ADVERTISEMENT

ಗಂಗಾವತಿ: ತಾರ್ಕಿಕ ಅಂತ್ಯ ಕಾಣುವುದೇ ಅನಧಿಕೃತ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ

ಅನಧಿಕೃತ ಹೋಂಸ್ಟೇ, ರೆಸಾರ್ಟ್‌ಗಳಲ್ಲಿ ವಿದ್ಯುತ್‌ ಕಡಿತಕ್ಕೆ ಸೀಮಿತವಾಗಿದ್ದ ಕ್ರಮ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 6:29 IST
Last Updated 2 ಮಾರ್ಚ್ 2026, 6:29 IST
<div class="paragraphs"><p>ಅನಧಿಕೃತ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ ನೋಟ</p></div>

ಅನಧಿಕೃತ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ ನೋಟ

   

ಗಂಗಾವತಿ: ಪ್ರವಾಸೋದ್ಯಮ ಅಭಿವೃದ್ಧಿಗೆ ನೆರವಾಗುವ ನೆಪದಲ್ಲಿ ತಾಲ್ಲೂಕಿನ ಸಾಣಾಪುರ, ಆನೆಗೊಂದಿ ಭಾಗದ ಕಂದಾಯ, ಸರ್ಕಾರಿ, ಅರಣ್ಯ ಪ್ರದೇಶ, ಜನವಸತಿ ಪ್ರದೇಶದಲ್ಲಿ ಅನಧಿಕೃತ ರೆಸಾರ್ಟ್, ಹೊಟೇಲ್, ಹೋಂಸ್ಟೆಗಳು ಯಥೇಚ್ಛವಾಗಿ ನಿರ್ಮಾಣವಾಗಿದ್ದು, ಇವುಗಳ ತೆರವಿಗೆ ಆದೇಶ ಬಂದಾಗ ಅಧಿಕಾರಿಗಳು ಪ್ರತಿಬಾರಿ ನೆಪಕ್ಕೆ ವಿದ್ಯುತ್ ಕಡಿತಗೊಳಿಸಿ ಕೊಠಡಿ ಜಪ್ತಿ ಮಾಡಿ ಸುಮ್ಮನಾಗುತ್ತಿದ್ದಾರೆ.

2019ರಲ್ಲಿ ನ್ಯಾಯಾಲಯದ ಆದೇಶದಂತೆ ವಿರೂಪಾಪುರಗಡ್ಡೆ ಗ್ರಾಮದಲ್ಲಿನ ಅನಧಿಕೃತ ರೆಸಾರ್ಟ್‌ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ನೆಲಸಮ ಮಾಡಲಾಗಿತ್ತು. ನಂತರ ರೆಸಾರ್ಟ್ ಮಾಲೀಕರು ಸಾಣಾಪುರ, ಆನೆಗೊಂದಿ ಭಾಗದಲ್ಲಿ ಪರವಾನಗಿ ಇಲ್ಲದೆ ರೆಸಾರ್ಟ್, ಹೋಂಸ್ಟೆ ನಿರ್ಮಿಸಿಕೊಂಡು ಎಂದಿನಂತೆ ತಮ್ಮ ವ್ಯಾಪಾರ ಮುಂದುವರಿಸಿಕೊಂಡು ಬಂದಿದ್ದರು.

ADVERTISEMENT

ಇತ್ತೀಚೆಗೆ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿ ಕಾಟಾಚಾರದ ತೆರವು ಕಾರ್ಯಾಚರಣೆಗೆ ಚಾಟಿ ಬೀಸಿದ್ದರು. ಕಡ್ಡಾಯವಾಗಿ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅಧಿಕಾರಿಗಳು ಕೊಪ್ಪಳ ಹಾಗೂ ಗಂಗಾವತಿಯಲ್ಲಿರುವ ಅನಧಿಕೃತ ರೆಸಾರ್ಟ್‌ ಹಾಗೂ ಹೋಂಸ್ಟೇಗಳಿಗೆ ಬಿಸಿ ಮುಟ್ಟಿಸಿದ್ದರು.

ಜಾಣಕುರುಡು: ಪರವಾನಗಿ ಪಡೆಯದೆ ವ್ಯಾಪಾರ-ವಹಿವಾಟು ನಡೆಸುತ್ತಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಹಕಾರದಿಂದಾಗಿ ಕಂದಾಯ ಭೂಮಿಗಳಲ್ಲಿ ಹೆಚ್ಚೆಚ್ಚು ರೆಸಾರ್ಟ್, ಹೋಂಸ್ಟೆ ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ನಡೆಯುವ ಎಲ್ಲ ಘಟನೆಗಳ ಬಗ್ಗೆ ತಾಲ್ಲೂಕು ಆಡಳಿತಕ್ಕೆ, ಪೊಲೀಸ್ ಇಲಾಖೆಗೆ ಗಮನಕ್ಕಿದ್ದರೂ ಗೊತ್ತಿಲ್ಲದಂತೆ ನುಣಿಚಿಕೊಳ್ಳುತ್ತಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿದೆ.

‘ಅನಧಿಕೃತ ರೆಸಾರ್ಟ್, ಅಕ್ರಮ ಮದ್ಯಮಾರಾಟ, ಹೋಂಸ್ಟೆಗಳ ಕಡಿವಾಣಕ್ಕೆ ಸಂಘಟನೆಗಳು, ಪರಿಸರ ಪ್ರೇಮಿಗಳು ಪೊಲೀಸ್ ಇಲಾಖೆಗೆ, ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೆ ಇಂತಹ ಚಟುವಟಿಕೆಗಳು ಅಲ್ಲಿ ನಡೆಯುತ್ತಿಲ್ಲ ಎಂಬಂತೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂಬುದು ಜನರ ಆರೋಪವಾಗಿದೆ. 

ವಿದ್ಯುತ್ ಕಡಿತ: 2019ರ ನಂತರ ಸಾಣಾಪುರ, ಆನೆಗೊಂದಿ ಭಾಗದಲ್ಲಿ ಅನಧಿಕೃತ ರೆಸಾರ್ಟ್‌ಗಳು ನಿರ್ಮಾಣವಾಗಿದ್ದು, ಇವು ನ್ಯಾಯಾಲಯ ಆದೇಶ ಉಲ್ಲಂಘಿಸಿ ನಿರ್ಮಿಸಿದ್ದಾರೆ ಎಂದು ಹೊಸಪೇಟೆಯ ಕೊಟ್ಟೂರು ಸ್ವಾಮಿ ಪ್ರಾಧಿಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. 2021-2022, 2023, 2024, 2025ರಲ್ಲಿ ನೆಪಮಾತ್ರಕ್ಕೆ ಕೆಲ ನಧಿಕೃತ ರೆಸಾರ್ಟ್‌ಗಳನ್ನು ತೆರವುಗೊಳಿಸಿದ್ದಾರೆ. ಹಿಂದಿನ  ಐದು ವರ್ಷಗಳಲ್ಲಿ ಆರಕ್ಕೂ ಹೆಚ್ಚು ಬಾರಿ  ಕೇವಲ ವಿದ್ಯುತ್ ಕಡಿತಗೊಳಿಸಿ ಸುಮ್ಮನಾಗಿದ್ದಾರೆ. ವಾರಾಂತ್ಯದ ಬಳಿಕ ಅಲ್ಲಿ ರಂಗಿನ ಲೋಕ ಅನಾವರಣಗೊಳ್ಳುತ್ತಲೇ ಹೋಗುತ್ತದೆ.

ಮೀಟರ್ ಆಳವಡಿಕೆ?: ಅನಧಿಕೃತ ರೆಸಾರ್ಟ್‌ಗಳಿಗೆ ಜೆಸ್ಕಾಂ ಇಲಾಖೆ ಅಧಿಕಾರಗಳೇ ಹೆಚ್ಚಿನ ಹಣ ಪಡೆದು ಮೀಟರ್ ನೀಡಿದ್ದು, ತೆರವಿನ ಆದೇಶ ಬಂದಾಗ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದ್ದಾರೆ. ಬಳಿಕ ಲೈನ್‌ಮನ್‌ ಹಾಗೂ ಕೆಳಹಂತದ ಸಿಬ್ಬಂದಿ ಸಂಪರ್ಕ ಕಲ್ಪಿಸುತ್ತಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಕಳೆದ ವರ್ಷ ಸಾಣಾಪುರದ ಭಾಗದಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಪ್ರವಾಸಿಗನ ಕೊಲೆ ಬಳಿಕ ಪೊಲೀಸರು ಗಸ್ತು ಹೆಚ್ಚಿಸಿದ್ದಾರೆ. ಇದಕ್ಕೂ ಮೊದಲು ಸಾಣಾಪುರ, ಆನೆಗೊಂದಿ ಭಾಗದಲ್ಲಿ ಪ್ರವಾಸಿಗರು ಸಾಣಾಪುರ ಕರೆ, ವಾಟರ್‌ಫಾಲ್ಸ್‌ನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾರೆ. ಈ ಭಾಗದಲ್ಲಿ ನಡೆದ ಅಪರಾಧ ಪ್ರಕರಣಗಳ ಬಗ್ಗೆ ಎಫ್‌ಐಆರ್‌ಗಳು ಕೂಡ ದಾಖಲಾಗಿವೆ.ಅಕ್ರಮವಾಗಿ ಇರುವ ಎಲ್ಲ ಹೋಂಸ್ಟೇಗಳು ಹಾಗೂ ರೆಸಾರ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನಿರಂತರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಡಾ. ಸುರೇಶ ಇಟ್ನಾಳ ಜಿಲ್ಲಾಧಿಕಾರಿ

ಕೊಪ್ಪಳ ತಾಲ್ಲೂಕಿನ ಬಸಾಪುರ ಸಮೀಪದಲ್ಲಿ ರೆಸಾರ್ಟ್‌ ಜಪ್ತಿ ಮಾಡಿರುವುದು
ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟವಿದ್ದು ರೆಸಾರ್ಟ್ ಸಂಸ್ಕೃತಿಯಿಂದ ನಮ್ಮ ನಾಡಿನ ಸಂಸ್ಕೃತಿ ಹಾಳಾಗುತ್ತಿದೆ. ಗಾಂಜಾ ಮಾರಾಟ ಅಕ್ರಮ ಮದ್ಯ ಮೋಜು-ಮಸ್ತಿಗಳ ಹಾವಳಿ ಹೆಚ್ಚಿದೆ. ಕೂಡಲೇ ಎಲ್ಲ ರೆಸಾರ್ಟ್‌ಗಳನ್ನು ತೆರವುಗೊಳಿಸ‌ಬೇಕು
ಬಸವರಾಜ ಮ್ಯಾಗಳಮನಿ ಜಿಲ್ಲಾಧ್ಯಕ್ಷ ಸರ್ವಾಂಗೀಣ ಹೋರಾಟ ಸಮಿತಿ
ಅಕ್ರಮವಾಗಿ ಇರುವ ಎಲ್ಲ ಹೋಂಸ್ಟೇಗಳು ಹಾಗೂ ರೆಸಾರ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನಿರಂತರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಡಾ. ಸುರೇಶ ಇಟ್ನಾಳ ಜಿಲ್ಲಾಧಿಕಾರಿ

ಮಕ್ಕಳಿಗೆ ಹಣದ ಮೋಹ ಶಿಕ್ಷಣಕ್ಕೆ ಗುಡ್ ಬೈ

ಸಾಣಾಪುರ ಆನೆಗೊಂದಿ ಭಾಗದಲ್ಲಿ ಅನಧಿಕೃತ ರೆಸಾರ್ಟ್‌ಗಳಿಗೆ ವಿವಿಧ ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಇವರಿಗೆ ಮಕ್ಕಳು ಭಾನುವಾರ ಸೇರಿ ರಜೆ ದಿನದಲ್ಲಿ ಮದ್ಯ ನೀಡುವಿಕೆ ತೆಪ್ಪ ಸವಾರಿ ಬೈಕ್ ರೆಂಟ್ ಆಟೊ ಸವಾರಿ ಗೈಡ್ (ಮಾಹಿತಿ ನೀಡುವಿಕೆ) ಕೆಲಸ ಮಾಡಿ ಹಣ ಗಳಿಸುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಸಾಕಷ್ಟು ಹಣ ಕೈ ಸೇರುತ್ತಿರುವ ಕಾರಣ ಓದಿಗೆ ಗುಡ್‌ ಬೈ ಹೇಳುತ್ತಿದ್ದಾರೆ. ಬಳಿಕ ತಾವೂ ಮದ್ಯಪಾನ ಧೂಮಪಾನ ಗಾಂಜಾ ಸೇವನೆಗೆ ದಾಸರಾಗುತ್ತಿದ್ದಾರೆ.

53 ಹೋಂ ಸ್ಟೇ 83 ರೆಸಾರ್ಟ್‌ಗಳು ಅನಧಿಕೃತ

ಜಿಲ್ಲಾಧಿಕಾರಿ ಖಡಕ್‌ ಸೂಚನೆಯ ಬಳಿಕ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ್ದು ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯೊಬೇಕಿದೆ. ಮರಳಿ ವಿದ್ಯುತ್‌ ಸಂಪರ್ಕ ಪಡೆದು ವಹಿವಾಟು ನಡೆಸುವ ಕಾನೂನುಬಾಹಿರ ಕೆಲಸಕ್ಕೆ ಕಡಿವಾಣ ಹಾಕಬೇಕಿದೆ ಎನ್ನುವುದು ಸಾರ್ವಜನಿಕ ಆಗ್ರಹವಾಗಿದೆ. ಜಿಲ್ಲಾಡಳಿತವೇ ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಿದ್ದು ಗಂಗಾವತಿ ತಾಲ್ಲೂಕಿನಲ್ಲಿ 10 ಕೊಪ್ಪಳ ತಾಲ್ಲೂಕಿನಲ್ಲಿ ಮೂರು ರೆಸಾರ್ಟ್‌ಗಳು ಮಾತ್ರ ಅಧಿಕೃತವಾಗಿವೆ. ಗಂಗಾವತಿ ವ್ಯಾಪ್ತಿಯಲ್ಲಿ 47 ಹೋಂ ಸ್ಟೇ 40 ರೆಸಾರ್ಟ್‌ಗಳು ಅನಧಿಕೃತವಾಗಿದ್ದು ಕೊಪ್ಪಳ ವ್ಯಾಪ್ತಿಯಲ್ಲಿ 6 ಹೋಂ ಸ್ಟೇ ಮತ್ತು 43 ರೆಸಾರ್ಟ್‌ಗಳು ಪರವಾನಗಿ ಪಡೆದಿಲ್ಲ. ಒಟ್ಟು 53 ಹೋಂ ಸ್ಟೇ ಹಾಗೂ 83 ರೆಸಾರ್ಟ್‌ಗಳು ಅನಧಿಕೃತವಾಗಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.