
ಮೊಹಮ್ಮದ್ ಅಜುರುದ್ದೀನ್
ಗಂಗಾವತಿ (ಕೊಪ್ಪಳ ಜಿಲ್ಲೆ): ಜಿಲ್ಲೆಯ ಮಹಿಳೆಯೊಬ್ಬರ ಅಂಗವಿಕಲ ಹೆಣ್ಣುಮಗುವಿಗೆ ಮನೆಪಾಠ ಮಾಡಿ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸುತ್ತೇನೆ ಎಂದು ನಂಬಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಸರ್ಕಾರಿ ಶಾಲೆಯ ಶಿಕ್ಷಕ ಮೊಹಮ್ಮದ್ ಅಜುರುದ್ದೀನ್ ಎಂಬಾತನಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸಷೆನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿ ಶುಕ್ರವಾರ ಆದೇಶಿಸಿದೆ.
2022ರ ಜೂನ್‌ನಲ್ಲಿ ಘಟನೆ ನಡೆದಿದ್ದು, ಆಗ ಅಜುರುದ್ದೀನ್ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸಿಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಜಿಲ್ಲೆಯ ಕಾರಟಗಿಯಲ್ಲಿ ವಾಸವಾಗಿದ್ದ. ನೊಂದ ಮಹಿಳೆಗೆ ಸರ್ಕಾರಿ ಸವಲತ್ತುಗಳನ್ನು ಕೊಡಿಸುತ್ತೇನೆ ಎಂದು ನಂಬಿಸಿ ಅತ್ಯಾಚಾರ ಎಸಗಿದ್ದಲ್ಲದೇ ಅದನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣ ಕೂಡ ಮಾಡಿಕೊಂಡಿದ್ದ.
ಅದನ್ನು ನೊಂದ ಮಹಿಳೆಗೆ ತೋರಿಸಿ ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದರೆ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದ. ಈ ರೀತಿ ಬ್ಲಾಕ್‌ಮೇಲ್ ಮಾಡುವುದು ಸರಿಯಲ್ಲ; ಬಿಟ್ಟುಬಿಡಿ ಎಂದು ಮಹಿಳೆ ಅಂಗಲಾಚಿದರೂ ಅಪರಾಧಿ ಹಲ್ಲೆ ಮಾಡಿ, ನಿಂದಿಸಿದ್ದ. ವಿಡಿಯೊವನ್ನೂ ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟಿದ್ದ. ಈ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
‘ಅಜುರುದ್ದೀನ್ ಮೇಲಿನ ಆರೋಪ ಸಾಬೀತಾಗಿದ್ದು ಜೀವಾವಧಿ ಶಿಕ್ಷೆ ನೀಡಿ ಆದೇಶಿಸಲಾಗಿದೆ. ಅಪರಾಧಿಗೆ ₹6 ಲಕ್ಷ ದಂಡ ವಿಧಿಸಲಾಗಿದ್ದು, ಇದರಲ್ಲಿ ನೊಂದ ಮಹಿಳೆಗೆ ₹5.50 ಲಕ್ಷ ಹಾಗೂ ₹50 ಸಾವಿರ ರಾಜ್ಯ ಸರ್ಕಾರಕ್ಕೆ ತುಂಬಬೇಕು’ ಎಂದು ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ ಅವರು ಆದೇಶಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ನಾಗಲಕ್ಷ್ಮೀ ಎಸ್., ನೊಂದವರ ಪರ ವಾದ ಮಂಡಿಸಿದ್ದರು.
ಇದೇ ನ್ಯಾಯಾಲಯ ಇತ್ತೀಚೆಗೆ ಸಾಣಾಪುರದಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ಜೀವಾವಧಿ ವಿಧಿಸಿ ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.