ADVERTISEMENT

ಹನುಮಸಾಗರ | ರಸ್ತೆ ಮೇಲೆಯೇ ಹರಿಯುವ ಚರಂಡಿ ನೀರು: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:06 IST
Last Updated 9 ಜನವರಿ 2026, 7:06 IST
ಹನುಮಸಾಗರ ಪೊಲೀಸ್‌ ಠಾಣೆಯ ಎದುರು ಚರಂಡಿ ನೀರು ನಿಂತಿರುವುದು
ಹನುಮಸಾಗರ ಪೊಲೀಸ್‌ ಠಾಣೆಯ ಎದುರು ಚರಂಡಿ ನೀರು ನಿಂತಿರುವುದು   

ಹನುಮಸಾಗರ: ಇಲ್ಲಿನ ಪೊಲೀಸ್ ಠಾಣೆಯ ಮುಖ್ಯದ್ವಾರದ ಬಳಿ ಮುಖ್ಯರಸ್ತೆ ಮೇಲೆ ಚರಂಡಿ ನೀರು ಹರಿದು ಬರುತ್ತಿರುವುದರಿಂದ ಜನಸಾಮಾನ್ಯರು, ರೋಗಿಗಳು, ಮಕ್ಕಳು ನಿತ್ಯ ದುರ್ವಾಸನೆಯಿಂದ ಸಂಕಟ ಎದುರಿಸುತ್ತಿದ್ದಾರೆ.

ಗ್ರಾಮದ ಪ್ರಮುಖ ರಸ್ತೆಯಲ್ಲಿರುವ ಪೊಲೀಸ್ ಠಾಣೆ, ಪಶು ಸಂಗೋಪನ ಆಸ್ಪತ್ರೆ ಹಾಗೂ ಅದರ ಎದುರುಗಡೆ ಕಾರ್ಯನಿರ್ವಹಿಸುತ್ತಿರುವ ಆಯುಷ್ಮಾನ್ ಭಾರತ್ ಆರೋಗ್ಯ ಕೇಂದ್ರದ ಮುಂದೆ ಚರಂಡಿ ನೀರು ಬಂದು ನಿಂತು ನಿತ್ಯ ದುರ್ವಾಸನೆ ಬೀರುತ್ತಿರುವುದರಿಂದ ಪ್ರದೇಶವು ಕೊಳಚೆಯಿಂದ ಅಸಹ್ಯಕರ ಸ್ಥಿತಿಗೆ ತಲುಪಿದೆ.

ಪೊಲೀಸ್ ಠಾಣೆಗೆ ದೂರು ನೀಡಲು, ದಾಖಲೆ ಕಾರ್ಯಗಳಿಗೆ ಅಥವಾ ಇತರೆ ಸರ್ಕಾರಿ ಕೆಲಸಕ್ಕಾಗಿ ಆಗಮಿಸುವ ಜನರು ಮೂಗು ಮುಚ್ಚಿಕೊಂಡೇ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯರಸ್ತೆಯ ಮೇಲೆ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದ್ದು, ನಡೆದುಕೊಂಡು ಹೋಗುವ ಪಾದಚಾರಿಗಳು ಕಾಲಿಡಲು ಹಿಂಜರಿಯುವಂತಾಗಿದೆ.

ADVERTISEMENT

ಇದೇ ಪ್ರದೇಶದಲ್ಲಿರುವ ಆಯುಷ್ಮಾನ್ ಭಾರತ್ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬರುವ ರೋಗಿಗಳು ಹಾಗೂ ವೃದ್ಧರು ದುರ್ವಾಸನೆ ಸಹಿಸಿಕೊಂಡೇ ಆಸ್ಪತ್ರೆಗೆ ಪ್ರವೇಶಿಸುವಂತಾಗಿದೆ. ಆರೋಗ್ಯ ಕೇಂದ್ರದ ಮುಂದೆ ಚರಂಡಿ ನೀರು ಹರಿಯುವುದು ಸಾರ್ವಜನಿಕರಿಗೆ ಇನ್ನಷ್ಟು ಆರೋಗ್ಯ ಸಮಸ್ಯೆ ಎದುರಾಗುವ ಸಂಭವ ಇದ್ದು, ಸಾಕ್ರಾಮಿಕ ಸೋಂಕು ಹರಡುವ ಭೀತಿ ಹೆಚ್ಚಿದೆ. ಪಶು ಸಂಗೋಪನ ಆಸ್ಪತ್ರೆಗೆ ಬರುವ ರೈತರು ಮತ್ತು ಪಶುಪಾಲಕರು ಕೂಡ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ.

ಪೊಲೀಸ್ ಠಾಣೆ ಮುಖ್ಯದ್ವಾರದ ಬಳಿ ಚರಂಡಿ ನೀರು ನಿಂತಿರುವುದು

ಈ ಚರಂಡಿ ನೀರು ಹರಿಯುವ ಪಕ್ಕದಲ್ಲೇ ಅಂಗನವಾಡಿ ಕೇಂದ್ರ ಇದೆ. ಅಲ್ಲಿ ದಿನನಿತ್ಯ ಪುಟ್ಟ ಮಕ್ಕಳು ಆಗಮಿಸುತ್ತಿದ್ದು, ದುರ್ವಾಸನೆ ಹಾಗೂ ಅಸ್ವಚ್ಛ ಪರಿಸರದಿಂದ ಮಕ್ಕಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಂಭವ ಹೆಚ್ಚಾಗಿದೆ. ಮಲಿನ ನೀರಿನಿಂದ ಈ ಪ್ರದೇಶದಲ್ಲಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿದ್ದು, ಡೆಂಗಿ, ಮಲೇರಿಯಾ ಮುಂತಾದ ರೋಗಗಳ ಆತಂಕವೂ ಕಾಡುತ್ತಿದೆ.

ಪೊಲೀಸ್ ಠಾಣೆಯ ಮುಖ್ಯದ್ವಾರದ ಪಕ್ಕದಲ್ಲಿ ಕಸದ ರಾಶಿ ಹಾಗೂ ಚರಂಡಿ ನೀರು

ಸ್ಥಳೀಯ ನಿವಾಸಿಗಳು ಹಲವು ಬಾರಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ದೂರು ನೀಡಿದರೂ, ಸಮಸ್ಯೆ ಪರಿಹಾರಕ್ಕೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಚರಂಡಿ ಸ್ವಚ್ಛತೆ, ನೀರು ಹರಿವಿನ ವ್ಯವಸ್ಥೆ ಸರಿಪಡಿಸುವುದು ಹಾಗೂ ರಸ್ತೆ ಮೇಲಿನ ಮಲಿನ ನೀರನ್ನು ತಕ್ಷಣ ತೆರವುಗೊಳಿಸುವ ಹೊಣೆಗಾರಿಕೆಯನ್ನು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಶು ಆಸ್ಪತ್ರೆ ಕಾಂಪೌಂಡಿಗೆ ಚರಂಡಿ ನೀರು ನಿಂತಿರುವುದು
ಚರಂಡಿ ಬ್ಲಾಕ್ ಆದಾಗ ಪಂಚಾಯಿತಿಗೆ ಹೇಳಿದ್ರೆ ಸ್ವಚ್ಛ ಮಾಡುತ್ತೇವೆ ಅಂತಾರೆ. ಆದರೆ ಕೆಲಸಕ್ಕೆ ಬಂದ್ರೆ ಸಲಕಿಯಿಂದ ಒಂದು ಗೆರೆ ಎಳೆದು ಹೋಗ್ತಾರೆ. ದುರ್ವಾಸನೆ ಹಾಗೇ ಇರುತ್ತದೆ
ಬೀರಪ್ಪ ವಡಗಲಿ ಸಮುದಾಯ ಆರೋಗ್ಯ ಅಧಿಕಾರಿ ಹನುಮಸಾಗರ
ಚರಂಡಿ ನೀರು ಹರಿಯುವ ಸ್ಥಳ ಪೊಲೀಸ್ ಠಾಣೆಯ ಆವರಣಕ್ಕೆ ಸೇರಿಲ್ಲ. ಚರಂಡಿ ನೀರಿನ ಸಮಸ್ಯೆ ಬಗ್ಗೆ ಹಲವು ಬಾರಿ ಪಂಚಾಯಿತಿ ಗಮನಕ್ಕೆ ತಂದಿದ್ದೇವೆ. ಆದರೂ ಸ್ವಚ್ಛತೆಗೆ ಮುಂದಾಗಿಲ್ಲ
ಧನಂಜಯ ಹಿರೇಮಠ ಪಿಎಸ್‌ಐ ಹನುಮಸಾಗರ
‘ಚರಂಡಿ ನೀರು ರಸ್ತೆಯ ಮೇಲೆ ಹರಿಯದಂತೆ ಕ್ರಮ’
‘ಪೊಲೀಸ್ ಠಾಣೆ ಮುಂಭಾಗ ಸೇರಿ ವಿವಿಧ ಕಚೇರಿಗಳ ಮುಂದೆ ಚರಂಡಿ ನೀರು ನಿಲ್ಲದಂತೆ ಕ್ರಮಕೈಗೊಳ್ಳಲಾಗುವುದು. ಜನರು ಕಸವನ್ನು ರಸ್ತೆಯ ಮೇಲೆ ಎಸೆಯದೇ ಗ್ರಾಮ ಪಂಚಾಯಿತಿಯ ಸ್ವಚ್ಛವಾಹಿನಿಯಲ್ಲಿ ಹಾಕುವುದರ ಮೂಲಕ ನೈರ್ಮಲ್ಯ ಆಗದಂತೆ ಜಾಗೃತಿ ವಹಿಸಬೇಕು’ ಎಂದು ಪಿಡಿಒ ನಿಂಗಪ್ಪ ಮೂಲಿಮನಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.