ಕೊಪ್ಪಳ: ಸಕ್ಕರೆ ಕಾರ್ಖಾನೆ ಸ್ಥಾಪನೆ ವಿರೋಧಿಸಿ ತಾಲ್ಲೂಕಿನ ಮುದ್ದಾಬಳ್ಳಿ ಹಾಗೂ ಗೊಂಡಬಾಳ ಗ್ರಾಮಸ್ಥರು ಬುಧವಾರವೂ ತಮ್ಮ ಪ್ರತಿಭಟನೆ ಮುಂದುವರೆಸಿದ್ದು, ಗೊಂಡಬಾಳ ಗ್ರಾ.ಪಂ.ಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.
ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಗ್ರಾಮಸ್ಥರಿಂದ ನಿರಂತರ ವಿರೋಧ ವ್ಯಕ್ತವಾಗುತ್ತಿದೆ. ಆದರೂ ಕಾಣದ ಕೈಗಳಿಂದ ಕಾರ್ಖಾನೆ ಸ್ಥಾಪನೆಗೆ ಎನ್‍ಒಸಿ ಪಡೆಯುವ ಪ್ರಯತ್ನ ನಡೆದಿದ್ದು, ಇದನ್ನು ನಾವು ಒಪ್ಪುವುದಿಲ್ಲ ಎಂದು ಹೋರಾಟನಿರತರು ಹೇಳಿದರು. ಗ್ರಾಮ ಪಂಚಾಯಿತಿಯಲ್ಲಿ ಕೆಲ ಸದಸ್ಯರು ಕಾರ್ಖಾನೆ ಸ್ಥಾಪನೆಗೆ ಎನ್‍ಒಸಿ ಕೊಡಲು ನಿರ್ಧರಿಸಿರುವುದನ್ನು ಖಂಡಿಸಿದ ಗ್ರಾಮಸ್ಥರು ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಸದಸ್ಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಅಧ್ಯಕ್ಷರು ಹಾಗೂ ಸದಸ್ಯರನ್ನು ಗ್ರಾ.ಪಂ.ಗೆ ಕರೆಯಿಸಬೇಕು. ತುರ್ತು ಸಭೆ ನಡೆಸಿ ಮೊದಲು ಮಾಡಿರುವ ಠರಾವು ರದ್ದುಪಡಿಸಿ, ಎನ್‍ಒಸಿ ಕೊಡುವುದಿಲ್ಲ ಎಂದು ತುರ್ತು ಸಭೆಯಲ್ಲಿ ನಿರ್ಧರಿಸಬೇಕು ಎಂದು ಬಿಗಿಪಟ್ಟು ಹಿಡಿದರು.
ಪ್ರಮುಖರಾದ ಕೆ.ಎಫ್.ಮುದ್ದಾಬಳ್ಳಿ, ದೇವೇಂದ್ರಸ್ವಾಮಿ ಏಕದಂಡಗಿಮಠ, ಗವಿಸಿದ್ದನಗೌಡ ಪಾಟೀಲ, ರಾಜೀವರಡ್ಡಿ ಮಾದಿನೂರು, ಮಲ್ಲಪ್ಪ ಕುಕನೂರು, ಮಹೇಶ ಹಿರೇಮಠ, ಮಲ್ಲಿಕಾರ್ಜುನ ಕಮ್ಮಾರ ಸೇರಿದಂತೆ ಹಲವರು ಮಾತನಾಡಿ,‘ನಮಗೆ ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆ ಬೇಡವೇ ಬೇಡ’ ಎಂದರು.
ಸಂಜೆ ತನಕ ಪ್ರತಿಭಟನೆ ನಡೆಸಿದ ಬಳಿಕ ಪಿಡಿಒ ವಿಜಯಲಕ್ಷ್ಮಿ ಮಾತನಾಡಿ,‘ಎನ್‍ಒಸಿ ಕೊಟ್ಟಿಲ್ಲ. ಸಭೆಯಲ್ಲಿ ಸದಸ್ಯರ ನಿರ್ಣಯದಂತೆ ಠರಾವು ಮಾತ್ರ ನಿರ್ಧರಿಸಿದೆ. ಎನ್‍ಒಸಿ ಕೊಡುವುದಿಲ್ಲ’ ಎಂದು ಭರವಸೆ ವ್ಯಕ್ತಪಡಿಸಿದರು. ಆಗ ಜನ ಇದನ್ನು ಲಿಖಿತ ರೂಪದಲ್ಲಿ ನೀಡಬೇಕು’ ಎಂದು ಹೇಳಿದರು.
ಸುರೇಂದ್ರಗೌಡ ಪಾಟೀಲ, ಈರಣ್ಣ ಮಾಳೆಕೊಪ್ಪ, ಶರಣಪ್ಪ ಸಜ್ಜನ್, ವಸಂತರಡ್ಡಿ ಮಾದಿನೂರು, ರಾಜೀವರಡ್ಡಿ, ಮಂಜುನಾಥ ಮಾದಿನೂರು, ಗವಿಸಿದ್ದನಗೌಡ ಪಾಟೀಲ್, ಯಂಕಪ್ಪ ಚುಕ್ಕನಕಲ್ ಸೇರಿ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.