ADVERTISEMENT

ಗವಿಮಠ ಅಜ್ಜನ ಜಾತ್ರೆ: ನೂತನ ವರ್ಷದ ಮೊದಲ ದಿನದಿಂದಲೇ ಕಾರ್ಯಕ್ರಮಗಳು ಆರಂಭ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 5:59 IST
Last Updated 1 ಜನವರಿ 2026, 5:59 IST
ಕೊಪ್ಪಳದ ಗವಿಮಠದ ಜಾತ್ರಾ ಮಹೋತ್ಸವ ಅಂಗವಾಗಿ ನಡೆದಿದ್ದ ಸಿದ್ಧತಾ ಕಾರ್ಯ 
ಕೊಪ್ಪಳದ ಗವಿಮಠದ ಜಾತ್ರಾ ಮಹೋತ್ಸವ ಅಂಗವಾಗಿ ನಡೆದಿದ್ದ ಸಿದ್ಧತಾ ಕಾರ್ಯ    

ಕೊಪ್ಪಳ: ಜಿಲ್ಲಾಕೇಂದ್ರದ ಪ್ರಮುಖ ಭಾಗವಾಗಿರುವ ಗವಿಮಠಕ್ಕೆ ತೆರಳುವ ರಸ್ತೆಗಳಲ್ಲಿದ ದೀಪಗಳ ಅಲಂಕಾರ, ಟ್ರ್ಯಾಕ್ಟರ್‌, ಚಕ್ಕಡಿಗಳಲ್ಲಿ ಧಾನ್ಯಗಳನ್ನು ತಂದುಕೊಡುವ ಸಂಭ್ರಮ, ಜನಸಂದಣಿ, ಮಠದಲ್ಲಿ ಚುರುಕಿನ ಓಡಾಟದ ಸಡಗರ ಮೇಳೈಸಿದೆ.

ದೇಶದಾದ್ಯಂತ ಗಮನ ಸೆಳೆದಿರುವ ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಹೊಸ ವರ್ಷದ ಮೊದಲ ದಿನವಾದ ಗುರುವಾರದಿಂದ ಆರಂಭವಾಗಲಿವೆ. ಮಠದ ವತಿಯಿಂದ ಹಾಗೂ ಜಿಲ್ಲಾಡಳಿತದಿಂದಲೂ ಅಗತ್ಯ ಸಿದ್ಧತಾ ಕಾರ್ಯಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ ಹಾಗೂ ಇತರ ಅಧಿಕಾರಿಗಳು ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಸವ ಪಟ: ಗುರುವಾರ ಮಧ್ಯಾಹ್ನ 2 ಗಂಟೆಗೆ ಬಸವ ಪಟ ಕಾರ್ಯಕ್ರಮ ಗವಿಸಿದ್ಧೇಶ್ವರ ಕರ್ತೃ ಗದ್ದುಗೆ ಹತ್ತಿರ ಜರುಗಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವದ ಮುನ್ನಾ ದಿನ ‘ಬಸವಪಟ ಆರೋಹಣ’ ಎಂಬ ಧಾರ್ಮಿಕ ಕಾರ್ಯಕ್ರಮವೂ ಜರುಗುತ್ತದೆ. ಭಕ್ತರು ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಣವ ಮಂತ್ರವಿರುವ ಬಸವಪಟಕ್ಕೆ ವಿದ್ಯುಕ್ತವಾಗಿ ಪೂಜೆ ಸಲ್ಲಿಸುತ್ತಾರೆ. ಬಳಿಕ ಕರ್ತೃ ಗದ್ದುಗೆಯ ಮುಂಭಾಗದ ಎದುರಿಗಿರುವ ಶಿಲಾಸ್ತಂಭಕ್ಕೆ ಬಸವ ಪಟ ಆರೋಹಣಗೊಳಿಸಲಾಗುತ್ತದೆ.

ADVERTISEMENT

ತೆಪ್ಪೋತ್ಸವ: ಗವಿಮಠದ ಕೆರೆಯಲ್ಲಿ ಸಂಜೆ 5 ಗಂಟೆಗೆ ತೆಪ್ಪೋತ್ಸವ ಹಾಗೂ 6 ಗಂಟೆಗೆ ಹೆಸರಾಂತ ಗಾಯಕಿ ಬೀದರ್‌ನ ಶಿವಾನಿ ಶಿವದಾಸ ಸ್ವಾಮಿ ಹಾಗೂ ತಂಡದ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯುತ್ತದೆ.

ಬೆಳಕಿನ ವ್ಯವಸ್ಥೆ: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಧಾರ್ಮಿಕ ಸಾಮಾಜಿಕ ಸಾಂಪ್ರದಾಯಿಕ ಕಾರ್ಯಕ್ರಮಗಳ ಸಂಗಮವಾಗಿದೆ. ಜಾತ್ರೆಯ ಅಂಗವಾಗಿ ಜಹಗೀರ್‌ ಗುಡದೂರು ಸ್ನೇಹಜೀವಿ ಗೆಳೆಯರ ಬಳಗದವರು ಗಂಜ್‌ ವೃತ್ತದಲ್ಲಿರುವ ಗವಿಸಿದ್ಧೇಶ್ವರ ಮಹಾದ್ವಾರಕ್ಕೆ ವಿದ್ಯುತ್‌ ದೀಪಗಳ ಬೆಳಕಿನ ವ್ಯವಸ್ಥೆ ಮಾಡಿದ್ದಾರೆ. ಹತ್ತು ಜನ ಯುವಕರು ಬೆಳಕಿನ ಸೌಲಭ್ಯ ಕಲ್ಪಿಸಿದ್ದಾರೆ.

ಗವಿಮಠದ ಜಾತ್ರೆಗೆ ಆಟಿಗೆ ಸಾಮಗ್ರಿಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿರುವುದು

ಜಾತ್ರೆಗೆ ಅಳಿಲು ಸೇವೆಯ ಅವಕಾಶ: ಸುರೇಶ್

ಕೊಪ್ಪಳ: ‘ಜಾತ್ರಾ ಮಹೋತ್ಸವಕ್ಕೆ ಅನೇಕ ಭಕ್ತರು ಸ್ವಯಂ ಪ್ರೇರಿತವಾದ ಸೇವೆ ಮಾಡುತ್ತಾರೆ. ನಮಗೂ ಅಳಿಲು ಸೇವೆ ಮಾಡುವ ಅವಕಾಶ ಲಭಿಸಿದೆ’ ಎಂದು ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಜಿ ಹೇಳಿದರು.

ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಜಾತ್ರೋತ್ಸವದ ನಿಮಿತ್ಯ ಸಿದ್ಧಪಡಿಸಿದ ಮಾಧ್ಯಮ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು ‘ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸವನ್ನು ಶ್ರೀಮಠವು ಮಾಡುತ್ತಿದೆ’ ಎಂದರು. ಮಹಾವಿದ್ಯಾಲಯದ ಪ್ರಾಚಾರ್ಯ ಚನ್ನಬಸವ ಹಾಗೂ ಮಾಧ್ಯಮ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಗವಿಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.