ADVERTISEMENT

ತಾವರಗೇರಾ: ಮಳೆಗೆ ಮೈದುಂಬಿದ ರಾಯನ ಕೆರೆ

ನಾಲ್ಕು ಮನೆಗಳ ಗೋಡೆ ಕುಸಿತ: ಅಧಿಕಾರಿಗಳ ಮಾಹಿತಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 4:49 IST
Last Updated 11 ಆಗಸ್ಟ್ 2025, 4:49 IST
ತಾವರಗೇರಾ ಪಟ್ಟಣದಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ರಾಯನಕೆರೆ ನೀರು ಭರ್ತಿಯಾಗಿದೆ
ತಾವರಗೇರಾ ಪಟ್ಟಣದಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ರಾಯನಕೆರೆ ನೀರು ಭರ್ತಿಯಾಗಿದೆ   

ತಾವರಗೇರಾ: ಪಟ್ಟಣದಲ್ಲಿ ಕಳೆದ 4 ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಶನಿವಾರ ಸಂಜೆ 88 ಎಂಎಂ ರಷ್ಟು ಮಳೆಯಾಗಿದ್ದು, ಸ್ಥಳೀಯ 4 ಕುಟುಂಬಗಳ ಮನೆ ಗೋಡೆ ಕುಸಿದಿವೆ ಎಂದು ಪ.ಪಂ ಆಡಳಿತ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪಟ್ಟಣದ ವೈಜನಾಥೇಶ್ವರ ದೇವಸ್ಥಾನ ಗರ್ಭ ಗುಡಿ, ಕರಿವೀರಣ್ಣ ದೇವಸ್ಥಾನದಲ್ಲಿ ಮಳೆ ನೀರು ನುಗ್ಗಿದೆ. ಎಪಿಎಂಸಿ ಕಚೇರಿ ಆವರಣ, ಮುಖ್ಯ ರಸ್ತೆಯಲ್ಲಿ ಮಳೆ ನೀರು ಮುಂದೆ ಹೋಗದಂತೆ ರಸ್ತೆಯಲ್ಲಿ ನಿಂತ ಕಾರಣ ವಾಹನ ಸಂಚಾರ ಮತ್ತು ಜನ ಓಡಾಟಕ್ಕೆ ಹರಸಾಹಸ ಪಡಬೇಕಾಯಿತು.

ಕಳೆದ ಮೂರು ನಾಲ್ಕು ದಿನಗಳಿಂದ ದಿನಂಪ್ರತಿ ಸುರಿದ ಮಳೆಯಿಂದ ಪಟ್ಟಣದ ಜೀವನಾಡಿ ರಾಯನಕೆರೆ ತುಂಬಿ ಕೋಡಿ ಹರಿಯುತ್ತಿದೆ.

ADVERTISEMENT

ಈ ಮಳೆಯಿಂದ ಮುಂಗಾರು ಬೆಳೆಗಳಿಗೆ ಅನುಕೂಲವಾಗುತ್ತದೆ. ಆದರೆ ಹೀಗೆ ದಿನಾಲು ಭಾರಿ ಮಳೆ ಮುಂದುವರಿದರೆ ಬೆಳೆಗಳಿಗೆ ರೋಗ ಹರಡಬಹುದು. ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಸದ್ಯ ಮಳೆ ವಿರಾಮ ಕೊಟ್ಟರೆ ರೈತ ವರ್ಗಕ್ಕೆ ಅನುಕೂಲವಾಗಲಿದೆ ಎಂದು ರೈತರು ತಿಳಿಸಿದರು.

ಪ.ಪಂ ಆಡಳಿತ ತುರ್ತು ಕ್ರಮ: ಪಟ್ಟಣದಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮನೆಗಳ ಹಾನಿ, ನೀರು ಹರಿಯುವ ಅಡಚಣೆ ಕುರಿತು ಪಟ್ಟಣ ಪಂಚಾಯಿತಿ ಆಡಳಿತ, ಅಧಿಕಾರಿಗಳು ಭಾನುವಾರ ಬೆಳಿಗ್ಗೆ ತಹಶೀಲ್ದಾರ್, ಮುಖ್ಯಾಧಿಕಾರಿ ಸೂಚನೆ ಮೇರೆಗೆ ತುರ್ತು ಕ್ರಮ ಕೈಗೊಂಡರು. ಜೆಸಿಬಿ ಮೂಲಕ ನೀರು ಹೋಗುವಂತೆ ವ್ಯವಸ್ಥೆ ಮಾಡಿದರು.

ತಾವರಗೇರಾ ಪಟ್ಟಣದಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ಮನೆ ಅಂಗಡಿಗಳಿಗೆ ನೀರು ನುಗ್ಗಿದ ಕಾರಣ ಪಪಂ ಆಡಳಿತದಿಂದ ತುರ್ತು ಕಾರ್ಯ ನಡೆಸಿರುವದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.