ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದರು
ಕುಷ್ಟಗಿ (ಕೊಪ್ಪಳ ಜಿಲ್ಲೆ): ಕರಾವಳಿ ಭಾಗದಲ್ಲಿ ಶಾಂತಿ, ಸುವ್ಯವಸ್ಥೆ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಂಧಿಸುವುದು, ಆ ಮುಖಂಡರ ಮೇಲೆ ಪ್ರಕರಣ ದಾಖಲಿಸಿ ಪೊಲೀಸರ ಮೂಲಕ ಸರ್ಕಾರವೇ ಗಲಭೆಗೆ ಪ್ರಚೋದನೆ ನೀಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕರಾವಳಿ ಭಾಗದಲ್ಲಿ ಇತ್ತೀಚೆಗೆ ನಡೆದ ಕೆಲ ಘಟನೆಗಳಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹಾಗೂ ಒಬ್ಬ ಮುಸಲ್ಮಾನನ ಹತ್ಯೆಯೂ ಆಗಿದೆ. ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಸಮರ್ಪಕ ರೀತಿಯಲ್ಲಿ ನಿಭಾಯಿಸಿಲ್ಲ. ಆದರೆ ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ ಎಂಬ ನೆಪ ಒಡ್ಡಿ ಪೊಲೀಸರ ಮೇಲೆ ಒತ್ತಡ ಹೇರಿ ಮಧ್ಯರಾತ್ರಿ ವೇಳೆ ಅಮಾಯಕ ಹಿಂದೂ ಕಾರ್ಯಕರ್ತರ ಮನೆ ಬಾಗಿಲು ತಟ್ಟಿ ವಿಚಾರಣೆಗೆ ಒಳಪಡಿಸುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ ಸರ್ಕಾರ ಯಾರನ್ನೊ ಓಲೈಸುವ ಹಾಗೂ ಹಿಂದೂ ಕಾರ್ಯಕರ್ತರಿಗೆ ಬೆದರಿಕೆ ಒಡ್ಡುವ ಕೆಲಸ ಮಾಡುತ್ತಿರುವಂತಿದೆ ಎಂದು ದೂರಿದರು.
ತಪ್ಪು ಮಾಡಿದವರನ್ನು ಬಂಧಿಸಲಿ, ಆದರೆ ವಿನಾಕಾರಣ ಹಿಂದೂಗಳನ್ನು ಗುರಿಯಾಗಿಸಿಕೊಳ್ಳುವುದು ಸರಿಯಲ್ಲ. ಇಂಥ ನಡುವಳಿಕೆಯಿಂದ ಅಲ್ಲಿಯ ಪರಿಸ್ಥಿತಿ ತಿಳಿಯಾಗಲು ಸಾಧ್ಯವೇ ಇಲ್ಲ. ಬದಲಾಗಿ ವಾತಾವರಣ ಮತ್ತಷ್ಟೂ ಹದಗೆಡಲಿದ್ದು ಅದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹಸಚಿವ ಜಿ.ಪರಮೇಶ್ವರ ಅರ್ಥಮಾಡಿಕೊಳ್ಳಲಿ ಎಂದು ಹೇಳಿದರು.
ಕಾಂಗ್ರೆಸ್ ಮುಂದೆ ಬಿಜೆಪಿ ದುರ್ಬಲವಾಗುತ್ತಿದೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ವಿಜಯೇಂದ್ರ, ‘ಅಭಿವೃದ್ಧಿಯಲ್ಲಿ ಶೂನ್ಯವಾಗಿರುವ ರಾಜ್ಯ ಸರ್ಕಾರ ರೈತ ವಿರೋಧಿಯಾಗಿದೆ. ನಾಚಿಕೆ, ಮಾನ ಮರ್ಯಾದೆ ಮೂರನ್ನೂ ಬಿಟ್ಟು ಭಂಡತನದಿಂದ ನಡೆದುಕೊಳ್ಳುತ್ತಿದೆ. ಇದನ್ನು ರಾಜ್ಯದಾದ್ಯಂತ ನಡೆಸಿದ ಜನಾಕ್ರೋಶ ಯಾತ್ರೆಯ ಮೂಲಕ ಸಿದ್ದರಾಮಯ್ಯ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಕೆಲಸ ಪ್ರತಿಪಕ್ಷವಾಗಿ ಬಿಜೆಪಿ ಮಾಡಿದೆ’ ಎಂದರು.
ಶಾಸಕ ದೊಡ್ಡನಗೌಡ ಪಾಟೀಲ, ವಿಧಾನಪರಿಷತ್ ಸದಸ್ಯ ಹೇಮಲತಾ ನಾಯಕ, ಮಾಜಿ ಶಾಸಕರಾದ ಕೆ.ಶರಣಪ್ಪ, ದೊಡ್ಡನಗೌಡ ಹುನಗುಂದ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ಪಕ್ಷದ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಕೆ.ಬಸವರಾಜ ಕ್ಯಾವಟರ್, ನಿಕಟಪೂರ್ವ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ, ಮುಖಂಡರಾದ ತಿಪ್ಪೇಸ್ವಾಮಿ, ವಿರೂಪಾಕ್ಷಪ್ಪ ಸಿಂಗನಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.