
ಗಂಗಾವತಿ: ನಗರದ ಗ್ರಾಮದೇವತೆ ದುರ್ಗಾದೇವಿ ಜಾತ್ರಾ ಮಹೋತ್ಸವ ಭಾನುವಾರ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿಸುವ ಮೂಲಕ ಅದ್ದೂರಿ ತೆರೆ ಕಂಡಿತು.
ಬೆಳಿಗ್ಗೆಯಿಂದಲೇ ದುರ್ಗಾದೇವಿಗೆ ಅಭಿಷೇಕ, ಅಲಂಕಾರ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆದವು. ಜಾತ್ರೆಯ ಕೊನೆದಿನ ನಿಮಿತ್ತ ಮಹಿಳೆಯರು ಕುಟುಂಬದ ಸಮೇತ ದೇವಸ್ಥಾನಕ್ಕೆ ಆಗಮಿಸಿ, ದೇವಿ ದರ್ಶನ ಪಡೆದರೇ, ಕೆಲ ಮಹಿಳೆಯರು ಎಡೆ ಅರ್ಪಿಸಿ, ದೇವಿ ಕೃಪೆಗೆ ಪಾತ್ರರಾದರು.
ದೇವಸ್ಥಾನದ ಗರ್ಭಗುಡಿಯಲ್ಲಿ ಭಕ್ತರ ದಂಡು ಹೆಚ್ಚಾಗದಂತೆ ಪೊಲೀಸ್ ಸಿಬ್ಬಂದಿ ಭಕ್ತರಿಗೆ ಸಾಲಾಗಿ ಬಂದು ದರ್ಶನ ಪಡೆಯುವಂತೆ ಮಾಡಿದರು.
ಬೆಳಿಗ್ಗೆ ಹರಕೆ ಹೊತ್ತ ಬಹುತೇಕ ಭಕ್ತರು ದೇವಿ ದರ್ಶನ ಪಡೆದ ನಂತರ ಬಂಡಾರ ಎರಚಿಕೊಂಡು ಸಂಭ್ರಮಿಸಿದರು. ಪ್ರಸಾದದ ವ್ಯವಸ್ಥೆ ಸಹ ಕಲ್ಪಿಸಲಾಗಿತ್ತು.
ಜಾತ್ರೆ ಸಾಮಾನು ಖರೀದಿ ಜೋರು: 4 ದಿನಗಳ ಕಾಲ ನಡೆದ ದುರ್ಗಾದೇವಿ ಜಾತ್ರೆಯಲ್ಲಿ ಮಹಿಳೆಯರು, ಯುವತಿಯರು, ಯುವಕರು, ಚಿಣ್ಣರರು ಸಾಮಗ್ರಿಗಳನ್ನು ಖರೀದಿಸಿದರು. ಹಾಗೇ ಅಲ್ಲಲ್ಲಿ ತಿಂಡಿ-ತಿನಿಸುಗಳ ಖರೀದಿ ಸಹ ಭರದಿಂದ ನಡೆಯಿತು.
ಸಂಚಾರ ದಟ್ಟಣೆ ತಪ್ಪಿಸಲು ಬ್ಯಾರಿಕೇಡ್ ಅಳವಡಿಕೆ: ಜಾತ್ರೆಯ ನಿಮಿತ್ತ ದುರ್ಗಾದೇವಿ ದೇವಸ್ಥಾನದ ಬಳಿ ಸಂಚಾರ ದಟ್ಟಣೆ ಉಂಟಾಗದಂತೆ ಗಾಂಧಿವೃತ್ತ, ಗಾಂಧಿನಗರ, ಜುಲೈನಗರ ರಸ್ತೆಮಾರ್ಗಕ್ಕೆ ಬ್ಯಾರಿಕೇಡ್ ಅಳವಡಿಸಿ, ವಾಹನಗಳ ಸಂಚಾರದ ದಿಕ್ಕು ಬದಲಿಸಿ, ಬಂದೋಬಸ್ತಿಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.
ಮನೆ-ಮನೆಗಳಲ್ಲಿ ಊಟ, ಆತ್ಮೀಯರಿಗೆ ಆಹ್ವಾನ: ನಾಲ್ಕು ದಿನಗಳ ದುರ್ಗಾದೇವಿ ಜಾತ್ರೆ 3 ವರ್ಷಕ್ಕೊಮ್ಮೆ ನಡೆಯಲಿದ್ದು, ಇದು ಗಂಗಾವತಿಗೆ ವಿಶೇಷ ಜಾತ್ರೆಯಾಗಿದೆ. ಈ ಜಾ ತ್ರೆಯನ್ನ ಗಂಗಾವತಿ ತುಂಬೆಲ್ಲ ಆಚರಿಸಲಿದ್ದು, ಮನೆಯಲ್ಲಿ ಮಾಂಸದ ಮತ್ತು ತರಕಾರಿ ಊಟ ತಯಾರಿಸಿ, ಕುಟುಂಬದ ಸದಸ್ಯರು ಆತ್ಮೀಯರಿಗೆ, ನೆಂಟರಿಗೆ ಆಹ್ವಾನ ನೀಡಿ, ಉಣ ಬಡಿಸಿದ ದೃಶ್ಯಗಳು ಕಂಡು ಬಂದವು.
ಜಾತ್ರೆಯ ಮೂರನೇ ದಿನ ಶನಿವಾರ ಬೆಳಿಗ್ಗೆ ದುರ್ಗಾದೇವಿ ದೇವಸ್ಥಾನದಲ್ಲಿ ನವ ಚಂಡಿಹೋಮ ಪೂರ್ಣಾಹುತಿ ಮುಕ್ತಾಯದ ನಂತರ ಸಂಜೆ ಕಲ್ಮಠ ಹತ್ತಿರದ ಗಾಳೆಮ್ಮ ದೇವಸ್ಥಾನದಿಂದ ದುರ್ಗಾದೇವಿ ದೇವಸ್ಥಾನದವರೆಗೆ ಸಲಕ ವಾದ್ಯ ಡೊಳ್ಳುಗಳೊಂದಿಗೆ ಬಾಣ-ಬಿರುಸುಗಳಿಂದ ದೇವಿ ವಿಗ್ರಹವನ್ನು ಭವ್ಯ ಮೆರವಣಿಗೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.