ADVERTISEMENT

ಗವಿಸಿದ್ಧೇಶ್ವರ ಮಹಾರಥೋತ್ಸವ: ಪೊಲೀಸ್‌ ಶ್ವಾನಗಳ ಸಾಹಸ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 10:24 IST
Last Updated 8 ಜನವರಿ 2023, 10:24 IST
   

ಕೊಪ್ಪಳ: ಗವಿಸಿದ್ಧೇಶ್ವರ ಮಹಾರಥೋತ್ಸವ ಅಂಗವಾಗಿ ಇಲ್ಲಿನ ಗವಿಮಠದ ಆವರಣದಲ್ಲಿ ಭಾನುವಾರ ಜಿಲ್ಲಾ ಪೊಲೀಸರ ವತಿಯಿಂದ ನಡೆದ ಶ್ವಾನಗಳ ಸಾಹಸ ಪ್ರದರ್ಶನ ಗಮನ ಸೆಳೆಯಿತು.

ಅಪರಾಧ ಪತ್ತೆ ಮಾಡುವ ಪೊಲೀಸ್ ಶ್ವಾನಗಳ ಕಾರ್ಯವೈಖರಿ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಲಾಯಿತು. ಜಿಲ್ಲಾ ಪೊಲೀಸ್ ಶ್ವಾನದಳದ ಸಿಂಧು, ಕಿನ್ನಿ, ತುಂಗಾ ಹಾಗೂ ಬಿಂದು ಅಪರಾಧ ತಡೆಯುವಲ್ಲಿ ಅವುಗಳ ಚಾಣಾಕ್ಷತನ ಪ್ರದರ್ಶಿಸಿದವು. ಅಪರಾಧ ಮಾಡಿರುವ ವ್ಯಕ್ತಿಯನ್ನು ಹುಡುಕುವುದು, ವಸ್ತುಗಳನ್ನು ಎಲ್ಲಿಯೋ ಬಿಟ್ಟು ಬಂದು ಮರೆತಿರುವುದನ್ನು ಪತ್ತೆ ಹಚ್ಚುವುದು, ವಸ್ತುಗಳನ್ನು ಕಾಯುವುದು ಹೀಗೆ ಹಲವಾರು ಪ್ರಾತ್ಯಕ್ಷಿಕೆ ತೋರಿಸಲಾಯಿತು.

ಶ್ವಾನಗಳ ಈ ಕಾರ್ಯವನ್ನು ನೋಡಿದವರು ಪೊಲೀಸರು ಅಪರಾಧ ಪತ್ತೆಗೆ ಶ್ವಾನಗಳ ಹೇಗೆಲ್ಲ ಸಹಾಯ ಮಾಡುತ್ತವೆ ಎನ್ನುವುದನ್ನು ತಿಳಿದುಕೊಂಡರು.

ADVERTISEMENT

ಕಾರ್ಯಕ್ರಮಗಳು: ಭಾನುವಾರ ಸಂಜೆ 6 ಗಂಟೆಗೆ ಮಠದ ಕೈಲಾಸ ಮಂಟಪದಲ್ಲಿ ಅನುಭಾವಿಗಳ ಅಮೃತ ಚಿಂತನ ಗೋಷ್ಠಿ ಜರುಗಲಿದೆ.

ಮಹಾರಾಷ್ಟ್ರದ ಗೌಡಗಾಂವ್‌ನ ಸಂಸ್ಥಾನ ಹಿರೇಮಠದ ಜಯಸಿದ್ದೇಶ್ವರ ಸ್ವಾಮೀಜಿ, ಕನಕಗಿರಿಯ ಸುವರ್ಣಗಿರಿ ವಿರಕ್ತಮಠದ ಚನ್ನಮಲ್ಲ ಸ್ವಾಮೀಜಿ, ಖಜ್ಜಿಡೋಣಿಯ ಕೃಷ್ಣಾನಂದ ಶಾಸ್ತ್ರಿ, ಸೀತಾಗಿರಿ ಅಣ್ಣಿಗೇರಿ ಆಶ್ರಮದ ಡಾ. ಎ.ಸಿ. ವಾಲಿ ಮಹಾರಾಜರು ಪಾಲ್ಗೊಳ್ಳುವರು.

ಪ್ರಗತಿಪರ ರೈತ ಪದ್ಮಶ್ರೀ ಪುರಸ್ಕೃತ ದಕ್ಷಿಣ ಕನ್ನಡದ ಅಮೈ ಮಹಾಲಿಂಗ ನಾಯಕ್‌, ಪಶ್ಚಿಮ ಬಂಗಾಳದ ಆನಂದ ಶಿಕ್ಷಾ ನಿಕೇತನ ಸ್ಥಾಪಕ ಬಾಬರ್‌ ಅಲಿ ಪಾಲ್ಗೊಳ್ಳುವರು. ಸಂಗೀತ ನಾದಲೋಕ, ಭಾವಲಹರಿ ಸುಗಮ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ.

ತೋಟಗಾರಿಕೆ ಇಲಾಖೆಯು ಜ. 8ರಂದ ಮೂರು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದೆ. ಹೂವಿನ ಹಾಗೂ ಹಣ್ಣಿನ ಮಾದರಿಗಳನ್ನು ಸಿದ್ಧಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.