನೇಹಿ ಗಣೇಶನ ಪೂಜೆಗೆ ಹೆಚ್ಚು ಒತ್ತು ನೀಡುವಂತೆ ಮನವಿ ಮಾಡಲಾಗಿತ್ತು. ಕೆಲವರು ಅರಿಸಿಣ, ಮಣ್ಣಿನ, ಗೋಮಯ ಸೆಗಣಿಯ ಗಣೇಶಗಳನ್ನು ಅಲ್ಲಲ್ಲಿ ಪೂಜಿಸುವುದು ಕಂಡು ಬಂತು.

ADVERTISEMENT

ಉಳಿದೆಡೆ ಹೆಚ್ಚು ಗಣೇಶನ ವಿಗ್ರಹಗಳು ಬಣ್ಣಗಳಿಂದ ಅಲಂಕರಿಸಿದ ಮೂರ್ತಿಗಳಾಗಿದ್ದವು. ಕೆಲವು ಕಡೆ ಒಂದೇ ದಿನ ಮೂರ್ತಿ ಸ್ಥಾಪನೆ ಮಾಡಿ ಶುಕ್ರವಾರ ರಾತ್ರಿಯೇ ವಿಸರ್ಜನೆ ಮಾಡಲಾಯಿತು. ಸಾರ್ವಜನಿಕ ಗಣೇಶ ಮಂಡಳಿಗಳು ಮೂರು ದಿನ, ಐದು ದಿನಗಳ ಕಾಲ ಗಜಾನನ್ನು ಆರಾಧಿಸಿ ವಿಸರ್ಜನೆ ಮಾಡಲಾಗುತ್ತದೆ.

ಹಬ್ಬಕ್ಕೆ ಕಳೆ ತರುತ್ತಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಾರಿ ರದ್ದಾಗಿದ್ದವು. ಅಲ್ಲದೆ ವಾರ್ಡ್‌ಗಳಲ್ಲಿ ಒಂದೇ ಮಂಡಳಿಯಿಂದ ಗಣೇಶನ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿತ್ತು.

ಜಿಲ್ಲೆಯಲ್ಲಿ ಈ ಸಾರಿ 300ಕ್ಕೂ ಹೆಚ್ಚು ಸಾರ್ವಜನಿಕ ಗಣೇಶನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿಯೂ ಹಬ್ಬದ ಕಳೆ ಹೆಚ್ಚಿತ್ತು. ಗಣೇಶನ ಉತ್ಸವಕ್ಕೆ ಯುವಕರು ಗ್ರಾಮದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ವೇದಿಕೆ ನಿರ್ಮಾಣ ಮಾಡಿ ಸರಳವಾಗಿ ಪ್ರತಿಷ್ಠಾಪನೆ ನೆರೆವೇರಿಸಿದರು.

ಸರಳ ಆಚರಣೆ

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗಣೇಶೋತ್ಸವವನ್ನು ಶ್ರದ್ಧೆ, ಭಕ್ತಿಯೊಂದಿಗೆ ಆಚರಿಸಲಾಯಿತು.

ಪಟ್ಟಣದಲ್ಲಿ ಈಶಾನ್ಯ ಸಾರಿಗೆ ಸಂಸ್ಥೆ ಘಟಕ, ಜೆಸ್ಕಾಂ ಉಪ ವಿಭಾಗ ಸೇರಿದಂತೆ ಅನೇಕ ಸರ್ಕಾರಿ ಕಚೇರಿಗಳ ಆವರಣದಲ್ಲಿ ಸಿಬ್ಬಂದಿ, ಸಂತೆ ಮೈದಾನ, ಹಳೆ ಬಜಾರ ಇತರೆ ಸ್ಥಳಗಳಲ್ಲಿ ವಿವಿಧ ಸಂಘಟನೆಗಳಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು.

ಕೋವಿಡ್‌ ಸಮಸ್ಯೆ ಕಾರಣಕ್ಕೆ ಉತ್ಸವವನ್ನು ಆಡಂಬರಕ್ಕೆ ಅವಕಾಶ ಇಲ್ಲದಂತೆ ಸರಳವಾಗಿ ಆಚರಿಸಲಾಯಿತು. ಕೋವಿಡ್‌ ಕಾರಣದಿಂದ ಈ ಬಾರಿ ಗಣೇಶ ಮೂರ್ತಿ ದರ್ಶನಕ್ಕೆ ಬರುವ ಸಾರ್ವಜನಿಕರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಕಡಿಮೆ ಇತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದು ಕಂಡುಬರಲಿಲ್ಲ.

ಮೂರನೇ ಮತ್ತು ಐದನೇ ದಿನ ಮೂರ್ತಿ ವಿಸರ್ಜಿಸುವವರು ಪುರಸಭೆ ವ್ಯವಸ್ಥೆ ಮಾಡಿರುವ ಟ್ಯಾಂಕರ್‌ಗಳಲ್ಲಿ ವಿಸರ್ಜಿಸುವಂತೆ ಪುರಸಭೆ ಅಧಿಕಾರಿಗಳು ಸಾರ್ವಜನಿಕರಲ್ಲಿ
ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.