ADVERTISEMENT

ಕುಷ್ಟಗಿ: 12 ಬಾಲಕಿಯರು ನಾಪತ್ತೆ, ಪ್ರೇಮ ಪ್ರಕರಣ ಶಂಕೆ

ಪ್ರಕರಣ ದಾಖಲು: ಪಾಲಕರು ಮಕ್ಕಳ ಮೇಲಿನ ನಿಗಾ ವಹಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 13:50 IST
Last Updated 16 ಜುಲೈ 2021, 13:50 IST
 ಬಾಲಕಿಯರು ನಾಪತ್ತೆ- ಪ್ರಾತಿನಿಧಿಕ ಚಿತ್ರ
ಬಾಲಕಿಯರು ನಾಪತ್ತೆ- ಪ್ರಾತಿನಿಧಿಕ ಚಿತ್ರ   

ಕುಷ್ಟಗಿ: ಕೋವಿಡ್‌ ಕಾರಣಕ್ಕೆ ಜಾರಿಯಲ್ಲಿದ್ದ ಲಾಕ್‌ಡೌನ್‌ ಸಡಿಲಿಕೆ ನಂತರ ತಾಲ್ಲೂಕಿನಲ್ಲಿ ಬಾಲಕಿಯರು ನಾಪತ್ತೆಯಾಗುತ್ತಿರುವ ಪ್ರಕರಣ ಹೆಚ್ಚುತ್ತಿದ್ದು, ಪಾಲಕರು ಮತ್ತು ಪೊಲೀಸರಿಗೆ ತಲೆನೋವಿನ ಸಂಗತಿಯಾಗಿದೆ.

ನಾಪತ್ತೆಯಾದ ಪ್ರಕರಣಗಳಲ್ಲಿ ಬಹುತೇಕ ಅಪ್ರಾಪ್ತ ವಯಸ್ಕ ಬಾಲಕಿಯರೇ ಇದ್ದು, ಇವು ಪ್ರೇಮ ಪ್ರಕರಣಗಳು ಎಂದು ತಿಳಿದು ಬಂದಿದೆ.ತಾಲ್ಲೂಕಿನ ಮೂರೂ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಒಟ್ಟು 12 ಬಾಲಕಿಯರು ಕಾಣೆಯಾಗಿರುವಕುರಿತು ಎಫ್‌ಐಆರ್‌ ದಾಖಲಾಗಿವೆ.ಆದರೆ ಮರ್ಯಾದೆ, ಸಮಾಜದ ಭಯದಿಂದ ಪೊಲೀಸ್‌ ಠಾಣೆ ಮೆಟ್ಟಿಲೇರದ ಹೆಚ್ಚಿನ ಪ್ರಕರಣ ಇವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

'ತಾಲ್ಲೂಕಿನ ಒಂದು ಚಿಕ್ಕ ಹಳ್ಳಿಯಲ್ಲಿ ವರ್ಷದ ಅವಧಿಯಲ್ಲಿ ಅಲ್ಲಿ 8 ಬಾಲಕಿಯರು ಕಾಣೆಯಾಗಿದ್ದರು' ಎಂದು ಗ್ರಾಮಸ್ಥರು ಹೇಳುತ್ತಾರೆ. ಇವುಗಳ ಪೈಕಿ ಒಂದು ಪ್ರಕರಣ ಮಾತ್ರ ದಾಖಲಾಗಿದೆ.

ADVERTISEMENT

'ಸಾಮಾಜಿಕ, ಕೌಟುಂಬಿಕ ವ್ಯವಸ್ಥೆ, ಸಾಮರಸ್ಯ ಹಾಳಾಗುತ್ತಿದ್ದು, ದ್ವೇಷದಿಂದ ಬಾಲಕಿಯರನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಕರೆದುಕೊಂಡು ಹೋಗಿ ನಂತರ ರಾಜೀ ಪಂಚಾಯಿತಿ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿರುವುದು' ಪೊಲೀಸ್‌ ಇಲಾಖೆಗೆ ಸಮಸ್ಯೆಯಾಗಿ ಕಾಡುತ್ತಿದೆ‘ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್ ಎಸ್‌.ಆರ್‌.ನಿಂಗಪ್ಪ ಹೇಳುತ್ತಾರೆ.

'ಅಪ್ರಾಪ್ತರಾಗಿದ್ದರೂ ಬಾಲಕಿಯರಲ್ಲಿ ಕಾನೂನಿನ ಭಯ ಇಲ್ಲ, ತಾವು ಸ್ವತಃ ಇಚ್ಛೆಪಟ್ಟೇ ಹೋಗಿರುವುದಾಗಿ ನಿರ್ಭೀತಿಯಿಂದ ವಾದಿಸುತ್ತಾರೆ. ಅದಕ್ಕೆ ಅವರಲ್ಲಿ ಹಿಂಜರಿಕೆಯೇ ಇಲ್ಲ. ದೂರು ದಾಖಲಾದ ನಂತರ ಬಾಲಕಿಯರನ್ನು ಪತ್ತೆ ಹಚ್ಚಿ ಕರೆ ತರುವ ಜವಾಬ್ದಾರಿ ಪೊಲೀಸರ ಮೇಲೆ ಬೀಳುತ್ತದೆ. ನಂತರ ಅವರನ್ನು ಮನೆಗೆ ಒಪ್ಪಿಸಬೇಕಾಗುತ್ತದೆ. ಬಾಲಕಿ ಅಪ್ರಾಪ್ತಳಾಗಿದ್ದು ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸುವಂತಿದ್ದರೂ ಕೆಲವರು ಅದಕ್ಕೆ ಒಪ್ಪದೆ ರಾಜಿ ಮಾಡಿಕೊಂಡು ಹೋಗುತ್ತಿದ್ದಾರೆ' ಎನ್ನುತ್ತಿದ್ದಾರೆ.

ದಾಖಲಾಗಿರುವ 12 ಪ್ರಕರಣಗಳ ಪೈಕಿ ರಾಜ್ಯದ ವಿವಿಧ ಜಿಲ್ಲೆಗಳು, ಅಂತರರಾಜ್ಯದಲ್ಲಿಯೂ ಇದ್ದ 7 ಬಾಲಕಿಯರನ್ನು ಪತ್ತೆಹಚ್ಚಿ ಕರೆ ತರಲಾಗಿದೆ. ಅವರಲ್ಲಿ ಪ್ರಾಪ್ತರಾಗಿರುವ ಕೆಲ ಬಾಲಕಿಯರು 'ತಾವು ಮನಪೂರ್ವಕವಾಗಿ ಹೋದವನೊಂದಿಗೆ ಮದುವೆಯಾಗುತ್ತೇವೆ' ಎಂದು ಹೇಳಿಹೋಗಿದ್ದಾರೆ.

ಬಾಲಕಿ ಅಪ್ರಾಪ್ತಳಾಗಿದ್ದರೆ ಪಾಲಕರ ಹೇಳಿಕೆ ಮುಖ್ಯವಾಗುತ್ತದೆ ಆದರೂ ಅಪ್ರಾಪ್ತ ಬಾಲಕಿಯೊಬ್ಬಳು ತಾನು ಪಾಲಕರೊಂದಿಗೆ ಹೋಗುವುದಿಲ್ಲ ಎಂದು ಪಟ್ಟಹಿಡಿದು ಬಾಲ ಮಂದಿರಕ್ಕೆ ಹೋಗಿದ್ದಾಳೆ.

'ಕೆಲ ಅಂತರ್ಜಾತಿಯ ಬಾಲಕ ಬಾಲಕಿಯರು ಪಲಾಯನ ಗೈದಿರುವ ಪ್ರಕರಣಗಳೂ ಇದ್ದು ಹಳ್ಳಿಗಳಲ್ಲಿ ಪರಿಸ್ಥಿತಿ ಸೂಕ್ಷ್ಮವಾಗುತ್ತಿದ್ದರೂ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ'ಎಂದುಸಿಪಿಐಎಸ್‌.ಆರ್‌.ನಿಂಗಪ್ಪ 'ಪ್ರಜಾವಾಣಿ'ಗೆ ತಿಳಿಸಿದರು.

ಸಾಮಾಜಿಕ ಜಾಲತಾಣಗಳ ದುರ್ಬಳಕೆ

'ಲಾಕ್‌ಡೌನ್‌ ಅವಧಿಯಲ್ಲಿ ಆನ್‌ಲೈನ್‌ ತರಗತಿ ಮಕ್ಕಳ ಓದಿನ ಮನೋವಿಕಾಸಕ್ಕೆ ನೆರವಾಗುವ ಬದಲು ಮನೋವಿಕಾರಕ್ಕೆ ಕಾರಣವಾಗಿದೆ. ಇದರಲ್ಲಿ ಸಾಮಾಜಿಕ ಜಾಲತಾಣಗಳ ಕೊಡುಗೆಯೂ ದೊಡ್ಡದು' ಎಂದು ಹಿರೇವಂಕಲಕುಂಟಾದ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯಡಾ.ಎಸ್‌.ವಿ.ಡಾಣಿ ಹೇಳುತ್ತಾರೆ.

ಇದರಲ್ಲಿ ಫೇಸ್‌ಬುಕ್‌ ಅಗ್ರಸ್ಥಾನದಲ್ಲಿದೆ. ಇಲ್ಲಿ ಯುವತಿ ಮತ್ತು ಬಾಲೆಯರನ್ನು ಪರಿಚಯಿಸಿಕೊಂಡು ಪ್ರೀತಿ, ಪ್ರೇಮದ ಹೆಸರಿನಲ್ಲಿ ಓಡಿ ಹೋಗುತ್ತಿರುವುದು ಕಳವಳಕಾರಿಯಾಗಿದೆ' ಎನ್ನುತ್ತಾರೆ ಅವರು.

'ಕೈಯಲ್ಲಿ ಸದಾ ಮೊಬೈಲ್‌ ಹಿಡಿದುಕೊಂಡಿರುವ ಮಕ್ಕಳು ಏನೇ ಕೇಳಿದರೂ ಆನ್‌ಲೈನ್‌ ಕ್ಲಾಸ್‌ ಎಂಬ ನೆಪ ಹೇಳುತ್ತಾರೆ. ಪಾಲಕರು ಆನ್‌ಲೈನ್‌ ಕ್ಲಾಸ್‌ನಲ್ಲಿ ಏನು ನಡೆಯುತ್ತಿದೆ ಎಂಬುವುದರ ಮೇಲೆ ಗಮನ ಹರಿಸದ ಪರಿಣಾಮ ಇವೆಲ್ಲಾ ಅವಾಂತರಕ್ಕೆ ಕಾರಣವಾಗುತ್ತದೆ' ಎನ್ನುತ್ತಾರೆ ಮನೋವೈಜ್ಞಾನದ ವೈದ್ಯರು.

'ಇದು ಧರ್ಮ ಸ್ಮೂಕ್ಷ ಪ್ರಶ್ನೆಯಾಗಿರುವುದರಿಂದ ಪೊಲೀಸ್‌, ಶಿಕ್ಷಣ ವ್ಯವಸ್ಥೆ, ಇಲಾಖೆಗಳನ್ನು ದೂರುವ ಬದಲು ಪಾಲಕರು ತಮ್ಮ ಮಕ್ಕಳ ಮೇಲೆಯೇ ಹೆಚ್ಚಿನ ನಿಗಾ ವಹಿಸಬೇಕು' ಎನ್ನುತ್ತಾರೆ ಡಾ.ಡಾಣಿ.

ಮಕ್ಕಳು ಹೆಣ್ಣು, ಗಂಡು ಯಾರೇ ಆಗಿರಲಿ ಅವರ ವರ್ತನೆ, ಓಡಾಟ, ಮೊಬೈಲ್‌ ಗೀಳಿನ ಬಗ್ಗೆ ಪಾಲಕರು ತಿಳಿಯಬೇಕು, ಪ್ರಾರಂಭದಲ್ಲೇ ಎಚ್ಚರಿಕೆ ವಹಿಸಿದರೆ ನಂತರ ಗೋಳಾಡುವುದು ತಪ್ಪುತ್ತದೆ.

-ಎಸ್‌.ಆರ್‌.ನಿಂಗಪ್ಪ, ಸಿಪಿಐ, ಕುಷ್ಟಗಿ

ಮಕ್ಕಳನ್ನು ಸರಿದಾರಿಗೆ ತರುವುದು ಪಾಲಕರ ಮತ್ತು ಶಿಕ್ಷಕರ ಕರ್ತವ್ಯ ಹೌದು, ಮನೆಯಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಓದಿಗಿಂತ ನೈತಿಕ ಪ್ರಜ್ಞೆ ಮೂಡಿಸುವ ಕೆಲಸ ಹೆಚ್ಚು ಪ್ರಸ್ತುತ ಎನಿಸುತ್ತದೆ

-ಡಾ.ಎಸ್‌.ವಿ.ಡಾಣಿ, ಪ್ರಾಚಾರ್ಯ, ಸರ್ಕಾರಿ ಪದವಿ ಕಾಲೇಜು, ಹಿರೇವಂಕಲಕುಂಟಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.