
ಕೊಪ್ಪಳ: ಮಹಾಶಿವರಾತ್ರಿ ಅಂಗವಾಗಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಸಂಭ್ರಮದಿಂದ ಹಬ್ಬ ಆಚರಿಸಲಾಯಿತು. ದೇವಸ್ಥಾನಗಳಲ್ಲಿ ಶಿವನಾಮ ಸ್ಮರಣೆ ಅನುರಣಿಸಿತು.
ಕೊಪ್ಪಳದ ಗವಿಸಿದ್ಧೇಶ್ವರ ಮಠ, ಹುಲಿಕೆರೆ ಬಳಿಯಿರುವ ಶಿವರಾತ್ರೇಶ್ವರ ದೇವಸ್ಥಾನ, ಬನ್ನಿಕಟ್ಟೆಯಲ್ಲಿರುವ ಗೌರಿಶಂಕರ ದೇವಾಲಯ, ಮಳೆ ಮಲ್ಲೇಶ್ವರ ದೇವಸ್ಥಾನ, ಈಶ್ವರ ಪಾರ್ಕ್‌ನಲ್ಲಿರುವ ಗುಡಿ, ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಹೀಗೆ ಅನೇಕ ಕಡೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಬೆಳಿಗ್ಗೆಯೇ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಸ್ಥಾನಗಳಲ್ಲಿ ತರಹೇವಾರಿ ಹೂಗಳು, ಬಿಲ್ವಪತ್ರೆಯಿಂದ ಶಿವನ ಮೂರ್ತಿಗಳನ್ನು ಅಲಂಕಾರ ಮಾಡಲಾಗಿತ್ತು. ಈಶ್ವರ ಪಾರ್ಕ್‌ನಲ್ಲಿ ಹೆಚ್ಚು ಜನಸಂದಣಿ ಕಂಡುಬಂದಿತು.
ಇಲ್ಲಿನ ದೇವರಾಜ್ ಅರಸ್ ಕಾಲೊನಿಯಲ್ಲಿರುವ ಪ‍್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದಲೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸೌರಾಷ್ಟ್ರ, ಶ್ರೀಶೈಲಂ, ಉಜ್ಜಯಿನಿ, ಓಂಕಾರೇಶ್ವರ, ಕೇದಾರನಾಥ, ಭೀಮಾಶಂಕರ, ಕಾಶಿ ವಿಶ್ವನಾಥ, ತ್ರಯಂಬಕೇಶ್ವರ, ದೇವಘರ್, ನಾಗೇಶ್ವರ, ರಾಮೇಶ್ವರ ಹೀಗೆ ಐತಿಹಾಸಿಕ ವಿವಿಧ ಜ್ಯೋತಿರ್ಲಿಂಗಗಳ ರೂಪಕಗಳನ್ನು ತಯಾರಿಸಲಾಗಿತ್ತು.
ಹಬ್ಬದ ಅಂಗವಾಗಿ ಪ್ರತಿವರ್ಷ ರಾತ್ರಿ ಜಾಗರಣೆ ಮಾಡುವುದು ಸಂಪ್ರದಾಯ. ಇದಕ್ಕಾಗಿಯೇ ಅನೇಕ ಶಿವ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಟ್ಟದ ಅಂಚಿಗೆ ಇರುವ ಹುಲಿಕೆರೆ ಶಿವರಾತ್ರೇಶ್ವರ ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತಡರಾತ್ರಿಯಾದರೂ ಭೇಟಿ ನೀಡುತ್ತಿದ್ದ ಚಿತ್ರಣ ಸಾಮಾನ್ಯವಾಗಿತ್ತು. ಬಣ್ಣಬಣ್ಣದ ವಿದ್ಯುತ್ ದೀಪಗಳು ಹಾಗೂ ಹೂವಿನ ಅಲಂಕಾರದಿಂದ ಹುಲಿಕೆರೆ ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಶೃಂಗರಿಸಲಾಗಿತ್ತು.
ಯತೀಂದ್ರ ಭೇಟಿ: ಗಂಗಾವತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ಮಹಾಶಿವರಾತ್ರಿ ಅಂಗವಾಗಿ ನಗರದ ಶಿವರಾತ್ರೇಶ್ವರ ದೇವಸ್ಥಾನ ಮತ್ತು ಹೇಮರಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು.
ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ನಗರಸಭೆ ಮಾಜಿ ಸದಸ್ಯ ಮುತ್ತುರಾಜ ಕುಷ್ಟಗಿ, ಮುಖಂಡರಾದ ಗೂಳಪ‍್ಪ ಹಲಗೇರಿ, ಶಿವರೆಡ್ಡಿ ಭೂಮಕ್ಕನವರ, ಎಸ್.ಬಿ. ನಾಗರಹಳ್ಳಿ ವಕೀಲರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಕೊಪ್ಪಳ: ಮೊದಲ ಬಾರಿಗೆ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಹಾಗೂ ಶಿವರಾತ್ರೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಶಿವರಾತ್ರಿ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜನರಲ್ಲಿ ಸಂಭ್ರಮ ಮೂಡಿಸಿತು. ಚಲನಚಿತ್ರ ಗಾಯಕಿ ಇಂದು ನಾಗರಾಜ್ ಹಾಗೂ ತಂಡದವರಿಂದ ಸಂಗೀತ ಸಮಾರಂಭ ಕಿರುತೆರೆಯ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಹೆಸರು ಮಾಡಿರುವ ವಿವಿಧ ಕಲಾವಿದರಿಂದ ಕಾರ್ಯಕ್ರಮ ಜರುಗಿದವು. ಡಿಕೆಡಿ ಡ್ಯಾನ್ಸ್ ಕಾರ್ಯಕ್ರಮದ ಕಲಾವಿದರು ಶರಣು ನಾಗನೂರು ನವಲಗುಂದ ಅವರಿಂದ ಹಾಸ್ಯ ಕಾರ್ಯಕ್ರಮ ಹೊಸಪೇಟೆಯ ಕಲಾವಿದೆ ಅಂಜಲಿ ಅವರಿಂದ ಭರತನಾಟ್ಯ ಹೀಗೆ ಅನೇಕ ಕಾರ್ಯಕ್ರಮಗಳು ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.