ADVERTISEMENT

ಗವಿಸಿದ್ಧೇಶ್ವರ ಜಾತ್ರೆಗೆ ಚಾಲನೆ ಇಂದು

ಬಸವ ಪಟ ಆರೋಹಣ, ಕಳಸದ ಮೆರವಣಿಗೆ 26ರಂದು

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 2:55 IST
Last Updated 26 ಜನವರಿ 2021, 2:55 IST
ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ತಾಲ್ಲೂಕಿನ ವಿವಿಧ ಗ್ರಾಮಗಳ ಜನತೆ ಟ್ರ್ಯಾಕ್ಟರ್‌ ಮೂಲಕ ಸೋಮವಾರ ದವಸ ಧಾನ್ಯ ತಂದು ಅರ್ಪಿಸಿದರು
ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ತಾಲ್ಲೂಕಿನ ವಿವಿಧ ಗ್ರಾಮಗಳ ಜನತೆ ಟ್ರ್ಯಾಕ್ಟರ್‌ ಮೂಲಕ ಸೋಮವಾರ ದವಸ ಧಾನ್ಯ ತಂದು ಅರ್ಪಿಸಿದರು   

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿಜ.26ರಂದು, ಸಂಜೆ 4.30ಕ್ಕೆ ‘ಬಸವ ಪಟ ಆರೋಹಣ’ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ.

ಶ್ರೀಗವಿಮಠದ ಜಾತ್ರಾ ಪರಂಪರೆಯಲ್ಲಿ ಬಸವಪಟ ಆರೋಹಣದ ಮೂಲಕವೇ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಂತಾಗುವುದು.

ಬಸವಪಟದಲ್ಲಿ ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಣವ ಮಂತ್ರ, ಗಿಡ-ಮರ, ಬಳ್ಳಿ ಮುಂತಾದ ಪ್ರಕೃತಿಯ ಚಿತ್ರಣಗಳನ್ನು ಅಳವಡಿಸಿರುವ ಬಸವಪಟಕ್ಕೆ ವಿಧಿ-ವಿಧಾನವಾಗಿ ಭಕ್ತರು ಪೂಜೆ ಸಲ್ಲಿಸಿ, ನೈವೇದ್ಯ ಮಾಡಿ ಆ ಬಳಿಕ ಅದನ್ನು ಕೈಯಲ್ಲಿ ಹಿಡಿದುಕೊಂಡು ಶ್ರೀ ಗವಿಮಠದ ಕರ್ತೃ ಗದ್ದುಗೆಯ ಸುತ್ತ 5 ಸುತ್ತ ಪ್ರದಕ್ಷಿಣೆ ಹಾಕುತ್ತಾ ಶ್ರೀಗವಿಸಿದ್ಧೇಶ್ವರನ ಜಯಘೋಷಗಳೊಂದಿಗೆ ಶ್ರೀ ಗವಿಮಠದ ಕರ್ತೃ ಗದ್ದುಗೆಯ ದ್ವಾರ ಬಾಗಿಲಿನ ಎದುರಿಗಿರುವ ಶಿಲಾಸ್ತಂಭಕ್ಕೆ ಕಂಭಕ್ಕೆ ಬಸವ ಪಟ ಕಟ್ಟುವರು.

ADVERTISEMENT

ಅಂದು ಸಂಜೆ 6ಕ್ಕೆ ಮಠದ ಮೇಲೆ ಇರುವ ಅನ್ನಪೂರ್ಣೇಶ್ವರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಅನ್ನಪೂರ್ಣೆಶ್ವರಿ ದೇವಿಗೆ ಬಾಳೆಕಂಬ, ತೆಂಗಿನ ಗರಿ, ಕಬ್ಬು, ತಳಿರು ತೋರಣಗಳಿಂದ ಅಲಂಕೃತಗೊಂಡ ಹಂದರ ನಿರ್ಮಿಸಿರುತ್ತಾರೆ. ದೇವಿಗೆ ಸೇವಂತಿಗೆ, ಮಲ್ಲಿಗೆ, ಜಾಜಿ, ಸಂಪಿಗೆ ಬಗೆ, ಬಗೆಯ ಹೂವುಗಳಿಂದ ಅಲಂಕೃತಗೊಳಿಸಿರುತ್ತಾರೆ.

ಹೋಳಿಗೆ, ಪಾಯಸ ಹಾಗೂ ವೈವಿಧ್ಯಮಯವಾದ ಪಂಚ ಪಕ್ವಾನ್ನಗಳ ಪ್ರಸಾದವನ್ನು ನೈವೇದ್ಯಮೂಲಕ ಅರ್ಪಿಸಲಾಗುವುದು. ವೀಳ್ಯೆದೆಲೆ, ಅಡಿಕೆ, ಅಕ್ಕಿ, ಕೊಬ್ಬರಿ ಬಟ್ಟಲು, ಅರಿಶಿಣ ಕೊಂಬು, ಉತ್ತತ್ತಿ, ಹಸಿರುಬಳೆ, ಖಣ, ಹಣ್ಣು ಹಂಪಲಗಳ ಮೂಲಕ ದೇವಿಗೆ ಉಡಿತುಂಬುವರು. ನಂತರ ತಾಯಂದಿರಿಗೂ ಮಂಗಳಕರ ದ್ರವ್ಯಸೇರಿದಂತೆ ಪರಸ್ಪರ ಉಡಿತುಂಬಲಾಗುವುದು.

ಪಂಚಕಳಸದ ಗದ್ದುಗೆಗೆ ಪಂಚ ಕಳಸೋತ್ಸವ:ಸಂಜೆಪಂಚ ಕಳಸೋತ್ಸವ ಕಾರ್ಯಕ್ರಮ ಪ್ರತಿವರ್ಷದಂತೆ ಗವಿಮಠದಲ್ಲಿ ಜರುಗವುದು. ನಗರದಬನ್ನಿಕಟ್ಟಿ ಗೌರಿಶಂಕರ ದೇವಸ್ಥಾನ, ವಿ.ಕೆ. ಸಜ್ಜನರ ಮನೆ, ಪಲ್ಲೇದವರ ಓಣಿಯ ಶ್ರೀ ಬಸವೇಶ್ವರ ದೇವಸ್ಥಾನ, ನಾಲ್ಕನೆಯದು ಕೋಟೆ ರಸ್ತೆಯ ಶ್ರೀ ಮಹೇಶ್ವರ ದೇವಸ್ಥಾನ ಹಾಗೂ ಐದನೆಯದು ಶ್ರೀ ಪ್ಯಾಟಿ ಈಶ್ವರ ದೇವಸ್ಥಾನದ ದೈವದವರಿಂದ ಗವಿಮಠಕ್ಕೆ ಭಜನಾ ಮೆರವಣಿಗೆಯೊಂದಿಗೆ ಪಂಚಕಳಸಗಳು ಆಗಮಿಸುತ್ತವೆ.

ಈ ಪಂಚಕಳಸಗಳನ್ನು ಕರ್ತೃ ಗದ್ದುಗೆಯ ಮುಂಭಾಗದ ಪೀಠದಲ್ಲಿ ಸಾಲಂಕೃತಗೊಳಿಸಿ ವಿಧಿ ವಿಧಾನಗಳ ಮೂಲಕ ಪೂಜೆಗೈದು ಮಂಗಳಾರತಿ ಗೈಯುವರು. ನಂತರ ಕರ್ತೃ ಗದ್ದುಗೆ ಸುತ್ತಲೂ ಕಳಸದೊಂದಿಗೆ ಪ್ರದಕ್ಷಿಣೆಗೈದು ಕರ್ತೃಗದ್ದುಗೆಯ ಗೋಪುರಕ್ಕೆ ಕಳಸಾರೋಹಣ ನೆರವೇರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.