
ಗವಿಮಠದ ಜಾತ್ರೆಯ ಅಂಗವಾಗಿ ನಡೆದ ಕುಸ್ತಿಯಲ್ಲಿ ಪಾಯಿಂಟ್ಸ್ ಗಳಿಸಲು ಪೈಲ್ವಾನರ ಪೈಪೋಟಿಯ ಕ್ಷಣ
ಕೊಪ್ಪಳ: ಮದಗಜಗಳಂತೆ ಸೆಣಸಾಡಿ ಸಾಹಸ ಮೆರೆದ ಕುಸ್ತಿಪಟುಗಳು, ಅಖಾಡದ ಉತ್ಸಾಹ ಹೆಚ್ಚಿಸಿದ ಹಲಗೆವಾದನ ಮತ್ತು ಪ್ರೇಕ್ಷಕರ ಮುಗಿಲು ಮುಟ್ಟುವಂತಿದ್ದ ಸಿಳ್ಳೆ, ಕೇಕೆ.
ಇಲ್ಲಿನ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಪುರುಷರ ಹಾಗೂ ಮಹಿಳೆಯರ ಕುಸ್ತಿ ಪಂದ್ಯಾವಳಿಯಲ್ಲಿ ಕಂಡು ಬಂದ ದೃಶ್ಯ.
ಕುಸ್ತಿ ಪಂದ್ಯಾವಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ನಾಗಮಣಿ ಅವರು ಚಾಲನೆ ನೀಡಿದರು. ಇಲ್ಲಿನ ಗವಿಮಠದ ಅಂಗಳದಲ್ಲಿ ಕುಸ್ತಿ ಪಟುಗಳು ತಮ್ಮ ಕಸರತ್ತು ಪ್ರದರ್ಶಿಸುವ ಮೂಲಕ ಶಹಬ್ಬಾಸ್ ಎನಿಸಿಕೊಂಡರು.
ಪಂದ್ಯಾವಳಿಯ ಸುತ್ತಮುತ್ತ ಸೇರಿದ್ದ ಪ್ರೇಕ್ಷಕರು ಅಖಾಡಕ್ಕೆ ಇಳಿದಿದ್ದ ಕುಸ್ತಿಪಟುಗಳಿಗೆ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿರುವುದು ಕಂಡು ಬಂತು. ಕೊಪ್ಪಳ, ವಿಜಯನಗರ, ಗದಗ, ಹಗರಿಬೊಮ್ಮನಹಳ್ಳಿ ಸೇರಿದಂತೆ ಸುಮಾರು 30 ಕುಸ್ತಿಪಟುಗಳು ಭಾಗವಹಿಸಿದ್ದರು. ಈರಣ್ಣ, ದುರಗಪ್ಪ, ಸಣ್ಣ ಕುಂಟೆಪ್ಪ ಹಾಗೂ ಮುಸ್ತಾಫ ಅವರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.
ಯುವ ಹಾಗೂ ಅನುಭವಿ ಪೈಲ್ವಾನರು ಪಂದ್ಯ ಗೆಲ್ಲಲೇಬೇಕು ಎಂದು ಸ್ಪರ್ಧೆಯ ಆರಂಭದಿಂದ ಕಸರತ್ತು ನಡೆಸಿ ವಿಫಲವಾದಾಗ ಕನಿಷ್ಠ ಡ್ರಾ ಆದರೂ ಮಾಡಿಕೊಳ್ಳಬೇಕು ಎನ್ನುವ ರಕ್ಷಣಾತ್ಮಕದ ಆಟದ ಮೊರೆ ಹೋದರು. ಕುಸ್ತಿಯ ರಕ್ಷಣಾ ತಂತ್ರವಾದ ಡ್ರಾ ಮಾಡಿಕೊಂಡು ಸೋಲು ಎದುರಾಗಲಿಲ್ಲ ಎನ್ನುವ ಸಾಧನೆ ಪಡೆದುಕೊಳ್ಳುವ ಪ್ರಯತ್ನ ಮಾಡಿದರೂ ಸಂಘಟಕರು ಮಾತ್ರ ಇದಕ್ಕೆ ಅವಕಾಶ ಕೊಡಲಿಲ್ಲ. ಎಲ್ಲ ಕುಸ್ತಿ ಪ್ರಿಯರು ನಿಮ್ಮ ಕುಸ್ತಿ ಸಾಹಸವನ್ನು ನೋಡಲು ಬಂದಿದ್ದು ನಿಮ್ಮ ರಕ್ಷಣಾತ್ಮಕ ಬೇಡ;ನಿಶ್ಚಳ ಫಲಿತಾಂಶ ಬರುವ ‘ಜಿದ್ದು’ ಬೇಕು ಎಂದು ಹೇಳಿದರು.
ಸೋಮವಾರ ನಡೆದ ಮಹಾರಥೋತ್ಸವದ ಸಮೀಪದಲ್ಲಿಯೇ ಅಖಾಡ ನಿರ್ಮಿಸಿದ್ದರಿಂದ ಸಾವಿರಾರು ಜನ ಕುಸ್ತಿ ಸೊಬಗು ಕಣ್ತುಂಬಿಕೊಳ್ಳಲು ಕಾದರು. ಗ್ರಾಮೀಣ ಪ್ರದೇಶದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಜನ ಪೈಲ್ವಾನರು ಪಟ್ಟು ಹಾಗೂ ಮರುಪಟ್ಟು ಹಾಕಿದಾಗ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಸುರಕ್ಷತೆ ಕಾರಣಕ್ಕಾಗಿ ಪೊಲೀಸರು ಸುತ್ತಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರೂ ಅದನ್ನು ನುಗ್ಗಿ ಮುಂದಕ್ಕೆ ಬರುವ ಪ್ರಯತ್ನ ಮಾಡಿದರೂ ಪೊಲೀಸರು ಅವಕಾಶ ಕೊಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.