ADVERTISEMENT

ಕೊಪ್ಪಳ: ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ವಿಮಾನಯಾನ ಮಾಡಿಸಿದ ಮುಖ್ಯ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 5:56 IST
Last Updated 27 ಡಿಸೆಂಬರ್ 2025, 5:56 IST
ಕೊಪ್ಪಳ ತಾಲ್ಲೂಕಿನ ಬಹದ್ದೂರಬಂಡಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ  ಶಿಕ್ಷಕರು ವಿಮಾನದದಲ್ಲಿ ಪ್ರವಾಸಕ್ಕೆ ತೆರಳಿದ ಕ್ಷಣ 
ಕೊಪ್ಪಳ ತಾಲ್ಲೂಕಿನ ಬಹದ್ದೂರಬಂಡಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ  ಶಿಕ್ಷಕರು ವಿಮಾನದದಲ್ಲಿ ಪ್ರವಾಸಕ್ಕೆ ತೆರಳಿದ ಕ್ಷಣ     

ಕೊಪ್ಪಳ: ತಾಲ್ಲೂಕಿನ ಬಹದ್ದೂರಬಂಡಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬೀರಪ್ಪ ಅಂಡಗಿ ಅವರು ಸ್ವಂತ ಹಣದಿಂದ ತಮ್ಮ ಶಾಲೆಯ 24 ವಿದ್ಯಾರ್ಥಿಗಳು, ಇಬ್ಬರು ಎಸ್‌ಡಿಎಂಸಿ ಸದಸ್ಯರು ಹಾಗೂ 12 ಜನ ಶಿಕ್ಷಕರನ್ನು ವಿಮಾನದಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಶುಕ್ರವಾರ ಬೆಂಗಳೂರಿಗೆ ಕರೆದುಕೊಂಡು ಹೋದರು.

ಬಳ್ಳಾರಿಯ ಜಿಂದಾಲ್‌ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳಿದ ಮಕ್ಕಳು ವಿಮಾನದಲ್ಲಿ ಫೋಟೊ ಕ್ಲಿಕ್ಕಿಸಿಕೊಂಡು ಶಿಕ್ಷಕರು ಹಾಗೂ ಸಿಬ್ಬಂದಿ ಜೊತೆ ಸಂಭ್ರಮಿಸಿದರು. ಮೊದಲ ಬಾರಿಗೆ ವಿಮಾನಯಾನ ಮಕ್ಕಳಲ್ಲಿ ಸಂಭ್ರಮ ಮನೆ ಮಾಡಿತ್ತು. ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರೂ ಆದ ಬೀರಪ್ಪ ಅಂಡಗಿ ಅವರೇ ವಿದ್ಯಾರ್ಥಿಗಳ ವಿಮಾನ ಪ್ರಯಾಣ, ಊಟ ಹಾಗೂ ವಸತಿ ಸೌಲಭ್ಯದ ಖರ್ಚು ಭರಿಸಿದ್ದಾರೆ.

ವಿಮಾನದಲ್ಲಿ ಪ್ರವಾಸಕ್ಕೆ ಕರೆದೊಯ್ಯುವ ವಿದ್ಯಾರ್ಥಿಗಳ ಆಯ್ಕೆಗಾಗಿ ಪ್ರವೇಶ ಪರೀಕ್ಷೆ ನಡೆಸಿದ್ದರು. 5 ರಿಂದ 8ನೇ ತರಗತಿ ತನಕ ಪ್ರತಿ ತರಗತಿಯಿಂದ ತಲಾ ಆರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಪ್ರವಾಸಕ್ಕೆ ಹೊರಟ ಮಕ್ಕಳು ಮತ್ತು ಬೀರಪ್ಪ ಅವರಿಗೆ ಸಂಸದ ರಾಜಶೇಖರ ಹಿಟ್ನಾಳ ಶುಭ ಕೋರಿದರು.

ADVERTISEMENT

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬೀರಪ್ಪ, ’ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣದ ಅನುಭವ ಲಭಿಸಬೇಕೆಂದು ಈ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣ, ಬೆಂಗಳೂರಿನಲ್ಲಿ ವಿವಿಧ ಸ್ಥಳಗಳಿಗೆ ಸುತ್ತಾಟ, ವಸತಿ ಹಾಗೂ ಮರಳಿ ಬರುವಾಗ ರೈಲಿನ ವ್ಯವಸ್ಥೆ ಎಲ್ಲವೂ ಸೇರಿ ₹ 5ರಿಂದ ₹ 6 ಲಕ್ಷ ಖರ್ಚಾಗುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.