ADVERTISEMENT

ಗಂಗಾವತಿ | ಗ್ಯಾಸ್‌ ಸಿಲಿಂಡರ್ ಸ್ಫೋಟ: ಛಿದ್ರಗೊಂಡ ಮನೆ, ಏಳು ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 6:07 IST
Last Updated 12 ಡಿಸೆಂಬರ್ 2025, 6:07 IST
   

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹೆಬ್ಬಾಳ ಗ್ರಾಮದ ಹರಿಜನ ಕೇರಿ ಓಣಿಯ ರಾಜೇಶ ಎಂಬುವವರ ಮನೆಯಲ್ಲಿ ಶುಕ್ರವಾರ ಬೆಳಗಿನ ಜಾವ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ ಮನೆಯೊಂದು ಛಿದ್ರವಾಗಿದ್ದು, ಏಳು ಜನ ಗಾಯಗೊಂಡಿದ್ದಾರೆ.

ಹೊಸದಾಗಿ ಖರೀದಿಸಿದ್ದ ಸಿಲಿಂಡರ್‌ ಸೋರಿಕೆಯಾಗಿದ್ದರಿಂದ ವಾಸನೆ ಬರುತ್ತಿತ್ತು. ಸಿಲಿಂಡರ್‌ ಇರಿಸಿದ್ದ ಕೊಠಡಿಯಲ್ಲಿಯೇ ಮಹಿಳೆ ಬಂದು ಗ್ಯಾಸ್ ಹೆಚ್ಚಲು ಮುಂದಾಗಿದ್ದಾಗ ಸಿಲಿಂಡರ್‌ ಸ್ಫೋಟವಾಗಿದೆ. ಗಾಯಾಳುಗಳನ್ನು ಗಂಗಾವತಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದ ಅಬ್ಬರಕ್ಕೆ ಮನೆಯ ಗೋಡೆಗಳು ಚೆಲ್ಲಾಪಿಲ್ಲಿಯಾಗಿದ್ದವು. ಪಕ್ಕದ ಮನೆಗೂ ಹಾನಿಯಾಗಿದೆ.

ರಾಜೇಶ, ದುರಗಪ್ಪ, ಸುರೇಶ, ಹುಸೇನಮ್ಮ, ನಾಗರಾಜ, ವಿಷ್ಣು, ಹುಲಿಗೆಮ್ಮ ಹಾಗೂ ಶ್ರೀಕಾಂತ್‌ ಗಾಯಗೊಂಡವರು. ಇದರಲ್ಲಿ ಗಂಭೀರವಾಗಿ ಗಾಯಗೊಂಡಿರುವ ರಾಜೇಶ, ಸುರೇಶ ಹಾಗೂ ದುರಗಪ್ಪ ಅವರಿಗೆ ಮೊದಲು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಬಳ್ಳಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕೊಪ್ಪಳ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್‌ ಗ್ರಾಮಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಪರಿಶೀಲಿಸಿ, ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಊರಿನ ಜನ ಬಂದು ವೀಕ್ಷಿಸುತ್ತಿದ್ದ ಚಿತ್ರಣ ಸಾಮಾನ್ಯವಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.