ADVERTISEMENT

ಗಂಗಾವತಿ: ಹನುಮನ ನಾಡಿನಲ್ಲಿ ಮಾಲೆ ವಿಸರ್ಜನೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 6:17 IST
Last Updated 3 ಡಿಸೆಂಬರ್ 2025, 6:17 IST
ಅಂಜನಾದ್ರಿ ಬೆಟ್ಟದ ಪಾದಗಟ್ಟೆಯನ್ನು ತಾಳೆಗರಿ, ಹೂವಿನಿಂದ ಅಲಂಕಾರ ಮಾಡಿರುವುದು
ಅಂಜನಾದ್ರಿ ಬೆಟ್ಟದ ಪಾದಗಟ್ಟೆಯನ್ನು ತಾಳೆಗರಿ, ಹೂವಿನಿಂದ ಅಲಂಕಾರ ಮಾಡಿರುವುದು   

ಗಂಗಾವತಿ: ಕಣ್ಣು ಕೊರೈಸುವ ಜಗಮಗಿಸುವ ಬೆಳಕಿನ ಚಿತ್ತಾರ, ಕಣ್ಣು ನಿಬ್ಬೆರಗಾಗುವ ಅಲಂಕಾರ, ಮನಸ್ಸಿಗೆ ಮುದ ನೀಡುವ ಹನುಮಾನ್ ಚಾಲಿಸ್ ಪಠಣ, ಹನುಮನ ಜನ್ಮಸ್ಥಳಕ್ಕೆ ಬರುವವರಿಗೆ ಸ್ವಾಗತ ನೀಡುವ ಕೇಸರಿ ಬಣ್ಣದ ಬಂಟಿಂಗ್ಸ್, ಧ್ವಜ, ಸಂಚಾರ ದಟ್ಟಣೆ ನಿಯಂತ್ರಣ ಸೇರಿದಂತೆ ಭದ್ರತೆಗೆ ಬಿಗಿ ಪೊಲೀಸ್ ಬಂದೋಬಸ್ತ್.

ಈ ಎಲ್ಲಾ  ಚಿತ್ರಣ ಕಂಡುಬಂದಿದ್ದು ತಾಲ್ಲೂಕಿನ ಅಂಜನಾದ್ರಿಯಲ್ಲಿ. ಹನುಮ ಮಾಲೆ ವಿಸರ್ಜನೆ ಅಂಗವಾಗಿ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಸಂಭ್ರಮ ಮನೆ ಮಾಡಿದರು. ಎರಡು ದಿನಗಳಿಂದಲೇ ಭಕ್ತರು ಬರುವುದು ಆರಂಭವಾಗಿದ್ದು, ಬುಧವಾರ ಮುಕ್ತಾಯಗೊಳ್ಳಲಿದೆ. ಮಂಗಳವಾರ ರಾತ್ರಿಯಿಂದಲೇ ಬೆಟ್ಟದ ಮೆಟ್ಟಿಲುಗಳನ್ನು ಏರಿ ಆಂಜನೇಯನ ದರ್ಶನ ಪಡೆಯುವ ಪ್ರಕ್ರಿಯೆ ಆರಂಭವಾಗಿದ್ದು.    

2008ರಿಂದ ಆರಂಭವಾದ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗಿ ನಡೆದುಕೊಂಡು ಬರುತ್ತಿದೆ. ಪ್ರತಿಬಾರಿಯೂ ಮಾಲಾಧಾರಿಗಳ ಸಂಖ್ಯೆ ಹೆಚ್ಚುತ್ತಿದ್ದು, ಹನುಮಮಾಲೆ ವಿಸರ್ಜನೆಗೆ ಅಂಜನಾದ್ರಿ ಸಕಲ ರೀತಿಯಲ್ಲಿ ಸಜ್ಜುಗೊಂಡು, ಕ್ಷಣಗಣನೆಗೆ ಎದುರು ನೋಡುತ್ತಿದೆ.

ADVERTISEMENT

ಅಂಜನಾದ್ರಿ ಸುತ್ತಮುತ್ತ ಎಲ್ಲ ಕಡೆಯೂ ಅಗತ್ಯ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಿದ್ದು, ಸೋಮವಾರ ಸಂಜೆಯಿಂದಲೇ ಅಂಜನಾದ್ರಿಗೆ ಪಾದಯಾತ್ರೆ ಮೂಲಕ ಮಾಲಾಧಾರಿಗಳು ಭೇಟಿ ನೀಡುತ್ತಿದ್ದು, ಮಂಗಳವಾರ ಸಂಜೆಗೆ ಹೆಚ್ಚಿನ ಸಂಖ್ಯೆಯ ಮಾಲಾಧಿಕಾರಿಗಳು ಆಗಮಿಸಿದರು.

ಮಂಗಳವಾರ ತಡರಾತ್ರಿಯಿಂದಲೇ ಮಾಲೆ ವಿಸರ್ಜನೆ ಕಾರ್ಯ ಆರಂಭವಾಯಿತು. ಭಕ್ತರು ಮೈ ನಡುಗುವ ಚಳಿಯಲ್ಲಿಯೇ ಬೆಟ್ಟದ 575 ಮೆಟ್ಟಿಲು ಏರಿ, ಆಂಜನೇಯನ ದರ್ಶನ ಪಡೆದು ಕೆಳಗಿಳಿದರು. ಬೆಟ್ಟ ಏರಲು ಹಾಗೂ ಇಳಿಯಲು ಅಗತ್ಯ ವ್ಯವಸ್ಥೆ ಕಲ್ಪಿಸಿ, ಸಂಚಾರ ದಟ್ಟಣೆ ಉಂಟಾಗದಂತೆ ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ‌ಆನೆಗೊಂದಿ ಗ್ರಾಮದಿಂದ ಹನುಮನಹಳ್ಳಿ ಗ್ರಾಮದವರೆಗೆ ರಸ್ತೆಯಲ್ಲಿ ಪ್ರತಿ 100 ಮೀಟರ್‌ಗೆ ಬ್ಯಾರಿಕೇಡ್ ಅಳವಡಿಸಿ ಅಂಜನಾದ್ರಿಗೆ ಬೈಕ್, ಕಾರು ಬರದಂತೆ ತಡೆದು, ಮಧ್ವಾನದ ರಸ್ತೆ ಮೂಲಕ ಸಂಚಾರ ಮಾಡಲು ಅನುವು ಮಾಡಿಕೊಟ್ಟರು. ಅಲ್ಲಲ್ಲಿ ಪ್ರಾಥಮಿಕ ಚಿಕಿತ್ಸಾ ತಂಡಗಳು ನಿಯೋಜಿಸಲಾಗಿತ್ತು.

ಅಂಜನಾದ್ರಿ ಬೆಟ್ಟದ ಬಳಿನ ಜಮೀನಿನಲ್ಲಿ ಮಾಲಾಧಿಕಾರಿಗಳು ವಿಶ್ರಾಂತಿ ಮಾಡುತ್ತಿರುವುದು
ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶಾಸಕ ಜನಾರ್ಧನ ರೆಡ್ಡಿ ಹಾಗೂ ಅಧಿಕಾರಿಗಳು ಭಕ್ತಾಧಿಗಳಿಗೆ ಪ್ರಸಾದ ಬಡಿಸಿದರು
ಅಂಜನಾದ್ರಿ ಬಳಿ ಪೊಲೀಸ್ ಬಂದೋಬಸ್ತ್‌ಗೆ ಹೆಚ್ಚುವರಿ ಎಸ್ಪಿ ಡಿವೈಎಸ್ಪಿ 70 ಪಿಎಸ್ಐ 2 ಸಾವಿರ ಕಾನ್‌ಸ್ಟೆಬಲ್ 6 ಕೆ.ಎಸ್.ಆರ್.ಪಿ 9 ಡಿಎಆರ್ ವಾಹನಗಳ ಸಿಬ್ಬಂದಿ ನೇಮಿಸಲಾಗಿದೆ. ಅಗತ್ಯ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
ಡಾ. ರಾಮ್.ಎಲ್. ಅರಸಿದ್ದಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೊಪ್ಪಳ
ಮಂಗಳವಾರ ತಡರಾತ್ರಿಯಿಂದಲೇ ಊಟದ ವ್ಯವಸ್ಥೆ ಕಲ್ಪಿಸಿದ್ದು ಆಂಧ್ರಪ್ರದೇಶ ಮಹಾರಾಷ್ಟ್ರ ರಾಜ್ಯಗಳಿಂದಲೂ ಹನುಮಮಾಲಾಧಾರಿಗಳು ಬರಲಿದ್ದಾರೆ. ಎಲ್ಲರಿಗೂ ಉತ್ತಮ ವ್ಯವಸ್ಥೆ ಮಾಡಲಾಗಿದೆ.
ಡಾ. ಸುರೇಶ ಬಿ. ಇಟ್ನಾಳ ಜಿಲ್ಲಾಧಿಕಾರಿ

ಜನಪ್ರತಿನಿಧಿಗಳು ಭೇಟಿ ಪರಿಶೀಲನೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶಾಸಕ ಜಿ.ಜನಾರ್ದನ ರೆಡ್ಡಿ ಅಂಜನಾದ್ರಿಯ ಪಾದಗಟ್ಟೆ ಬಳಿ ಮಂಗಳವಾರ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು. ನಂತರ ಹನುಮನ ಪಾದಗಟ್ಟೆ ಬಳಿ ಆಂಜನೇಯನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಸಚಿವ ಶಿವರಾಜ ತಂಗಡಗಿ ಮಾತನಾಡಿ‘ವಿಸರ್ಜನೆ ಕಾರ್ಯಕ್ರಮಕ್ಕೆ ಕುಡಿಯುವ ನೀರು ಶೌಚಾಲಯ ಪಾರ್ಕಿಂಗ್ ಸ್ನಾನಘಟ್ಟ ಊಟದ ವ್ಯವಸ್ಥೆ ಸೇರಿ ಎಲ್ಲ ಕೆಲಸ ಅಚ್ಚುಕಟ್ಟಾಗಿ ಮಾಡಿದೆ. ಸುಮಾರು ಎಂಟು ಸಾವಿರ ಜನ ಭಕ್ತರು ಅಂಜನಾದ್ರಿಗೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಾಲಾಧಾರಿಗಳು ಬರುವ ನಿರೀಕ್ಷೆ ಇದೆ’ ಎಂದರು.  ನಂತರ ವೇದ ಪಾಠ ಶಾಲೆ ಬಳಿಗೆ ತೆರಳಿ ಅಡುಗೆ ತಯಾರಿ ಸ್ಥಳ ಪೆಂಡಲ್ ಊಟದ ಕೌಂಟರ್ ಪ್ರಸಾದ ಸೇರಿ ಎಲ್ಲವನ್ನು ಪರಿಶೀಲಿಸಿ ಊಟದಲ್ಲಿ ಗುಣಮಟ್ಟತೆ ಕಾಪಾಡುವಂತೆ ತಿಳಿಸಿದರು. ಬಳಿಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಕ್ತರಿಗೆ ಊಟ ಬಡಿಸಿದರು. ಅಡುಗೆ ಸಿದ್ಧತೆಯನ್ನೂ ಪರಿಶೀಲಿಸಿದರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ ಸಹಾಯಕ ಆಯುಕ್ತ ಕ್ಯಾಪ್ಟನ್‌ ಮಹೇಶ್ ಮಾಲಗಿತ್ತಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು ಡಿಎಚ್‌ಒ ಟಿ. ಲಿಂಗರಾಜು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಗಂಗಾವತಿ ತಹಶೀಲ್ದಾರ್‌ ಯು. ನಾಗರಾಜ ಕಾರಟಗಿ ತಹಶೀಲ್ದಾರ್ ಸೇರಿ ಅನೇಕರು ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.