ಹನುಮಸಾಗರ: ಆರು ವರ್ಷಗಳ ಹಿಂದೆ ಕೆಕೆಆರ್‌ಡಿಬಿ ಅನುದಾನದಲ್ಲಿ ನಿರ್ಮಿಸಲಾದ ಇಲ್ಲಿಯ 14ನೇ ವಾರ್ಡಿನ ಸಾರ್ವಜನಿಕ ಗ್ರಂಥಾಲಯ ಇಂದಿಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ.
2017–18ನೇ ಸಾಲಿನಲ್ಲಿ ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಈ ಗ್ರಂಥಾಲಯವು ಇಂದಿಗೂ ಬಾಗಿಲು ತೆರೆದೆ ನಿಂತಿದೆ.
ಕಟ್ಟಡದಲ್ಲಿ ಪುಸ್ತಕಗಳನ್ನು ಸರಿಯಾಗಿ ಸಂರಕ್ಷಿಸಿಲ್ಲ. ಗ್ರಂಥಾಲಯದ ಒಳಾಂಗಣವೂ ನಿರಂತರ ಬಳಕೆಯ ಕೊರತೆಯಿಂದ ಅಸಮರ್ಪಕ ಸ್ಥಿತಿಯಲ್ಲಿದೆ.
ಈ ಗ್ರಂಥಾಲಯದಿಂದ ಕೇವಲ 300 ಮೀಟರ್ ಅಂತರದಲ್ಲೇ ಸರ್ಕಾರಿ ಹರಿಜನವಾಡ ಶಾಲೆ ಇದೆ. ಆ ಶಾಲೆಯ ವಿದ್ಯಾರ್ಥಿಗಳಿಗೆ ಈ ಗ್ರಂಥಾಲಯದಿಂದ ಶೈಕ್ಷಣಿಕ ಸಹಾಯ ದೊರೆಯಬಹುದಾಗಿತ್ತು. ಆದರೆ ಗ್ರಂಥಪಾಲಕರ ನೇಮಕಾತಿ ಪೂರ್ಣಗೊಳ್ಳದಿರುವುದರಿಂದ ಇದರ ಉಪಯೋಗ ಸ್ಥಳೀಯರಿಗೆ ಸಿಗದಂತಾಗಿದೆ.
14ನೇ ವಾರ್ಡಿನ ಜನರಲ್ಲಿ ಬಹುತೇಕರು ವಿದ್ಯಾವಂತರಾಗಿದ್ದು, ಓದಿಗೆ ಹೆಚ್ಚಿನ ಪ್ರೋತ್ಸಾಹ ನೀಡುವವರು. ಈ ಪ್ರದೇಶದಲ್ಲೇ ಸಾರ್ವಜನಿಕ ಗ್ರಂಥಾಲಯ ಒಂದೇ ಇದ್ದು, ಅದರ ಸಮೀಪದಲ್ಲೇ ವಿದ್ಯಾರ್ಥಿಗಳ ವಸತಿ ನಿಲಯವೂ ಇದೆ. ಈ ಕಾರಣದಿಂದ ಈ ಗ್ರಂಥಾಲಯವು ವಿದ್ಯಾಭ್ಯಾಸಕ್ಕೆ ಸಹಾಯಕವಾಗುವ ಪ್ರಮುಖ ಕೇಂದ್ರವಾಗಿ ಬೆಳೆಯುವ ಸಾಧ್ಯತೆ ಇದೆ.
ಜನರ ಹಣದಿಂದ ನಿರ್ಮಿಸಲಾದ ಈ ಗ್ರಂಥಾಲಯವು ಶೀಘ್ರದಲ್ಲೇ ಓದುಗರ ಸೇವೆಗೆ ಲಭ್ಯವಾಗಬೇಕು ಎಂಬುದು ಸ್ಥಳೀಯರ ಆಸೆ. ನಿರ್ವಹಣಾ ಕ್ರಮಗಳು ಪೂರ್ಣಗೊಂಡು ಗ್ರಂಥಾಲಯ ಚಟುವಟಿಕೆ ಆರಂಭವಾದರೆ, ಇದು ಹನುಮಸಾಗರದ ವಿದ್ಯಾರ್ಥಿ ಸಮುದಾಯಕ್ಕೆ ಜ್ಞಾನಕೇಂದ್ರವಾಗಿ ಮಾರ್ಪಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಗ್ರಂಥಪಾಲಕರ ಕೊರತೆ, ನಿರ್ಲಕ್ಷ್ಯ ಶೀಘ್ರ ಕಾರ್ಯಾರಂಭ, ಸಾರ್ವಜನಿಕ ಬಳಕೆಗೆ ಬೇಡಿಕೆ
ಗ್ರಂಥಪಾಲಕರ ನೇಮಕಾತಿ ಪ್ರಕ್ರಿಯೆ ಇದೀಗ ತಾನೇ ಮುಕ್ತಾಯವಾಗಿದೆ. ಅಂತಿಮ ಪಟ್ಟಿ ಸಲ್ಲಿಸಿದ ನಂತರ ಸಾರ್ವಜನಿಕ ಗ್ರಂಥಾಲಯವನ್ನು ಶೀಘ್ರದಲ್ಲೇ ಉದ್ಘಾಟಿಸಲಾಗುವುದುನಿಂಗಪ್ಪ ಮೂಲಿಮನಿ ಹನುಮಸಾಗರ ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.