ADVERTISEMENT

ಕುಕನೂರು|ಹೆಸರು ಬೆಳೆಗೆ ಹಳದಿ ರೋಗ ಬಾಧೆ: ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ

ಮೋಡ ಕವಿದ ವಾತಾವರಣ

ಮಂಜುನಾಥ ಅಂಗಡಿ
Published 28 ಜುಲೈ 2025, 5:49 IST
Last Updated 28 ಜುಲೈ 2025, 5:49 IST
<div class="paragraphs"><p>ಕುಕನೂರು ತಾಲ್ಲೂಕಿನ ಬಹುತೇಕ ಹೆಸರು ಬೆಳೆಗೆ ಹಳದಿ ಬೂದು ರೋಗ ತಗುಲಿರುವ ಬೆಳೆ</p></div>

ಕುಕನೂರು ತಾಲ್ಲೂಕಿನ ಬಹುತೇಕ ಹೆಸರು ಬೆಳೆಗೆ ಹಳದಿ ಬೂದು ರೋಗ ತಗುಲಿರುವ ಬೆಳೆ

   

ಕುಕನೂರು: ಮುಂಗಾರಿನ ಆರಂಭದಲ್ಲಿ ಅಬ್ಬರಿಸಿದ್ದ ಮಳೆ ಬಳಿಕ ಒಂದು ತಿಂಗಳ ಕಾಲ ಕೈ ಕೊಟ್ಟು ಈಗ ಎಂಟು ದಿನಗಳಿಂದ ಮತ್ತೆ ಸುರಿಯುತ್ತಿದೆ. ನಿರಂತರ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ಹೆಸರು ಬೆಳೆಗೆ ಹಳದಿ ರೋಗ, ಬೂದುರೋಗ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಮನೆಮಾಡಿದೆ.

ಹೆಸರು ಬೆಳೆ ಹಳದಿ, ಬೂದು ಬಣ್ಣಕ್ಕೆ ತಿರುಗುತ್ತಿದ್ದು ಬೆಳವಣಿಗೆ ಕುಂಠಿತಗೊಂಡು ಇಳುವರಿ ಬಾರದೇ ನಾಶವಾಗುವ ಭೀತಿ ಎದುರಾಗಿದೆ. ಹೂವುಗಳು ಕೂಡ ಕಡಿಮೆ ಸಂಖ್ಯೆಯಲ್ಲಿವೆ. ಹೂವು ಬಿಟ್ಟ ಕಾಯಿಗಳೂ ಹಳದಿ ಬಣ್ಣದಿಂದ ಅಂಕುಡೊಂಕು ಆಗಿವೆ. ಶೇ 48ರಷ್ಟು ಬೆಳೆ ನಾಶ ಭೀತಿ ಎದುರಾಗಿದೆ.

ADVERTISEMENT

ತಾಲ್ಲೂಕಿನಲ್ಲಿ 30 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. ಹಳದಿ ನಂಜಾಣು ರೋಗಕ್ಕೆ ಹುಳು-ಕೀಟ ಕಾರಣವಾಗಿದ್ದು ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹೋಗಿ ರಸ ಹೀರುವುದರಿಂದ ಈ ವೈರಾಣು ಗಿಡದಿಂದ ಗಿಡಕ್ಕೆ ಹರಡುತ್ತದೆ. ಪ್ರಾರಂಭದಲ್ಲೇ ನಿಯಂತ್ರಿಸಬೇಕು. ರೋಗ ಕಾಣಿಸಿಕೊಂಡ ಗಿಡಗಳನ್ನು ತಕ್ಷಣ ಕಿತ್ತು ನೆಲದಲ್ಲಿ ಹೂಳಬೇಕು ಅಥವಾ ಸುಡಬೇಕು. ಆರಂಭದಿಂದಲೇ ಕೀಟನಾಶಕ ಬಳಕೆ ಮಾಡಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ನಾಗರಾಜ ಮಾಹಿತಿ ನೀಡಿದರು.

‘ರೈತರು ₹1,500 ಕೊಟ್ಟು 5 ಕೆ.ಜಿ ಬಿತ್ತನೆ ಬೀಜದ ಪ್ಯಾಕೆಟ್ ಖರೀದಿ ಮಾಡಿ ಬಿತ್ತನೆ ಮಾಡಿದ್ದಾರೆ. ಈ ರೋಗಕ್ಕೆ ಯಾವುದೇ ಔಷಧಿ ಉಪಚಾರ ಇಲ್ಲ. ಕೃಷಿ ಅಧಿಕಾರಿಗಳು ಈವರೆಗೂ ಜಮೀನುಗಳಿಗೆ ಭೇಟಿ ನೀಡಿ ರೋಗ ನಿಯಂತ್ರಣ ಕುರಿತು ಮಾಹಿತಿ ನೀಡುತ್ತಿಲ್ಲ’ ಎಂಬುದು ರೈತರ ಆರೋಪ.

ಕೃಷಿ ಇಲಾಖೆ ಅಧಿಕಾರಿಗಳು ಸಮೀಕ್ಷೆ ಮಾಡಬೇಕು. ಹೆಸರು ಬೆಳೆಗೆ ವಿಮೆ ಮಾಡಿಸುತ್ತಿದ್ದು ಸರ್ಕಾರ ವಿಮೆ ಕಂಪನಿಗೆ ತಿಳಿಹೇಳಿ ಹಾನಿಯಾದ ಕುರಿತು ವರದಿ ಸಲ್ಲಿಸಿ ವಿಮೆ ಕಂಪನಿ ಅಥವಾ ಸರ್ಕಾರದಿಂದ ಪರಿಹಾರ ದೊರೆಯುವಂತೆ ಮಾಡಬೇಕು ಎನ್ನುವುದು ರೈತರ ಆಗ್ರಹ. 

‘ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ’

ಸತತ ಮಳೆಯಿಂದ ರೈತರ ಜಮೀನುಗಳಿಗೆ ಭೇಟಿ ನೀಡಿ ರೋಗ ನಿಯಂತ್ರಣದ ಬಗ್ಗೆ ಮಾಹಿತಿ ನೀಡಲು ಆಗುತ್ತಿಲ್ಲ. ಮಳೆ ಸ್ವಲ್ಪ ಕಡಿಮೆಯಾದರೆ ರೈತರ ಜಮೀನುಗಳಿಗೆ ಕೃಷಿ ವಿಜ್ಞಾನಿಗಳೊಂದಿಗೆ ಭೇಟಿ ನೀಡಿ ಮಾಹಿತಿ ನೀಡುತ್ತೇವೆ. ರೈತರು ಹಳದಿ ಬೂದು ರೋಗಕ್ಕೆ ಥಯೋಮೈತಕ್ಝಾನ್ 1 ಟ್ಯಾಂಕ್‌ಗೆ 6-8 ಮಿ.ಲೀ ಅಥವಾ ಒಲವಿನ್ ಫೆಕ್ಸು 15 ಮಿ.ಲೀ ಹಾಕಿ ಸಿಂಪಡಣೆ ಮಾಡಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ ಎಂದು ಸಹಾಯಕ ಕೃಷಿ ಅಧಿಕಾರಿ ಪ್ರಮೋದ್ ತಿಳಿಸಿದರು.

ಸರ್ಕಾರದ ಖರೀದಿ ಕೇಂದ್ರದಿಂದ ಹೆಸರು ಬೀಜ ಖರೀದಿಸಿ ಬಿತ್ತನೆ ಮಾಡಿದ್ದೇನೆ. 2 ಬಾರಿ ಔಷಧೋಪಚಾರ ಮಾಡಿದರೂ ರೋಗ ನಿಯಂತ್ರಣ ಆಗುತ್ತಿಲ್ಲ. ಖರ್ಚು ಮರಳಿ ಬಾರದ ಪರಿಸ್ಥಿತಿ ಇದೆ
–ಸಂಗಮೇಶ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.