ಗಂಗಾವತಿ: ತಾಲ್ಲೂಕಿನಲ್ಲಿ ಹಲವು ಬಸ್ ತಂಗುದಾಣಗಳು ಶಿಥಿಲಗೊಂಡಿದ್ದು ಶಾಲೆ-ಕಾಲೇಜುಗಳಿಗೆ ವಿದ್ಯಾರ್ಥಿಗಳು, ಜನ ಅನಿವಾರ್ಯವಾಗಿ ರಸ್ತೆ ಪಕ್ಕದ ಅಂಗಡಿಗಳ ಮುಂದೆ ಬಸ್‌ಗಾಗಿ ಕಾಯುತ್ತಾ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.
ಕೆಲ ತಿಂಗಳಿಂದ ತಾಲ್ಲೂಕಿನಲ್ಲಿ ಮೋಡಕವಿದ ವಾತಾವರಣ ಇದೆ. ನಿರಂತರವಾಗಿ ಮಳೆ ಸುರಿಯುತ್ತಿದ್ದು ವಿದ್ಯಾರ್ಥಿಗಳು ಮಳೆಯಲ್ಲೇ ನಿತ್ಯ ಶಾಲೆ-ಕಾಲೇಜುಗಳಿಗೆ ತೆರಳಬೇಕಾಗಿದೆ.
ಗ್ರಾಮೀಣ ಭಾಗದಲ್ಲಿ 40ವರ್ಷಕ್ಕೂ ಹೆಚ್ಚು ಹಳೆಯದಾದ ಬಸ್ ತಂಗುದಾಣಗಳಿವೆ. ಅವುಗಳ ಚಾವಣಿ ಸಿಮೆಂಟ್ ಪದರು ಕಿತ್ತು ಹೋಗಿವೆ. ಕಬ್ಬಿಣದ ರಾಡ್ ಹೊರ ಬಿದ್ದು ಕುಸಿಯುವ ಹಂತ ತಲುಪಿವೆ. ತಾಲ್ಲೂಕಿನಲ್ಲಿ 53ಕ್ಕೂ ಹೆಚ್ಚು ಬಸ್ ತಂಗುದಾಣಗಳಲ್ಲಿ, ಶೇ80ರಷ್ಟು ಶಿಥಿಲವಾದ ಸ್ಥಿತಿಯಲ್ಲಿದ್ದು ನಿರ್ವಹಣೆಯ ಕೊರತೆ ಎದುರಿಸುತ್ತಿವೆ.
2 ವರ್ಷಗಳ ಹಿಂದೆ ಶಾಸಕರ ಅನುದಾನದಡಿ ಅಂಜನಾದ್ರಿ ಬೆಟ್ಟ, ಕಡೆಬಾಗಿಲು, ಸಾಯಿನಗರ, ಮರಳಿ, ಆಗೋಲಿ ಸೇರಿ ವಿವಿಧೆಡೆ ಬಸ್ ಶೆಲ್ಟರ್ ನಿರ್ಮಿಸಲಾಗಿತ್ತು. ಈಗ ಎಲ್ಲ ಶೆಲ್ಟರ್‌ಗಳಲ್ಲಿನ ಕುರ್ಚಿಗಳು ಮುರಿದು ಬಿದ್ದು ಕುಳಿಕೊಳ್ಳಲು ಆಸನಗಳು ಇಲ್ಲದಂತಾಗಿದೆ.
ಇನ್ನೂ ಕೆಲ ತಂಗುದಾಣಗಳು ಕಸ ಹಾಕುವ, ಕುಡಕರ, ನಿರಾಶ್ರಿತರ ಆಶ್ರಯ ತಾಣಗಳಾಗಿ ಮಾರ್ಪಟ್ಟಿವೆ. ನಿರ್ವಹಣೆ ಇಲ್ಲದೆ ತಂಗುದಾಣಗಳಲ್ಲಿ ಕಸ, ಪ್ಲಾಸ್ಟಿಕ್, ಮಳೆನೀರು ಸೇರಿ ದುರ್ವಾಸನೆ ಬೀರುತ್ತಿವೆ.
ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ: ತಾಲ್ಲೂಕಿನ ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿನ ಸಮುದಾಯ ಭವನ, ತಂಗುದಾಣ, ಗ್ರಂಥಾಲಯ ಸೇರಿ ಇತರೆ ಸರ್ಕಾರಿ ಕಟ್ಟಡಗಳನ್ನ 15ನೇ ಹಣಕಾಸು ಯೋಜನೆಯಡಿ ನಿರ್ವಹಣೆ ಮಾಡಲು ಅವಕಾಶ ಇದೆ. ಆದರೆ ಪಿಡಿಒಗಳಾಗಲಿ, ತಾ.ಪಂ ಇಒ ಆಗಲಿ ಈ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳುತ್ತಿಲ್ಲ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಲೇ ತಂಗುದಾಣಗಳು ಪಾಳುಬಿದ್ದಿವೆ ಎನ್ನುವುದು ಪ್ರಯಾಣಿಕರ ಅಸಮಾಧಾನ.
ದುರಸ್ತಿಗೆ ಕಾದ ತಂಗುದಾಣ: ತಾಲ್ಲೂಕಿನ ತಿರುಮಲಾಪುರ ಹನುಮನಹಳ್ಳಿ, ಚಿಕ್ಕರಾಂಪುರ, ಸಂಗಾಪುರ, ಸಾಯಿನಗರ, ದಾಸನಾಳ, ಚಿಕ್ಕಜಂತಕಲ್, ಹಣವಾಳ, ವೆಂಕಟಗಿರಿ, ಆಗೋಲಿ, ಚಿಕ್ಕಬೆಣಕಲ್, ಡಣಾಪುರ, ಹೊಸಕೇರಾ, ಮಲ್ಲಾಪುರ ಸೇರಿ ಹಲವು ತಂಗುದಾಣಗಳು ಹಲವು ವರ್ಷಗಳಿಂದ ದುರಸ್ತಿಗೆ ಕಾದು ನಿಂತಿವೆ. ಬಂಡಿಬಸಪ್ಪ ಕ್ಯಾಂಪ್ ಬಸ್ ನಿಲ್ದಾಣವೇ ಇಲ್ಲ.
ರಸ್ತೆಯಲ್ಲಿ ನಿಲ್ಲುವ ಪ್ರಯಾಣಿಕರು: ಹುಲಿಗಿ- ಗಂಗಾವತಿ, ಶ್ರೀರಾಮನಗರ-ಗಂಗಾವತಿ, ವೆಂಕಟಗಿರಿ-ಗಂಗಾವತಿ, ಗಂಗಾವತಿ -ಹುಲಿಗಿಗೆ ತೆರಳುವ ಪ್ರಯಾಣಿಕರು, ವಿದ್ಯಾರ್ಥಿಗಳು ತಮ್ಮ ಗ್ರಾಮಗಳಲ್ಲಿನ ತಂಗುದಾಣಗಳು ಶಿಥಿಲವಾಗಿ, ಕುಸಿಯುವ ಹಂತದಲ್ಲಿರುವ ಕಾರಣ ಪರ್ಯಾಯ ಸ್ಥಳಗಳಿಲ್ಲದೇ ಅನಿವಾರ್ಯವಾಗಿ ಮಳೆಯಲ್ಲಿ, ರಸ್ತೆಪಕ್ಕದ ಮನೆ ಅಂಗಡಿ ಬಳಿ ನಿಲ್ಲಬೇಕಾಗಿದೆ.
ಶಾಸಕರ ನಿರ್ಲಕ್ಷ್ಯ, ಅಭಿವೃದ್ಧಿ ಕುಂಠಿತ: ‘ಹಲವು ವರ್ಷಗಳಿಂದ ತಾಲ್ಲೂಕಿನ ಬಸ್ ತಂಗುದಾಣಗಳು ನಿರ್ವಹಣೆ ಕೊರತೆಯಿಂದ ಶಿಥಲವಾದ ಸ್ಥಿತಿಯಲ್ಲಿವೆ. ತಾಲ್ಲೂಕಿನ ಪ್ರತಿ ಗ್ರಾಮಕ್ಕೆ ಭೇಟಿ ನೀಡುವ ಶಾಸಕ ಜಿ.ಜನಾರ್ದನರೆಡ್ಡಿಗೆ ಈ ತಂಗುದಾಣಗಳ ಸ್ಥಿತಿಗಳು ಕಾಣುವುದಿಲ್ಲವೇ. ಮತದಾನ ಹಾಕಿ ನೀಡಿ ತಪ್ಪು ಮಾಡಿದ್ದೇವೆ’ ಎಂದು ಗ್ರಾಮೀಣ ಭಾಗದ ಸಾರ್ವಜನಿಕರು ಅರೋಪಿಸಿದ್ದಾರೆ.
ಸಾಯಿನಗರದ ಎಸ್.ಕೆ.ಎನ್.ಜಿ ಕಾಲೇಜಿನಲ್ಲಿ 3 ಸಾವಿರ ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಬಸ್‌ಗಾಗಿ ಕಾಯಲು ನಿಲ್ದಾಣವೇ ಇಲ್ಲ. ಬಸ್ ಶೆಲ್ಟರ್ ಸಂಪೂರ್ಣ ಹಾಳಾಗಿದೆ-ರವಿಕುಮಾರ, ಎಸ್‌ಕೆಎನ್‌ಜಿ ಕಾಲೇಜಿನ ವಿದ್ಯಾರ್ಥಿ
ಗಂಗಾವತಿ ತಾಲ್ಲೂಕಿನ ಎಲ್ಲ ಪಿಡಿಒಗಳಿಗೆ ತಮ್ಮ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿನ ಬಸ್ ತಂಗುದಾಣಗಳನ್ನು ಪರಿಶೀಲಿಸಿ ದುರಸ್ತಿ ಆಗಬೇಕಿದ್ದರೆ ಸರಿಪಡಿಸಲು ಸೂಚಿಸಿ ಕ್ರಮಕೊಳ್ಳುತ್ತೇನೆ-ರಾಮರೆಡ್ಡಿ ಪಾಟೀಲ, ತಾ.ಪಂ ಇಒ ಗಂಗಾವತಿ
ಹನುಮನಹಳ್ಳಿ ಗ್ರಾಮದಲ್ಲಿನ ಬಸ್ ತಂಗುದಾಣ ದುರಸ್ತಿಗೆ ಕಾದು ಹಲವು ವರ್ಷಗಳು ಕಳೆದಿವೆ. ಇದರ ನಿರ್ವಹಣೆಗೆ ಯಾರೂ ಸ್ಪಂದಿಸಿಲ್ಲ. ನಿತ್ಯ ರಸ್ತೆಯಲ್ಲಿ ನಿಂತು ಬಸ್ ಏರುವ ಪರಿಸ್ಥಿತಿಯಿದೆ.-ಪುನೀತಕುಮಾರ, ಹನುಮನಹಳ್ಳಿ ಗ್ರಾಮದ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.