ADVERTISEMENT

ಕೊಪ್ಪಳ | ಗಣಪತಿ ಹಬ್ಬದ ಸಿದ್ದತೆಗೆ ಮಳೆಯ ವಿಘ್ನ: ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 12:12 IST
Last Updated 26 ಆಗಸ್ಟ್ 2025, 12:12 IST
   

ಕೊಪ್ಪಳ: ಗೌರಿ ಹಬ್ಬ ಸಂಭ್ರಮದಿಂದ ಆಚರಿಸಿ ಗಣೇಶ ಚತುರ್ಥಿಗೆ ಪೂಜಾ ಸಾಮಗ್ರಿ ಖರೀದಿಯಲ್ಲಿ ತೊಡಗಿದ್ದ ಜಿಲ್ಲಾಕೇಂದ್ರದ ಜನರಿಗೆ ಮಂಗಳವಾರ ಸುರಿದ ಬಿರುಸಿನ ಮಳೆ ಅಡ್ಡಿಯಾಯಿತು.

ಮಧ್ಯಾಹ್ನದ ತನಕ ಕೊಪ್ಪಳದಲ್ಲಿ ಬಿರುಬಿಸಿಲಿನ ವಾತಾವರಣವಿತ್ತು. ಬಳಿಕ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಬಿರುಸಿನಿಂದ ಮಳೆ ಸುರಿಯಿತು.

ಗಣೇಶ ಹಬ್ಬಕ್ಕೆ ಜನ ಲೇಬರ್ ವೃತ್ತ, ಜವಾಹರ ರಸ್ತೆ, ಕೇಂದ್ರೀಯ ಬಸ್ ನಿಲ್ದಾಣದ ಮುಂಭಾಗ, ತಾಲ್ಲೂಕು ಕ್ರೀಡಾಂಗಣ, ನಗರಸಭೆ ಬಳಿ ಸಾಮಗ್ರಿ ಖರೀದಿಯಲ್ಲಿ ತೊಡಗಿದ್ದರು. ಮಣ್ಣಿನ ಗಣಪತಿ ಮೂರ್ತಿಗಳನ್ನು ಮಾರಾಟಕ್ಕೆ ಇರಿಸಿದ್ದ ವ್ಯಾಪಾರಿಗಳು ಮಳೆಯಿಂದಾಗಿ ಮೂರ್ತಿಗಳ ರಕ್ಷಣೆ ಮಾಡಿಕೊಳ್ಳಲು ಪರದಾಟ ನಡೆಸಿದರು.

ADVERTISEMENT

ಹೂ, ಹಣ್ಣುಗಳು, ತರಕಾರಿ, ಬಾಳೆದಿಂಡು, ಬಾಳೆಗೊನೆ ಖರೀದಿ ಮಾಡಲು ಬಂದವರು ಮಳೆಯಲ್ಲಿ‌ ನೆಂದರು.

ಭಕ್ತರ ಸಂಖ್ಯೆ ಕಡಿಮೆ: ಪ್ರತಿ ಮಂಗಳವಾರ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಲಕ್ಷಾಂತರ ಜನ ಬರುತ್ತಿದ್ದರು. ಮಳೆಯ ಕಾರಣದಿಂದ ಭಕ್ತರ ಸಂಖ್ಯೆ ಸಂಜೆ ವೇಳೆಗೆ ಕಡಿಮೆಯಾಗಿತ್ತು.

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ಹುಲಿಗೆಮ್ಮ ದೇವಸ್ಥಾನದ ತಟದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ‌ಮೊದಲ ಬಾರಿಗೆ ಹಮ್ಮಿಕೊಂಡಿರುವ ತುಂಗಭದ್ರಾ ಆರತಿ ಮತ್ತು ಬಾಗಿನ ಅರ್ಪಣೆ ಕಾರ್ಯಕ್ರಮ ಮಂಗಳವಾರ ಸಂಜೆ 6.30ಕ್ಕೆ ನಿಗದಿಯಾಗಿದೆ. ಆದರೆ ಬಿರುಸು ಮಳೆಯಾಗಿದ್ದು ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಕಾರ್ಯಕ್ರಮದ ಮೇಲೆ ಆತಂಕದ ಕಾರ್ಮೋಡ ಕವಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.