ADVERTISEMENT

ಗಂಗಾವತಿ: ಆರೈಕೆಗೆ ಸೂಕ್ತವಿಲ್ಲ ‘ಕರಿಯಮ್ಮನಗಡ್ಡೆ’ ಕೂಸಿನ ಮನೆ

ಎನ್.ವಿಜಯ್
Published 23 ಜೂನ್ 2025, 6:31 IST
Last Updated 23 ಜೂನ್ 2025, 6:31 IST
ಸಾಣಾಪುರ ಗ್ರಾಮ ಪಂಚಾಯುತಿ ವ್ಯಾಪ್ತಿಯ ಕರಿಯಮ್ಮನಗಡ್ಡೆ ಗ್ರಾಮದ ಕೂಸಿನ ಮನೆ ಬಳಿ ಬಳಕೆ ಬಾರದಂತಾದ ಶೌಚಾಲಯ
ಸಾಣಾಪುರ ಗ್ರಾಮ ಪಂಚಾಯುತಿ ವ್ಯಾಪ್ತಿಯ ಕರಿಯಮ್ಮನಗಡ್ಡೆ ಗ್ರಾಮದ ಕೂಸಿನ ಮನೆ ಬಳಿ ಬಳಕೆ ಬಾರದಂತಾದ ಶೌಚಾಲಯ   

ಗಂಗಾವತಿ: ಸಾಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಯಮ್ಮನಗಡ್ಡೆ ಗ್ರಾಮದಲ್ಲಿ ನರೇಗಾ ಯೋಜನೆಯ ಮಹಿಳಾ ಕಾರ್ಮಿಕರ ಚಿಕ್ಕ ಮಕ್ಕಳ ಆರೈಕೆಗಾಗಿ ನಿರ್ಮಾಣ ಮಾಡಲಾದ ಕೂಸಿನ ಮನೆ ನಿರ್ವಹಣೆ, ಸೌಲಭ್ಯಗಳ ಕೊರತೆಯಿಂದ ಕಾರ್ಮಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ.

ಮೇಲ್ನೊಟಕ್ಕೆ ಪಿಡಿಒ, ಜನಪ್ರತಿನಿಧಿಗಳು ನಿರ್ವಹಣೆ ಮಾಡಲಾಗುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದರೂ, ಸರ್ಕಾರದ ನಿಯಮಗಳ ಪ್ರಕಾರ ಸೌಲಭ್ಯ ಕಲ್ಪಿಸಿಲ್ಲ. ಇದರಿಂದ ಶಿಶುಪಾಲನ ಕೇಂದ್ರಕ್ಕೆ ಮಕ್ಕಳು ಬರುವುದೇ ವಿರಳವಾಗಿದೆ. 

ಕರಿಯಮ್ಮನಗಡ್ಡೆ ಗ್ರಾಮ ಒಂದು ನೂರು ಸಂಖ್ಯೆ ಹೊಂದಿದ್ದು, ಸಾಣಾಪುರ ಗ್ರಾಮಕ್ಕಿಂತ ಚಿಕ್ಕದು. ಶಿಶುಪಾಲನ ಕೇಂದ್ರಕ್ಕೆ ಸಾಣಾಪುರ ಗ್ರಾಮ ಸೂಕ್ತವಿದ್ದರೂ ಪಿಡಿಒ ಸ್ಥಳದ ಅಭಾವ ತೋರಿ ಅರ್ಧ ಕೀ.ಮೀ ದೂರದ ಕರಿಯಮ್ಮನಗಡ್ಡೆ ಗ್ರಾಮ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಕಲ್ಪಿಸಿ ತಾಯಂದಿರ ಸಂಚಾರಕ್ಕೆ ಸಂಕಷ್ಟ ಮಾಡಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ADVERTISEMENT

ನಿಯಮಗಳ ಪ್ರಕಾರ ಶಿಶುಪಾಲನಾ ಕೇಂದ್ರದಲ್ಲಿ ಕಿಚನ್, ತಾಯಂದಿರಿಗೆ ಮಕ್ಕಳಿಗೆ ಹಾಲುಣಿಸುವ ಕೊಠಡಿ, ಬಾಲಕಿ, ಬಾಲಕಿಯರಿಗೆ ಮಲಗುವ ಪ್ರತ್ಯೇಕ ಕೊಠಡಿ, ಕಂದಮ್ಮಗಳಿಗೆ ಬಟ್ಟೆ ಕೈವಸ್ತ್ರ, ನೀರು, ಕಂಪೌಂಡ್, ಸಮತಟ್ಟಾದ ನೆಲ, ಆಟದ ಗೊಂಬೆಗಳು, ಉಯ್ಯಾಲೆ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಬೇಕಿತ್ತು. ಕರಿಯಮ್ಮನಗಡ್ಡಿ ಕೂಸಿನ ಮನೆಯಲ್ಲಿ ಯಾವೊಂದು ಸೌಲಭ್ಯವಿಲ್ಲ.

ಸಾಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಯಮ್ಮನಗಡ್ಡೆ ಗ್ರಾಮದ ಕೂಸಿನಮನೆ ಬಳಿ ಬಳಕೆ ಬಾರದಂತಾದ ಶೌಚಾಲಯ

ಕೂಸಿನ ಮನೆಯಲ್ಲಿ ನೆಲಕ್ಕೆ ಹಾಸಿದ ಬಂಡೆಗಳ ನಡುವೆ ಸಿಮೆಂಟ್ ಕಿತ್ತಿಹೋಗಿ ತೆಗ್ಗುಗಳು ಬಿದ್ದಿವೆ. ಸ್ವಚ್ಚತೆಯೇ ಇಲ್ಲ. ಮಕ್ಕಳು ಆಡುವಾಗ ತೆಗ್ಗುಗಳಲ್ಲಿನ ಮಣ್ಣುತಿಂದರೇ ಹೇಗೆ ಎಂಬ ಪ್ರಶ್ನೆ ಪಾಲಕರದ್ದು, ಕೇಂದ್ರದ ಮುಂದೆ ಕಲ್ಲುಗಳು, ಸುತ್ತಮುತ್ತ ಕಸ, ಅಗಾಗ ಕೇಂದ್ರ ಮುಂದೆಯೇ ಹಾದು ಹೋಗುವ ಸರಿಸೃಪಗಳ ಕಾಟ. ಇಲ್ಲಿ ಕೆಲಸ ಮಾಡುವುದು ಆರೈಕೆದಾರರಿಗೂ ಕಷ್ಟಕರವಾಗಿದೆ.

ಪಟ್ಟಿಯಂತೆ ಆಹಾರ ವಿತರಣೆಯಿಲ್ಲ: ಮಕ್ಕಳಿಗೆ ವಾರದ ಪೂರ್ತಿ ಪ್ರತಿದಿನ ನಿಗದಿಪಡಿಸಿದ ಆಹಾರ ಪಟ್ಟಿಯಂತೆ ಹಾಲು, ಕಿಚ್ಚಡಿ, ರವೆಗಂಜಿ ನೀಡಬೇಕಿದೆ. ಆದರೆ ಗ್ರಾಮ ಪಂಚಾಯಿತಿ ಅವರು ಸರಿಯಾಗಿ ಆಹಾರ ಪದಾರ್ಥ ಖರೀದಿಸಿ ನೀಡದ ಕಾರಣ, ಆಹಾರ ವಿತರಣೆಯಲ್ಲಿ ಏರುಪೇರು ಆಗುತ್ತಿದೆ. ಕೇಂದ್ರದಿಂದ 200 ಮೀಟರ್ ದೂರದ ಅಂಗನವಾಡಿ ಕೇಂದ್ರಕ್ಕೆ ತೆರಳಿ, ಮಕ್ಕಳಿಗೆ ಅಡುಗೆ ಮಾಡಿ ತರಬೇಕಾದ ದುಸ್ಥಿತಿ ಇಲ್ಲಿದೆ.

ಸಾಣಾಪುರ ಗ್ರಾಮ ಪಂಚಾಯಿ ವ್ಯಾಪ್ತಿಯ ಕರಿಯಮ್ಮನಗಡ್ಡೆ ಗ್ರಾಮದ ಕೂಸಿನಮನೆ ಬಳಿ ಬಳಕೆ ಬಾರದಂತಾದ ಶೌಚಾಲಯ
ಕರಿಯಮ್ಮನಗಡ್ಡಿಯಲ್ಲಿ ನಿರ್ಮಾಣ ಮಾಡಿದ ಕೂಸಿನಮನೆ ಅವೈಜ್ಞಾನಿಕವಾಗಿದ್ದು ಸಾಣಾಪುರದಿಂದ ‌ಕರಿಯಮ್ಮನಗಡ್ಡೆಗೆ ಮಹಿಳೆಯರು ಮಕ್ಕಳ ಹೇಗೆ ಕರೆದೊಯ್ಯಬೇಕು. ಪ್ರಶ್ನಿಸಿದರೇ ಪಿಡಿಒ ನಿಯಮಗಳು ಮಾತಾಡುತ್ತಾರೆ
ಅವಿನಾಶರೆಡ್ಡಿ ಸಾಣಾಪುರ ಗ್ರಾಮದ ನಿವಾಸಿ
ಮಕ್ಕಳ ಆರೈಕೆಗಾಗಿ ಸರ್ಕಾರ ನಿಗದಿ ಪಡಿಸಿದ ಎಲ್ಲ ಸೌಕರ್ಯ ಕಲ್ಪಿಸಬೇಕು. ಇಲ್ಲಿ ಮೆಡಿಕಲ್ ಕಿಟ್ ತುಂಬ ಅಗತ್ಯವಿರುತ್ತದೆ. ಇಲ್ಲಿ ಯಾವ ಸೌಲಭ್ಯ ಕಲ್ಪಿಸದಿರುವುದರಿಂದ ತಾಯಂದಿರು ಕಂದ‌ಮ್ಮ ಬಿಟ್ಟು ಹೋಗುವುದು ಕಡಿಮೆ.
ಹೆಸರು ಹೇಳಲು ಇಚ್ಚಿಸದ ಆರೈಕೆದಾರ ಸಾಣಾಪುರ
ಕೂಸಿನ ಮನೆ ನಿರ್ವಹಣೆ ಗ್ರಾಮ ಪಂಚಾಯಿತಿಯೇ ಮಾಡಬೇಕಿದ್ದು ತೆರಿಗೆ ಸಂಗ್ರಹ ಕಡಿಮೆಯಿದೆ. ಹಾಗಾಗಿ ಇದ್ದುದರಲ್ಲಿ ನಿರ್ವಹಣೆ ಮಾಡಿಕೊಂಡು ಹೋಗಲಾಗುತ್ತಿದೆ. ಕೂಸಿನ ಮನೆ ಸ್ಥಳಾಂತರ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು
ವತ್ಸಲಾ ಪಿಡಿಒ ಸಾಣಾಪುರ ಗ್ರಾಮ ಪಂಚಾಯಿತಿ

ಶೌಚಕ್ಕೆ ಬಯಲೇ ಗತಿ

ಕಂದಮ್ಮಗಳು ನಿತ್ಯ ಕರ್ಮ ಮಾಡಿದರೇ ಅವರ ಸ್ವಚ್ಛತೆಗೆ ಬಳಸಲು ನೀರು ಇಲ್ಲ. ಕೈವಸ್ತ್ರಗಳು ಇಲ್ಲ. ಆರೈಕೆದಾರರು ಸಹ‌ ಪಕ್ಕದ ಬಯಲು ಬೆಟ್ಟವನ್ನೆ ಆಶ್ರಯಿಸಬೇಕಿದೆ. ಶುದ್ದ ಕುಡಿಯುವ ನೀರಿನ ವ್ಯವಸ್ಥೆ ದೂರದ ಮಾತು. ಕೂಸಿನಮನೆ ಮಕ್ಕಳ ಆರೈಕೆ ದೃಷ್ಟಿಯಿಂದ ಸ್ವಚ್ಛಂದವಾಗಿ ಇರಬೇಕಿದೆ. ಕಿಂಚಿತ್ತೂ ಬರಕೂಡದು. ಇದ್ಯಾವುದು ಇಲ್ಲಿಲ್ಲ ಎಂದು ಆರೈಕೆದಾರರು ಅಧಿಕಾರಿಗಳ ವೈಫಲ್ಯ ಬಗ್ಗೆ ಹೇಳುತ್ತಾರೆ. ಕೂಸಿನ ಮನೆಗೆ ಹಲವು ಸೌಲಭ್ಯ ಕಲ್ಪಿಸುವ ಹೊಣೆ ಗ್ರಾಮ ಪಂ‌ಚಾಯಿತಿ ಮೇಲಿದ್ದರೂ ಪಿಡಿಒ ಅನುದಾನದ ಕೊರತೆ ಸಬೂಬು ಹೇಳುತ್ತಾ ಸೌಲಭ್ಯಗಳು ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಒಂದು ಚಾಪೆ ತುಸು ಖುರ್ಚಿ ತುಸು ಗೊಂಬೆ ಗ್ಲಾಸ್ ಬಿಟ್ಟರೇ ಮತ್ತೇನೂ ಕೊಟ್ಟಿಲ್ಲ. ಮಕ್ಕಳಿಗೆ ಅವಧಿ ಮುಕ್ತಾಯದ ಬಿಸ್ಕಿಟ್ ಖರೀದಿಸಿ ನೀಡಿದ ಸಂದರ್ಭವು ನಡೆದಿದೆ ಮಕ್ಕಳ ತಾಯಂದಿರರು ದೂರಿದ್ದಾರೆ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.