
ಸಾಂದರ್ಭಿಕ ಚಿತ್ರ
– ಐಸ್ಟಾಕ್ ಚಿತ್ರ
ಗಂಗಾವತಿ: ನಗರದ ಬಸ್ ನಿಲ್ದಾಣದಲ್ಲಿ ಮಗು ಬ್ಯಾಗ್ ಕಳ್ಳತನ ಮಾಡಿದೆ ಎಂಬ ಆರೋಪದ ದೂರಿನ ಮೇರೆಗೆ 112 ಪೊಲೀಸ್ ಸಿಬ್ಬಂದಿ ಅಲ್ಲಿಗೆ ಹೋಗಿದ್ದು ಮಗುವನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುವ ವೇಳೆ ನಿಯಮ ಪಾಲಿಸಿಲ್ಲ ಎನ್ನುವ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಅವರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಿಗೆ ವರದಿ ಸಲ್ಲಿಸಿದ್ದಾರೆ.
ಪೊಲೀಸರು ಬಾಲಕನನ್ನು ಠಾಣೆಗೆ ಕರೆದುಕೊಂಡು ಹೋಗಿ ಕೋಣೆಯಲ್ಲಿ ಕೂಡಿ ಹಾಕಿದ್ದಲ್ಲದೆ, ಆತನ ಕಾಲಿನ ಮೇಲೆ ಬೂಟ್‌ಗಳನ್ನು ಇಟ್ಟಿದ್ದಾರೆ ಎಂಬ ಗಂಭೀರ ಆರೋಪದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆದ್ದರಿಂದ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಇತ್ತೀಚೆಗೆ ಅವರು ಗಂಗಾವತಿಗೂ ಭೇಟಿ ನೀಡಿದ್ದರು.
‘ಘಟನೆಯ ಕುರಿತು ಗಂಗಾವತಿ ನಗರ ಪೊಲೀಸ್ ಠಾಣೆಗೆ ಪಿಐಗೆ ಮಾಹಿತಿ ಗೊತ್ತಿದ್ದರೂ ತಕ್ಷಣವೇ ಮಗುವಿನ ರಕ್ಷಣೆಗೆ ಕ್ರಮ ಕೈಗೊಳ್ಳದಿರುವುದು ಕಂಡುಬಂದಿದೆ. ಪಿಎಸ್‌ಐ ಹಾಗೂ ಠಾಣಾ ದಿನಚರಿ ಕರ್ತವ್ಯದಲ್ಲಿದ್ದ ಹೆಡ್ ಕಾನ್‌ಸ್ಟೆಬಲ್ ಮಗುವನ್ನು ಠಾಣೆಯಲ್ಲಿ ಮಲಗಿಸಿಕೊಂಡು ಕರ್ತವ್ಯದಲ್ಲಿ ನಿರ್ಲಕ್ಷ್ಯತನ ತೋರಿದ್ದಾರೆ. ಆದ್ದರಿಂದ ಪೊಲೀಸ್ ಅಧಿಕಾರಿಗಳಾದ ನಾಗರಾಜ ಟಿ.ಜಿ., ಪ್ರಕಾಶ ಮಾಳಿ ಹಾಗೂ ಸಿಬ್ಬಂದಿ ವಿರೂಪಾಕ್ಷಿಗೌಡ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ವರದಿಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.