ADVERTISEMENT

ಕುಷ್ಟಗಿ: ಸಹಜ ಸೌಂದರ್ಯದ ಗುಮಗೇರಿ ಕೆರೆ; ಪರಿಸರ ಪಾಠಕ್ಕೆ ಹೇಳಿ ಮಾಡಿಸಿದ ತಾಣ

ತರಹೇವಾರಿ ಪಕ್ಷಿಗಳ ಕಲರವ

ನಾರಾಯಣರಾವ ಕುಲಕರ್ಣಿ
Published 15 ಡಿಸೆಂಬರ್ 2025, 6:46 IST
Last Updated 15 ಡಿಸೆಂಬರ್ 2025, 6:46 IST
ಕುಷ್ಟಗಿ ತಾಲ್ಲೂಕು ಗುಮಗೇರಿ ಬಳಿಯ ಜಿನುಗು ಕೆರೆಯ ವಿಹಂಗಮ ನೋಟ
ಕುಷ್ಟಗಿ ತಾಲ್ಲೂಕು ಗುಮಗೇರಿ ಬಳಿಯ ಜಿನುಗು ಕೆರೆಯ ವಿಹಂಗಮ ನೋಟ   

ಕುಷ್ಟಗಿ: ಪಟ್ಟಣದಿಂದ ಆರೇಳು ಕಿಮೀ ದೂರದಲ್ಲಿರುವ ತಾಲ್ಲೂಕಿನ ಗುಮಗೇರಿ ಕೆರೆಗೆ ಈಗ ಜೀವಕಳೆ ಬಂದಿದೆ. ಉತ್ತಮ ಮಳೆಯಿಂದ ಭರ್ತಿಯಾಗಿ ಮೈದುಂಬಿಕೊಂಡಿರುವ ಜಲರಾಶಿ ಪರಿಸರ, ಪಕ್ಷಿಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.

ಅಂತರ್ಜಲ ಮಟ್ಟ ಸುಧಾರಿಸುವುದು, ಪ್ರಾಣಿ, ಪಕ್ಷಿ, ನಿಶಾಚರಿಗಳಿಗೆ ನೀರಿನಾಸರೆ ಒದಗಿಸುವ ಉದ್ದೇಶದಿಂದ ಗ್ರಾಮದ ಪಕ್ಕದಲ್ಲಿ ಸಣ್ಣ ನೀರಾವರಿ ಇಲಾಖೆ ದಶಕದ ಹಿಂದೆಯೆ ಜಿನುಗು ಕೆರೆ ನಿರ್ಮಿಸಿದೆ. ಕೆರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿದರೆ ಜನಾಕರ್ಷಣೆ ಅಷ್ಟೇ ಅಲ್ಲ ಪರಿಸರ, ಪಕ್ಷಿಪ್ರಿಯರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ನಿಸರ್ಗ ಸೌಂದರ್ಯದ ಪಾಠ ಮಾಡುವ ಸುಂದರ ತಾಣವಾಗುತ್ತದೆ.

ಚುಮುಚುಮು ಚಳಿಯಲ್ಲಿ ಸೂರ್ಯೋದಯ ಅಥವಾ ಸಂಜೆ ಇಳಿಹೊತ್ತಿನಲ್ಲಿ ಈ ಕೆರೆಯ ನೈಸರ್ಗಿಕ ಸೌಂದರ್ಯ ಆಸ್ವಾದಿಸುವುದು ಕೆಲವರ ಪಾಲಿಗೆ ಆನಂದದ ಅನುಭೂತಿಯ ಸಂಗತಿಯೂ ಹೌದು. ನೀರಿಲ್ಲದೆ ಸೊರಗಿದಂತಿದ್ದ ಕೆರೆಗೆ ಈ ಬಾರಿಯ ಮಳೆ ಸಾಕಷ್ಟು ಅನುಕೂಲ ಒದಗಿಸಿದೆ.

ADVERTISEMENT

ಸುತ್ತಲೂ ಸಣ್ಣ ಸಣ್ಣ ಗುಂಡುಕಲ್ಲುಗಳು, ನೀಲಾಕಾಶದ ವರ್ಣ ಕೆರೆಗೆ ಇಳಿದಂತೆ ತಿಳಿ ನೀಲಿ ಬಣ್ಣದ ನೀರು ತುಂಬಿಕೊಂಡ ಕೆರೆ. ಸುತ್ತಲೂ ಮೈದಳೆದಿರುವ ಹಚ್ಚಹರಿಸಿರು ಹೊದ್ದ ಕುರುಚಲು ಬನಸಿರಿ. ಸ್ವಚ್ಛಂದವಾಗಿ ತೆರೆಗಳ ಮೇಲೆ ರೆಕ್ಕೆಬಿಚ್ಚಿ ಹಾರಾಡುವ ಹಕ್ಕಿಗಳ ಕಲರವ. ಜಲಜೀವಿಗಳಿಗೆ ಕೊಕ್ಕು ಹಾಕುವುದಕ್ಕೆ ಹೊಂಚು ಹಾಕುತ್ತಿರುವ ಮಿಂಚುಳ್ಳಿ ಇತರೆ ಬಣ್ಣ ಬಣ್ಣದ ಪಕ್ಷಿಗಳು. ಹೀಗೆ ಧರೆಗಿಳಿದ ಸ್ವರ್ಗದಂಥ ನಿಸರ್ಗ ದೇವತೆಯನ್ನು ಆರಾಧಿಸುವುದಕ್ಕೆ ಬೇರೆ ಏನು ಬೇಕು? ಅದನ್ನು ಅನಭವಿಸುವ ಮನಸ್ಸು ಬೇಕಷ್ಟೆ ಎಂಬಿತ್ಯಾದಿ ಉದ್ಗಾರ ನಿಸರ್ಗ ಪ್ರೀತಿಸುವವರದ್ದು.

ಹೆಚ್ಚು ನೀರು ಸಂಗ್ರಹವಾಗಿದ್ದನ್ನು ಗುರುತಿಸಿರುವ ದೂರದ ವಲಸೆ ಪಕ್ಷಿಗಳು ಗುಮಗೇರಿ ಕೆರೆಯ ಜಾಡು ಹಿಡಿದಿದಂತಿದೆ. ಸ್ಥಳೀಯ ಅನೇಕ ತರಹದ ಪಕ್ಷಿಸಂಕುಲಗಳ ಜೊತೆಗೆ ಸಾವಿರಾರು ಮೈಲಿ ದೂರದಿಂದಲೂ ಇಲ್ಲಿಗೆ ಪಕ್ಷಿಗಳು ಬರುತ್ತವೆ. ಅಪಾಯ ಇಲ್ಲ ಎಂಬುದು ಮನವರಿಕೆಯಾದರೆ ಗುಮಗೇರಿ ಕೆರೆ ಅನೇಕ ರೀತಿಯ ಹಕ್ಕಿ ಪಕ್ಷಿಗಳ ವೈವಿಧ್ಯಮಯ ತಾಣವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎನ್ನುತ್ತಾರೆ ಪಕ್ಷಿಪ್ರಿಯರು.

ಹೆಚ್ಚಿನ ನೀರಿನ ಸಂಗ್ರಹಕ್ಕೆ ಕ್ರಮ ಅಗತ್ಯ

ಗುಮಗೇರಿ ಕೆರೆ ಜಿನುಗು ಕೆರೆಯಾಗಿದ್ದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುವುದಕ್ಕೆ ಕೆರೆಯಲ್ಲಿ ಅವಕಾಶವಿದೆ. ಆದರೆ ಕೆರೆ ಕೋಡಿ (ವೇಸ್ಟ್‌ವೇರ್) ಕೆಳಮಟ್ಟದಲ್ಲಿರುವುದರಿಂದ ಹೆಚ್ಚಿನ ಪಾಲಿನ ನೀರು ಹರಿದುಹೋಗುತ್ತದೆ. ಅಷ್ಟೇ ಅಲ್ಲ ಕಲ್ಲುಗಳ ರಂದ್ರಗಳ ಮೂಲಕ ನೀರು ಹರಿದು ಹಳ್ಳ ಸೇರುತ್ತದೆ. ನೀರು ನಿಲ್ಲಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಅಗತ್ಯಕ್ರಮ ಕೈಗೊಳ್ಳಬೇಕಿದೆ. ಅದೇ ರೀತಿ ಕೆರೆಯ ಆಸುಪಾಸಿನಲ್ಲಿ ಗಾಳಿ ಯಂತ್ರಗಳನ್ನು ಅಳವಡಿಸುವುದರಿಂದ ಜೀವವೈಧ್ಯತೆಗೆ ಧಕ್ಕೆ ಬರುತ್ತದೆ. ಈ ಬಗ್ಗೆ ಸರ್ಕಾರ ನಿಗಾ ವಹಿಸಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.

ಕೆರೆ ಪ್ರದೇಶ ಆಕರ್ಷಣೆಯ ತಾಣವಾಗುವುದರಲ್ಲಿ ಸಂದೇಹವಿಲ್ಲ. ಜೀವವೈವಿಧ್ಯ ಸಹಜ ನಿಸರ್ಗ ಸೌಂದರ್ಯ ಉಳಿಸಿ ಸಂರಕ್ಷಿಸುವುದಕ್ಕೆ ನೀರಾವರಿ ಇಲಾಖೆ ಮುಂದಾಗಬೇಕಿದೆ.
-ಶೇಖರಗೌಡ ಮಾಲಿಪಾಟೀಲ, ಸಾಹಿತಿ
ಸಂತಾನ ಅಭಿವೃದ್ಧಿಗಾಗಿ ದೂರದೂರದ ಪಕ್ಷಿಗಳು ಇಲ್ಲಿಗೆ ಬರುತ್ತಿವೆ. ಕೆರೆ ಅಭಿವೃದ್ಧಿಯ ಜೊತೆಗೆ ಸೂಕ್ತ ದಾರಿ ನಿರ್ಮಿಸಿಗೆ ಕೆರೆ ತಟದಲ್ಲಿ ಬೆಂಚ್‌ಗಳನ್ನು ಅಳವಡಿಸಲು ಗ್ರಾಪಂ ಕ್ರಮ ಕೈಗೊಳ್ಳಲಿ.
-ಹನುಮೇಶ ಶೆಟ್ಟರ, ಗ್ರಾಮಸ್ಥ
ಸಹಜ ಸೌಂದರ್ಯದ ಗುಮಗೇರಿ ಕೆರೆ ಶಾಲಾ ಮಕ್ಕಳಿಗೆ ಪರಿಸರ ಪಾಠಕ್ಕೆ ಹೇಳಿ ಮಾಡಿಸಿದ ತಾಣ. ಮದ್ಯವ್ಯಸನಿಗಳು ಕಿಡಿಗೇಡಿಗಳ ತಾಣವಾಗದಂತೆ ನೋಡಿಕೊಳ್ಳಬೇಕು. ಪರಿಸರ ಪ್ರೀತಿ ಮನಸ್ಸುಳ್ಳವರು ಇಲ್ಲಿಗೆ ಬರುವಂತಾಗಲಿ.
-ಪಾಂಡುರಂಗ ಆಶ್ರೀತ್, ಛಾಯಾಗ್ರಾಹಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.