ADVERTISEMENT

ಹನುಮನ ನಾಡಿನಲ್ಲಿ ಮೇಳೈಸಿದ ಭಕ್ತಿ: ಕೇಸರಿಮಯವಾದ ಆಂಜನಾದ್ರಿ ಬೆಟ್ಟ

ಅನುರಣಿಸಿದ ರಾಮ, ಆಂಜನೇಯನ ಹಾಡುಗಳು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 5:42 IST
Last Updated 4 ಡಿಸೆಂಬರ್ 2025, 5:42 IST
ಹನುಮಮಾಲೆ ವಿಸರ್ಜನೆ ಹಿನ್ನೆಲೆಯಲ್ಲಿ ಅಂಜನಾದ್ರಿಗೆ ಆಗಮಿಸಿದ್ದ ಬೆಳಗಾವಿ ಜಿಲ್ಲೆ ಅಂಕಲಗಿಯ ಹನುಮಮಾಲಾಧಾರಿಗಳು ದೀಪಾಲಂಕೃತ ವೃತ್ತವೊಂದರಲ್ಲಿ ಹಿಂದೂ ಧಾರ್ಮಿಕ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರಗಳು/ಭರತ್ ಕಂದಕೂರ
ಹನುಮಮಾಲೆ ವಿಸರ್ಜನೆ ಹಿನ್ನೆಲೆಯಲ್ಲಿ ಅಂಜನಾದ್ರಿಗೆ ಆಗಮಿಸಿದ್ದ ಬೆಳಗಾವಿ ಜಿಲ್ಲೆ ಅಂಕಲಗಿಯ ಹನುಮಮಾಲಾಧಾರಿಗಳು ದೀಪಾಲಂಕೃತ ವೃತ್ತವೊಂದರಲ್ಲಿ ಹಿಂದೂ ಧಾರ್ಮಿಕ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರಗಳು/ಭರತ್ ಕಂದಕೂರ   

ಗಂಗಾವತಿ: ಸೂರ್ಯೋದಯಕ್ಕೂ ಮೊದಲೇ ಕಣ್ಣು ಹಾಯಿಸಿದಷ್ಟೂ ದೂರ ಜನವೊ ಜನ, ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಮಾಲಾಧಾರಿಗಳ ಉಡುಪು ಧರಿಸಿ ಭಕ್ತಿಯಿಂದ ಬೆಟ್ಟವೇರಿದ ಭಕ್ತರು, ಎಲ್ಲೆಡೆ ಮೊಳಗಿದ ರಾಮ ಹಾಗೂ ಹನುಮನ ಸ್ಮರಣೆಯ ಘೋಷಣೆಗಳು, ಬೆಟ್ಟದಲ್ಲಿ ತರಹೇವಾರಿ ಹೂವಿನ ಅಲಂಕಾರದ ತೋರಣ, ಭಕ್ತರಿಂದ ಜೈ ಶ್ರೀರಾಮ್, ಭಜರಂಗಿ ಭಜರಂಗಿ, ಕಟ್ಟಿದೆವೊ, ಕಟ್ಟಿದೆವೊ ರಾಮಮಂದಿರ ಎನ್ನುವ ಘೋಷಣೆ.

ಹನುಮ ಉದಯಿಸಿದ ನಾಡು ಎಂದೇ ಖ್ಯಾತಿಯಾದ ತಾಲ್ಲೂಕಿನ ಆಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲು ಬುಧವಾರ ಕಂಡುಬಂದ ಚಿತ್ರಣವಿದು. ಹನುಮದ್‌ ವ್ರತದ ಅಂಗವಾಗಿ ತಮ್ಮ ಸಂಕಲ್ಪಕ್ಕೆ ತಕ್ಕಂತೆ ಕಠಿಣ ವ್ರತ ನಡೆಸಿ ಅಂಜನಾದ್ರಿಯ ಸನ್ನಿಧಿಯಲ್ಲಿ ಲಕ್ಷಾಂತರ ಭಕ್ತರು ಕೊರಳಲ್ಲಿ ಧರಿಸಿದ್ದ ತುಳಸಿ ಮಾಲೆ ವಿಸರ್ಜನೆ ಮಾಡಿದರು. ಮಾಲಾಧಾರಿಗಳು ಬೆಟ್ಟ ಹತ್ತುವ ಮಾರ್ಗದುದ್ದಕ್ಕೂ ಭಕ್ತಿಯ ಹಾಡುಗಳನ್ನು ಹಾಡಿ ಕುಣಿದರು.

ಕೊಪ್ಪಳ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಅನೇಕ ಭಕ್ತರು ವಾಹನಗಳಲ್ಲಿ ಬಂದರೆ, ಇನ್ನು ಹಲವರು ದೂರದ ಊರುಗಳಿಂದ ಮೂರ್ನಾಲ್ಕು ದಿನಗಳ ಹಿಂದೆ ತಮ್ಮೂರಿನಿಂದ ಪಾದಯಾತ್ರೆ ಮೂಲಕ ಅಂಜನಾದ್ರಿ ತಲುಪಿದರು. ಜಿಲ್ಲೆ ಪ್ರವೇಶಿಸಿದ ಭಕ್ತರಿಗೆ ಅಂಜನಾದ್ರಿಗೆ ತೆರಳುವ ಮಾರ್ಗದ ಅಲ್ಲಲ್ಲಿ ಉಪಹಾರ, ಊಟ ಹಾಗೂ ದಣಿವು ತಣಿಸಲು ಮಜ್ಜಿಗೆ, ಲಸ್ಸಿ ವ್ಯವಸ್ಥೆ ಮಾಡಲಾಗಿತ್ತು. ಅನೇಕ ಊರುಗಳಲ್ಲಿ ಗ್ರಾಮಸ್ಥರೇ ಸ್ವಯಂಪ್ರೇರಣೆಯಿಂದ ಹನುಮ ಮಾಲಾಧಾರಿಗಳಿಗೆ ಊಟೋಪಚಾರದ ಸೌಲಭ್ಯ ಕಲ್ಪಿಸಿ ತಮ್ಮ ಸೇವೆ ಸಲ್ಲಿಸಿದರು. ನೂರಾರು ಕಿ.ಮೀ. ದೂರದಿಂದ ನಡೆದು ಅಂಜನಾದ್ರಿಯ 575 ಮೆಟ್ಟಿಲುಗಳನ್ನು ಏರಿದ ಬಳಿಕ ಮಾಲಾಧಾರಿಗಳು ಸಂಭ್ರಮಕ್ಕೆ ಪಾರವಿರಲಿಲ್ಲ. ಭಕ್ತಿಯಿಂದ ಹಲವರು ತಲೆಯ ಮೇಲೆ ಹೊತ್ತಿದ್ದ ಪೂಜೆ ಸಾಮಗ್ರಿಯ ಬಟ್ಟೆಯ ಗಂಟು ಹಿಡಿದು ಕುಣಿದರು.

ADVERTISEMENT

ಸೆಲ್ಫಿ ಗೀಳು: ಮಾಲಾಧಿಕಾರಿಗಳು ಬೆಟ್ಟದ ಮೇಲೆ ಅಂಜನಾದ್ರಿಯ ದರ್ಶನ ಪಡೆದು ವಿಶ್ರಾಂತಿ ಪಡೆದು ಅಪಾಯಕಾರಿಯಾದಿ ಬೆಟ್ಟದ ತುದಿಯಲ್ಲಿ ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳುತ್ತ ಜೀವದ ಜೊತೆ ಚೆಲ್ಲಾಟವಾಡಿದರು.

ಮಾಲೆ ವಿಸರ್ಜನೆಗೆ ಬಂದವರಲ್ಲಿ ಬೆಳಗಾವಿ ಜಿಲ್ಲೆಯವರೇ ಹೆಚ್ಚಿದ್ದರು. ಹಿಂದೆ ಮುಜರಾಯಿ ಖಾತೆ ಸಚಿವರಾಗಿದ್ದ ಶಶಿಕಲಾ ಜೊಲ್ಲೆ ಪ್ರತಿವರ್ಷವೂ ಭಕ್ತರಿಗೆ ಬಸ್‌ಗಳ ಸೌಲಭ್ಯ ಮಾಡಿಕೊಡುತ್ತಾರೆ. ಈ ಸಲವೂ 38 ಬಸ್‌ಗಳ ವ್ಯವಸ್ಥೆ ಮಾಡಿಕೊಟ್ಟಿದ್ದರಿಂದ ಬೆಳಗಾವಿ ಜಿಲ್ಲೆಯ ಭಕ್ತರು ಹುಲಿಗಿಯಲ್ಲಿ ಹುಲಿಗೆಮ್ಮ ದೇವಿ ದರ್ಶನ ಪಡೆದು ಬಳಿಕ ಅಂಜನಾದ್ರಿಗೆ ಬಂದಿದ್ದರು.

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ದೇವಸ್ಥಾನವಿರುವ ಕಾರಣ ಜಿಲ್ಲಾಡಳಿತವೇ ಭಕ್ತರಿಗೆ ಪಾಯಸ, ಅನ್ನ, ಸಾಂಬರ್, ಟೊಮೆಟೊ ಪಲ್ಲೆ ಊಟದ ವ್ಯವಸ್ಥೆ ಮಾಡಿತ್ತು.

ದಿಢೀರ್‌ ಏರಿಕೆಯಾದ ಜನ; ಅಪಾಯ ತಪ್ಪಿಸಿದ ಪೊಲೀಸರು

ಈಗಾಗಲೇ ಜಿಲ್ಲೆಯಲ್ಲಿ ಚಳಿ ಜೋರಾಗಿರುವುದರಿಂದ ಪ್ರತಿವರ್ಷಕ್ಕಿಂತ ಈ ಸಲ ಕಡಿಮೆ ಪ್ರಮಾಣದಲ್ಲಿ ಮಾಲಾಧಾರಿಗಳು ಬರಬಹುದು ಎನ್ನುವ ನಿರೀಕ್ಷೆಯಿತ್ತು. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ 1500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಮಾಲೆ ವಿಸರ್ಜನೆಯ ಹಿಂದಿನ ದಿನ ಅಂದಾಜು 40 ಸಾವಿರದಷ್ಟಿದ್ದ ಸಂಖ್ಯೆ ಬುಧವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಲಕ್ಷ ದಾಟಿದ್ದರಿಂದ ಜನಜಂಗುಳಿ ಉಂಟಾಗಿ ನೂಕುನುಗ್ಗಲಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಗುಂಪು ಮಾಡಿ ಹಂತಹಂತವಾಗಿ ಬೆಟ್ಟಕ್ಕೆ ಕಳುಹಿಸಿ ಜನರ ಆತಂಕ ದೂರ ಮಾಡಿದರು. ಅವಸರದಲ್ಲಿ ಬೆಟ್ಟವೇರಲು ಭಕ್ತರು ಮುಂದಾದಾಗ ಪಾದಗಟ್ಟೆ ಬಳಿ ನೂಕುನುಗ್ಗಲು ಉಂಟಾಗಿ ಭಕ್ತರೊಬ್ಬರ ಕಾಲು ಬೆರಳು ಕತ್ತರಸಿ ಹೋಯಿತು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಕಳುಹಿಸಲಾಯಿತು. ತಿರುಮಲ ತಿರುಪತಿ ಮಾದರಿಯಲ್ಲಿ ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿ ಹಂತಹಂತವಾಗಿ ಭಕ್ತರನ್ನು ಬೆಟ್ಟ ಏರಲು ಅವಕಾಶ ಮಾಡಿಕೊಟ್ಟರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧ ಹೆಚ್ಚುವರಿ ಎಸ್‌.ಪಿ. ಹೇಮಂತ ಕುಮಾರ್‌ ಡಿವೈಎಸ್‌ಪಿ ಮುತ್ತಣ್ಣ ಸವರಗೋಳ ಖುದ್ದು ಮುತುವರ್ಜಿ ವಹಿಸಿ ದೊಡ್ಡ ಅವಘಡವಾಗದಂತೆ ಎಚ್ಚರಿಕೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್‌ ನೇಗಿ ಜೊತೆಯಲ್ಲಿದ್ದರು.   

ಬೇಕು ಕಾಯಂ ಸೌಲಭ್ಯ; ಭಕ್ತರ ಆಗ್ರಹ

2008ರಿಂದ ಹನುಮ ಮಾಲೆ ವಿಸರ್ಜನೆ ಆರಂಭವಾಗಿದ್ದು ಆರಂಭದಲ್ಲಿ ಈಗಿನಷ್ಟು ಆಗ ದೊಡ್ಡ ಪ್ರಮಾಣದಲ್ಲಿ ಭಕ್ತರು ಬರುತ್ತಿರಲಿಲ್ಲ. ಈಗ ಬೆಟ್ಟವೇರುವ ಮಾರ್ಗದಲ್ಲಿ ಕಿರಿದಾದ ಜಾಗವಿರುವ ಕಾರಣ ಮಾಲಾಧಾರಿಗಳು ಈಗ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ವರ್ಷದಿಂದ ವರ್ಷಕ್ಕೆ ಮಾಲೆ ವಿಸರ್ಜನೆಗೆ ಬರುವ ಭಕ್ತರ ಸಂಖ್ಯೆಯೂ ಏರುತ್ತಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈಗಾಗಲೇ ₹200 ಕೋಟಿ ಘೋಷಣೆ ಮಾಡಿದೆ. ಈ ಅನುದಾನ ಬಳಸಿಕೊಂಡು ಮೆಟ್ಟಿಲುಗಳನ್ನು ವಿಸ್ತರಣೆ ಮಾಡಬೇಕು ಬೆಟ್ಟಕ್ಕೆ ಹೋಗಿಬರಲು ಸರಾಗ ವ್ಯವಸ್ಥೆ ಮಾಡಬೇಕು ಎನ್ನುವುದು ಭಕ್ತರ ಆಗ್ರಹವಾಗಿದೆ. ಮಾಲೆ ವಿಸರ್ಜನೆ ಹಾಗೂ ಹನುಮ ಜಯಂತಿ ಸಂದರ್ಭದಲ್ಲಿ ಮುತುವರ್ಜಿ ವಹಿಸಿ ಕಲ್ಪಿಸುವ ಸೌಲಭ್ಯ ಕಾಯಂ ಆಗಿರಬೇಕು ಎನ್ನುವ ಅಭಿಪ್ರಾಯವನ್ನು ಮಾಲಾಧಾರಿಗಳು ವ್ಯಕ್ತಪಡಿಸಿದರು.

ಬೆಟ್ಟದಲ್ಲಿ ವಿಶೇಷ ಪೂಜೆ ಅಲಂಕಾರ

ಅಂಜನಾದ್ರಿ ಬೆಟ್ಟದ ಗರ್ಭಗುಡಿಯಲ್ಲಿನ ಆಂಜನೇಯನಿಗೆ ಬುಧವಾರ ಬೆಳಗಿನ ಜಾವವೇ ಜಲಾಭಿಷೇಕ ಹಾಲಿನ ಅಭಿಷೇಕ 108 ಟೆಂಗಿನಕಾಯಿ ಎಳೆನೀರಿನ ಅಭಿಷೇಕ ಪುಷ್ಪಾಲಂಕಾರ ಸಿಂಧೂರ ಸೇವೆ 1111 ತುಳಸಿ ಅರ್ಚನೆ ಗುಲಾಬಿ ಹೂವಿನಿಂದ 108 ಹನುಮಾನ್ ಸ್ತೋತ್ರಪಠಣ ಮಹಾಮಂಗಳಾರತಿ ಹಾಗೂ ಹೋಮ ಜರುಗಿದವು. ಬೆಟ್ಟ ಏರುತ್ತಲೇ ಮಾಲಾಧಿಕಾರಿಗಳು ಆಂಜನೇಯನ ಭಾವಚಿತ್ರ ಹಿಡಿದು ಭಕ್ತಿಯ ಹಾಡುಗಳನ್ನು ಹಾಡುತ್ತಾ ಕುಣಿದರು. ಕೆಲವರು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭಾವಚಿತ್ರ ಪ್ರದರ್ಶಿಸಿದರು.

ಹನುಮ ಮಾಲಾಧಾರಿಗಳು ಅಂಜನಾದ್ರಿಯ ಪ್ರವೇಶ ದಾರಿಯ ಬಳಿ ಬುಧವಾರ ನಸುಕಿನಲ್ಲಿಯೇ ಜಮಾಯಿಸಿದ್ದರು
ಅಂಜನಾದ್ರಿಯಲ್ಲಿ ಬುಧವಾರ ಹನುಮಮಾಲೆ ವಿಸರ್ಜಿಸಿದ ಭಕ್ತರು
ಅಂಜನಾದ್ರಿಯ ಆವರಣದಲ್ಲಿ ಕಂಡ ಭಕ್ತರು ಒಡೆದ ತೆಂಗಿನಕಾಯಿಗಳ ರಾಶಿ
ಭಕ್ತರಿಗೆ ಮಾಡಲಾಗಿದ್ದ ಊಟದ ವ್ಯವಸ್ಥೆ
ಅಲಂಕೃತ ಅಂಜನಾದ್ರಿಯ ಆಂಜನೇಯ  
ತಮ್ಮನ್ನು ತಡೆದಿದ್ದಕ್ಕೆ ಮಾಲಾಧಾರಿಗಳು ಪೊಲೀಸರ ಜೊತೆ ವಾಗ್ವಾದ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.