
ಕೊಪ್ಪಳದ ಗವಿಮಠದ ಜಾತ್ರೆಯಲ್ಲಿ ತರಕಾರಿ ಹೆಚ್ಚುವ ಸೇವೆಗೆ ಬಂದಿದ್ದ ಮಹಿಳೆಯರು –
ಪ್ರಜಾವಾಣಿ ಚಿತ್ರಗಳು/ಭರತ್ ಕಂದಕೂರ
ಕೊಪ್ಪಳ: ಜಾತ್ರೆ ಎಂದಾಕ್ಷಣ ನೂಕಾಟ, ತಳ್ಳಾಟ, ಗೋಜು ಗದ್ದಲ, ಊಟಕ್ಕಾಗಿ ಪರದಾಟ ಇವೆಲ್ಲವೂ ಸಾಮಾನ್ಯ. ಆದರೆ ಗವಿಮಠದ ಜಾತ್ರೆಗೆ ಏಕಕಾಲಕ್ಕೆ ಲಕ್ಷಾಂತರ ಭಕ್ತರು ಬಂದರೂ ಅಲ್ಲಿ ಯಾವುದೇ ಅವಸರವಿಲ್ಲ. ನೂಕುನುಗ್ಗಲಂತೂ ಇಲ್ಲವೇ ಇಲ್ಲ. ಸಮಾಧಾನದಿಂದ ಒಬ್ಬರಾದ ಮೇಲೊಬ್ಬರು ಬಂದ ಜಾತ್ರೆಯಲ್ಲಿ ಊಟ ಸವಿಯುತ್ತಾರೆ.
ಗವಿಮಠದ ಜಾತ್ರೆಗೆ ಪ್ರತಿವರ್ಷ ಸೇವಾಕರ್ತರೇ ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಾರೆ. ಜಾತ್ರೆ ಆರಂಭವಾಗುವ ಒಂದು ತಿಂಗಳು ಮೊದಲೇ ಉತ್ತರ ಕರ್ನಾಟಕದ ಜಿಲ್ಲೆಗಳ ಹಳ್ಳಿಗಳಲ್ಲಿ ಜೋಳದ ರೊಟ್ಟಿ, ಶೇಂಗಾ ಚಟ್ನಿ, ಉಪ್ಪಿನಕಾಯಿ, ಶೇಂಗಾ ಹೋಳಿಗೆ ಹೀಗೆ ತರಹೇವಾರಿ ಖಾದ್ಯಗಳನ್ನು ಜನ ತಯಾರಿಸಿ ಮಠಕ್ಕೆ ಭಕ್ತಿಯಿಂದ ಸೇವೆ ಎಂದು ಸಮರ್ಪಿಸುತ್ತಾರೆ.
ಭಕ್ತರಿಗೆ ತಯಾರಿಸಲಾಗಿದ್ದ ಸಾಂಬಾರಿಗೆ ಕೊಪ್ಪರಿಕೆ
ವಿವಿಧ ಜಾತಿಗಳ, ಧರ್ಮಗಳ ಮನೆಯಿಂದ ಸಂಗ್ರಹವಾದ ಧಾನ್ಯ, ತಿನಿಸುಗಳು ಗವಿಮಠದ ಮಹಾದಾಸೋಹದ ಮನೆಯಿಂದ ಭಕ್ತರಿಗೆ ಸಮರ್ಪಣೆಯಾಗುತ್ತವೆ. ವರ್ಷದಿಂದ ವರ್ಷಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಗೆ ಬರುತ್ತಿದ್ದು, ಅದಕ್ಕೆ ತಕ್ಕಂತೆ ವ್ಯವಸ್ಥೆಯನ್ನು ಗವಿಮಠ ಮಾಡುತ್ತದೆ. ಊಟ ಮಾಡಿದ ಬಳಿಕ ಭಕ್ತರೇ ತಟ್ಟೆ ತೊಳೆಯುವುದು, ತಟ್ಟೆಯಲ್ಲಿರುವ ಎಲ್ಲ ಊಟವನ್ನು ಮಾಡುವುದು, ಶಿಸ್ತು, ಸಂಯಮ ಕಾಪಾಡುವುದನ್ನು ಮಾಡುತ್ತಾರೆ. ಹೀಗಾಗಿ ಜನಸಂದಣಿ ನಿರ್ವಹಣೆ ಸಂಘಟಕರು ಸಮಸ್ಯೆಯೇ ಎನಿಸಿಲ್ಲ.
ದಾನಿಗಳು, ಉದ್ಯಮಿಗಳು, ಗವಿಮಠದ ಭಕ್ತರು ಹೀಗೆ ಅನೇಕರು ತಮ್ಮ ಶಕ್ತಿಗೆ ಅನುಸಾರವಾಗಿ ಆಹಾರ ತಯಾರಿಕೆಯ ಪದಾರ್ಥಗಳನ್ನು ನೀಡುತ್ತಾರೆ. ಹೀಗೆ ಮನೆಮನೆಯಿಂದ ಬಂದು ಗವಿಮಠದಲ್ಲಿ ಆಹಾರದ ಸಾಮಗ್ರಿಗಳ ಸಾಗರವೇ ನಿರ್ಮಾಣವಾಗುತ್ತದೆ. ಈ ವರ್ಷದ ಮಹಾದಾಸೋಹ ಜನವರಿ 1ರಂದು ಪ್ರಾರಂಭವಾಗಿದ್ದು, ಮಹಾರಥೋತ್ಸವ ಮುಗಿದು ಮುಂಬರುವ ಅಮವಾಸ್ಯೆಯ (ಜ.18) ತನಕ ಇರುತ್ತದೆ. ಈ ಅವಧಿಯಲ್ಲಿ ಕನಿಷ್ಠ 20 ಲಕ್ಷ ಭಕ್ತರು ಮಠದ ಮಹಾದಾಸೋಹ ಸವಿಯುತ್ತಾರೆ.
ಆ ಭಕ್ತರಿಗಾಗಿ ಈ ವರ್ಷ 18.50 ಲಕ್ಷ ಜೋಳದ ರೊಟ್ಟಿ, 25 ಕ್ವಿಂಟಲ್ ಸಿಹಿ ಬೂಂದಿ, 175 ಕ್ವಿಂಟಲ್ ಮೈಸೂರು ಪಾಕ್, 62 ಕ್ವಿಂಟಲ್ ಶೇಂಗಾ ಹೋಳಿಗೆ, 465 ಕ್ವಿಂಟಲ್ ಮಾದಲಿ, ಐದು ಕ್ವಿಂಟಲ್ ಜಿಲೇಬಿ,7 ಕ್ವಿಂಟಲ್ ಖರ್ಚಿಕಾಯಿ, 5 ಕ್ವಿಂಟಲ್ ಶಂಕರಪೋಳಿ, 155 ಕೆ.ಜಿ. ಸೋನ್ ಪಾಪಡಿ, 8 ಕ್ವಿಂಟಲ್ ಕರದಂಟು, 1 ಕ್ವಿಂಟಲ್ ಬಾದಾಮಿ ಪುರಿ, 47 ಕ್ವಿಂಟಲ್ ರವೆ ಉಂಡಿ, ಆರು ಲಕ್ಷ ಮಿರ್ಚಿ ಹೀಗೆ ಅನೇಕ ತಿನಿಸುಗಳು ಸಂಗ್ರಹವಾಗಿವೆ. ಇನ್ನೂ ಬರುತ್ತಲೇ ಇವೆ. ಇವೆಲ್ಲವೂ ಭಕ್ತರಿಗಾಗಿ ಭಕ್ತರೇ ಸಿದ್ಧಪಡಿಸಿದ್ದಾರೆ. ಈಗಾಗಲೆ 100 ಕ್ವಿಂಟಲ್ ಅಕ್ಕಿ, 10 ಕ್ವಿಂಟಲ್ ಸಿಹಿ ಪದಾರ್ಥ ಖಾಲಿಯಾಗಿದೆ.
ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಭಕ್ತರಿಂದ ಸಂಗ್ರಹವಾದ ಜೋಳದ ರೊಟ್ಟಿಗಳ ರಾಶಿ
ದೊಡ್ಡ ಕೊಪ್ಪರಿಕೆಗಳಲ್ಲಿ ಒಂದು ಬಾರಿ ಸಾಂಬಾರು ತಯಾರಿಸಿದರೆ ಕನಿಷ್ಠ 30 ಸಾವಿರ ಜನ ಊಟ ಮಾಡಲು ಸಾಧ್ಯವಾಗುತ್ತದೆ. ಅನ್ನ ತಯಾರಿಸಲು ಕಾಯಂ ಆಗಿ ಒಲೆಗಳು ಉರಿಯುತ್ತಲೇ ಇರುತ್ತವೆ. ಇಷ್ಟೊಂದು ದೊಡ್ಡ ಸಂಖ್ಯೆಯ ಭಕ್ತರಿಗೆ ಕಟ್ಟಿಗೆಯ ಒಲೆಯ ಮೇಲೆ ಅಡುಗೆ ತಯಾರಿಸಲಾಗುತ್ತದೆ ಎನ್ನುವುದು ವಿಶೇಷ.
ಅಡುಗೆ ತಯಾರಿಸುವವರು, ಬಡಿಸುವವರು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವವರು, ನಿರ್ವಹಣೆ ಮಾಡುವವರು, ತರಕಾರಿ ಹೆಚ್ಚುವವರು ಹೀಗೆ ಎಲ್ಲರೂ ಅಜ್ಜನ ಜಾತ್ರೆಗೆ ಸೇವೆ ಮಾಡಲು ಬಂದವರು. ಮಠದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಈ ಕಾರ್ಯಕ್ಕೆ ಕೈ ಜೋಡಿಸುತ್ತಾರೆ. ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಮಹಿಳಾ ಸಂಘದವರು, ಸ್ನೇಹಿತರು ತಂಡಗಳನ್ನು ಕಟ್ಟಿಕೊಂಡು ಬಂದು ಅಡುಗೆ ಬಡಿಸುತ್ತಾರೆ.
ಅಮೆರಿಕದಿಂದ ಬಂದ ಭಕ್ತರು
ಗವಿಮಠದ ಜಾತ್ರೆಯ ವೈಭವ ಕಣ್ತುಂಬಿಕೊಳ್ಳಲು ಗದಗ ಜಿಲ್ಲೆಯ ನಿರಂಜನ ಎನ್ನುವವರು ಅಮೆರಿಕದಿಂದ ಬಂದಿದ್ದರು. 20 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿರುವ ಅವರು ಇಲ್ಲಿನ ಸಂಸ್ಕೃತಿ ಸಂಭ್ರಮವನ್ನು ತೋರಿಸಲು ಕುಟುಂಬ ಸಮೇತರಾಗಿ ಬಂದಿದ್ದರು.
ಈ ವೇಳೆ ‘ಪ್ರಜಾವಾಣಿ’ ಜೊತೆ ಮಾತನಾಡಿ ‘ಗವಿಮಠದ ಜಾತ್ರೆಯ ಬಗ್ಗೆ ಒಂದೂವರೆ ದಶಕಗಳ ಹಿಂದೆಯೇ ತಿಳಿದುಕೊಂಡಿದ್ದರೂ ಬರಲು ಸಾಧ್ಯವಾಗಿರಲಿಲ್ಲ. ಜಾತ್ರೆಯ ಸಂಭ್ರಮ ಸಂಸ್ಕೃತಿ ಭಕ್ತಿ ಹೇಗೆ ಇರುತ್ತದೆ ಎನ್ನುವುದನ್ನು ತಿಳಿದುಕೊಂಡೆವು. ನಮ್ಮ ಸಂಸ್ಕತಿಯನ್ನು ಮಕ್ಕಳಿಗೆ ತೋರಿಸುವ ಸಲುವಾಗಿ ಇಲ್ಲಿಗೆ ಬಂದಿದ್ದೇವೆ’ ಎಂದರು.
ಗವಿಮಠದ ಜಾತ್ರಾ ಮಹೋತ್ಸವದಲ್ಲಿ ನಿಖರವಾಗಿ ಎಷ್ಟು ಜನರಿಗೆ ಊಟ ಬಡಿಸಲಾಗುತ್ತದೆ ಎಂದು ಹೇಳುವುದು ಕಷ್ಟ. ಮಠಕ್ಕೆ ಬರುವ ಕೊನೆಯ ಭಕ್ತನಿಗೂ ಪ್ರಸಾದದ ವ್ಯವಸ್ಥೆ ಕಲ್ಪಿಸುವುದಕ್ಕೆ ನಮ್ಮ ಆದ್ಯತೆ.ರಾಮನಗೌಡ, ಗವಿಮಠದ ದಾಸೋಹದ ಉಸ್ತುವಾರಿ
ನಮ್ಮ ಕಾಲೇಜಿನ ತಂಡದೊಂದಿಗೆ ಬಂದು ಅಡುಗೆ ಬಡಿಸುವ ಕೆಲಸ ಮಾಡಿದೆವು. ಪ್ರತಿವರ್ಷವೂ ಸ್ನೇಹಿತೆಯರು ಕಾಲೇಜಿನ ಸಿಬ್ಬಂದಿ ಜೊತೆ ಗವಿಮಠದ ಜೊತೆ ಬರುವುದು ರೂಢಿ.ಇಮಾಮ್ ಬಿ., ರಾಜೀವಗಾಂಧಿ ಬಿಇಡಿ ಕಾಲೇಜು ದದೇಗಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.