
ಗಂಗಾವತಿ: ‘ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮೃತಪಟ್ಟವರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲಾಗುತ್ತದೆ’ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲ್ಲೂಕಿನ ಹೆಬ್ಬಾಳ ಗ್ರಾಮದಲ್ಲಿ ಡಿ.12ರಂದು ನಡೆದ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟಿದ್ದ ಸುರೇಶ ಮತ್ತು ರಾಜು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ, ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
‘ಎಲ್‌ಪಿಜಿ ಕಂಪನಿ ಜೊತೆಗೆ ಈಗಾಗಲೇ ಮಾತನಾಡಲಾಗಿದೆ. ಮೃತರ ಕುಟುಂಬಕ್ಕೆ ಪರಿಹಾರ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ. ಮೃತರ ಕುಟುಂಬಕ್ಕೆ ₹5 ಲಕ್ಷ, ಘಟನೆಯಿಂದ ಹಾನಿಗೆ ಒಳಗಾದ ಮನೆ, ಮರುನಿರ್ಮಾಣಕ್ಕೆ ₹2 ಲಕ್ಷ ಪರಿಹಾರ ನೀಡಲು ಸಿಲಿಂಡರ್ ಕಂಪನಿ ಸೂಚಿಸಲಾಗಿದೆ’ ಎಂದರು.
‘ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಘಟನೆ ನಡೆದ ಕೂಡಲೇ ಸ್ಥಳಕ್ಕೆ ಹೋಗಿದ್ದರು. ಅವರ ಜೊತೆಗೂ ಸಂಪರ್ಕದಲ್ಲಿದ್ದು, ಚಿಕಿತ್ಸೆಗೆ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಹೆಬ್ಬಾಳ ಗ್ರಾಮದಲ್ಲಿ ನಡೆದ ಅಹಿತಕರ ಘಟನೆ ಹಿನ್ನಲೆ ಮೃತರ ಮನೆಗೆ ಭೇಟಿ ನೀಡಿದ್ದೇನೆ’ ಎಂದರು.
‘ವಿಧಾನಸಭೆ ಕಲಾಪದ ಹಿನ್ನೆಲೆ ಘಟನಾ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಆದರೆ, ಘಟನೆ ನಡೆದ ದಿನದಿಂದ ಜಿಲ್ಲಾಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಬಳ್ಳಾರಿಯ ವಿಮ್ಸ್‌ನಲ್ಲಿ ಚಿಕಿತ್ಸೆಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೂಕ್ತ ಚಿಕಿತ್ಸೆ ಕೊಡುವಂತೆ ಈಗಾಗಲೇ ಸಂಬಂಧಿಸಿದ ವೈದ್ಯರಿಗೆ ಸೂಚಿಸಲಾಗಿದೆ’ ಎಂದರು.
ಡಿಸಿಎಂ ಡಿ.ಕೆ. ಶಿವಕುಮಾರ ಅವರು ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರನ್ನು ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಪಕ್ಷ ನಾಯಕರು ಮತ್ತೊಬ್ಬ ನಾಯಕರನ್ನು ಭೇಟಿ ಮಾಡುವುದು ಸಾಮಾನ್ಯ. ನಮ್ಮ ಪಕ್ಷದ ಮುಖಂಡರನ್ನು ನಾವು ಭೇಟಿ ಮಾಡಿದ್ದು ವಿಶೇಷ ಏನಿಲ್ಲ? ಎಂದರು.
‘ಸಿಎಂ ಯಾರು ಆಗಬೇಕು ಎಂಬುದನ್ನು ನಮ್ಮ ಪಕ್ಷದ ಹೈಕಮಾಂಡ್ ತೀ ರ್ಮಾನ ಮಾಡುತ್ತದೆ. ದೆಹಲಿ ನಮಗೆ ಗರ್ಭಗುಡಿ, ದೇವಸ್ಥಾನ ಇದ್ದಂತೆ. ನಮ್ಮ ಎಐಸಿಸಿ ಅಧ್ಯಕ್ಷರು, ನಮ್ಮ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ದೆಹಲಿಯಲ್ಲಿ ಇರುತ್ತಾರೆ. ಅವರನ್ನು ಭೇಟಿ ಮಾಡಲು ನಮ್ಮ ನಾಯಕ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ ಹೋಗಿದ್ದಾರೆ ಅಷ್ಟೇ. ವಿರೋಧ ಪಕ್ಷಗಳಿಗೆ ಕಾಮನ್ ಸೆನ್ಸ್ ಕಡಿಮೆ ಇದೆ. ಮಾಹಿತಿ ಕೊರತೆಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಾರೆ’ ಎಂದರು.
ಜಿಲ್ಲಾಧಿಕಾರಿ ಸುರೇಶ ಬಿ.ಇಟ್ನಾಳ, ಎಸ್‌ಪಿ ರಾಮ್ ಅರಸಿದ್ದಿ, ಡಿವೈಎಸ್ಪಿ ಜೆ.ಎಸ್ ನ್ಯಾಮನಗೌಡರ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಮುಖಂಡ ಚಂದ್ರಶೇಖರ ಗೋನಾಳ, ರಮೇಶ ನಾಯಕ, ದೊಡ್ಡಪ್ಪ ದೇಸಾಯಿ ಸೇರಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.