ಅಳವಂಡಿ: ರೆಡ್ಡಿ ಸಮುದಾಯವೆಂದರೆ ನಂಬಿಕೆ, ಗೌರವ, ಧೈರ್ಯದ ಪ್ರತೀಕ. ಸಾಧಕರನ್ನು ಸೃಷ್ಟಿಸುವ ಶಕ್ತಿ ಮಲ್ಲಮ್ಮ ತಾಯಿಗೆ ಇದೆ. ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಮಲ್ಲಮ್ಮನ ಆದರ್ಶಗಳು ತುಂಬಾ ಪ್ರಾಮುಖ್ಯತೆ ಪಡೆಯುತ್ತವೆ’ ಎಂದು ಎರೆಹೊಸಳ್ಳಿ ಹೇಮವೇಮ ರಡ್ಡಿಪೀಠದ ವೇಮನಾನಂದ ಸ್ವಾಮೀಜಿ ಹೇಳಿದರು.
ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಂಡ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಬೆಳ್ಳಿ ಮೂರ್ತಿ ಲೋಕಾರ್ಪಣೆ ಹಾಗೂ ಕೊಪ್ಪಳ ತಾಲ್ಲೂಕು ಮಟ್ಟದ ಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಭೆಗೆ ಚಾಲನೆ ನೀಡಿ ಗುರುವಾರ ಮಾತನಾಡಿದರು.
‘ಮಲ್ಲಮ್ಮ ತಾಯಿತು ಲಕ್ಷ್ಮೀಯ ಸ್ವರೂಪವಿದ್ದಂತೆ. ಅವರ ಆಧ್ಯಾತ್ಮ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು. ಭಾರತೀಯ ಕುಟುಂಬ ವ್ಯವಸ್ಥೆ ಸುಂದರವಾಗಿದ್ದು, ವ್ಯವಸ್ಥೆ ಉತ್ತಮವಾಗಿರಲು ಮಲ್ಲಮ್ಮನ ಬದುಕಿನ ಕೌಶಲ್ಯ ರೂಡಿಸಿಕೊಳ್ಳಬೇಕು. ಅವರು ಸ್ತ್ರೀಕುಲ ರತ್ನ ಆಗಿದ್ದಾರೆ’ ಎಂದು ಹೇಳಿದರು.
ಸಿಂಧನೂರಿನ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ‘ರಡ್ಡಿ ಸಮಾಜ ಕೊಡುಗೈ ದಾನಿಯಾಗಿದೆ. ಸಮಾಜದ ಹೆಚ್ಚು ಕುಟುಂಬಗಳು ಕೃಷಿ ಅವಲಂಬಿಸಿವೆ. ಕೃಷಿಯೊಂದಿಗೆ ಇತರ ವ್ಯವಹಾರಗಳಲ್ಲಿ ಮುಂದುವರಿಯಬೇಕು. ಜತೆಗೆ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ರಡ್ಡಿ ಸಮಾಜ ಶಿಕ್ಷಣ, ಸಂಘಟನೆ, ಕೃಷಿ, ಸಾಮಾಜಿಕ ಬದಲಾವಣೆಗೆ ಹೆಚ್ಚು ಆದ್ಯತೆ ಕೊಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಪಾಲಕರು ಕೊಡಿಸುವ ಮೂಲಕ ಅವರ ಉತ್ತಮ ಭವಿಷ್ಯ ನಿರ್ಮಾಣ ಮಾಡಬೇಕು’ ಎಂದು ಹೇಳಿದರು.
ಕರ್ನಾಟಕ ರಾಜ್ಯ ರಡ್ಡಿ ಸಮಾಜದ ಅಧ್ಯಕ್ಷ ಶೇಖರಗೌಡ ಪಾಟೀಲ ಮಾತನಾಡಿ, ‘ಸಮಾಜಕ್ಕೆ ಚೈತನ್ಯ ತುಂಬುವ ಕೆಲಸವಾಗಬೇಕು. ಮಲ್ಲಮ್ಮನನ್ನು ಶ್ರದ್ಧೆಯಿಂದ ನೆನೆಸಬೇಕು. ಘಟ್ಟಿರಡ್ಡಿಹಾಳ ಗ್ರಾಮವು ಭಕ್ತಿ–ಶಕ್ತಿಯ ಕೇಂದ್ರವಾಗಿದೆ. ಚಿಕ್ಕಗ್ರಾಮದಲ್ಲಿ ಅತ್ಯಂತ ವ್ಯವಸ್ಥಿತವಾಗಿ ತಾಲ್ಲೂಕು ಮಟ್ಟದ ಮಲ್ಲಮ್ಮನ ಜಯಂತಿ ಆಚರಿಸಿದ್ದಾರೆ. ಮಲ್ಲಮ್ಮನ ಆದರ್ಶದ ಬದುಕನ್ನು ಎಲ್ಲರೂ ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.
ಹೂವಿನಹಡಗಲಿ ಹಿರೇಶಾಂತವೀರ ಸ್ವಾಮೀಜಿ, ಅಳವಂಡಿ ಮರುಳಾರಾಧ್ಯ ಶಿವಾಚಾರ್ಯರು, ಮೈನಳ್ಳಿ-ಬಿಕನಳ್ಳಿ ಸಿದ್ದೇಶ್ವರ ಶಿವಾಚಾರ್ಯರು, ನಿವೃತ್ತ ಡಿಡಿಪಿಐ ಎಂ.ಎ. ರಡ್ಡೇರ ಮಾತನಾಡಿದರು. ನಂತರ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಮುಂಡರಗಿ ತಹಶೀಲ್ದಾರ್ ಎರ‍್ರಿಸ್ವಾಮಿ ಪಿ.ಎಸ್., ಜಿಲ್ಲಾ ರಡ್ಡಿ ಸಮಾಜದ ಅಧ್ಯಕ್ಷ ಜಗದೀಶಪ್ಪ ಸಾಹುಕಾರ, ಪ್ರಮುಖರಾದ ಸಿ.ವಿ. ಚಂದ್ರಶೇಖರ, ಎಸ್.ಬಿ. ನಾಗರಳ್ಳಿ, ಮಿಥುನಗೌಡ ಪಾಟೀಲ, ಈಶ್ವರಪ್ಪ ಹಂಚಿನಾಳ, ಶೋಭಾ ಮೇಟಿ, ಬಸವರಡ್ಡೆಪ್ಪ ಹಳ್ಳಿಕೇರಿ, ಪ್ರದೀಪಗೌಡ, ಮಹಾಂತೇಶ ಪಾಟೀಲ, ಯಂಕನಗೌಡ್ರ, ಈಶಪ್ಪ, ಹನುಮರಡ್ಡಿ, ಎಚ್.ಎಲ್. ಹಿರೇಗೌಡ, ಆರ್.ಪಿ. ರಡ್ಡೇರ, ಸಂಜಯ ಪಾಟೀಲ, ಕೆ.ಅಮರೇಶ ಪಾಟೀಲ, ಕೃಷ್ಣರಡ್ಡಿ, ವಿರೂಪಾಕ್ಷಪ್ಪ, ಸುನಂದಾ, ಸಂಧ್ಯಾ, ಬಸವರಾಜ, ವೆಂಕರಡ್ಡಿ, ಕಾಶಿನಾಥ, ಶಂಕರಗೌಡ ಹಿರೇಗೌಡ, ರಮೇಶ ಮೂಲಿಮನಿ, ಸುರೇಶ, ಕಮಲಪ್ಪ, ಸಂಗಮೇಶ ಕೊಪ್ಪಳ, ಪಿಎಸ್‌ಐ ಪ್ರಕಾಶರಡ್ಡಿ, ಹಾಲಪ್ಪ, ಶೀಲಾ, ವೈದ್ಯ ಪ್ರವೀಣಕುಮಾರ, ಚನ್ನಪ್ಪ ಗುಟಗನೂರ, ಬಸವರಡ್ಡಿ, ದೇವಪ್ಪ, ಗವಿಸಿದ್ದಪ್ಪ ಕರಡಿ, ರುದ್ರಗೌಡ, ಹನುಮರಡ್ಡಿ, ಸುಭಾಸರಡ್ಡಿ, ಹೇಮರಡ್ಡಿ, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಇತರರು ಭಾಗವಹಿಸಿದ್ದರು.
ಅಡ್ಡಪಲ್ಲಕ್ಕಿ ಮೆರವಣಿಗೆ: ಬೆಳಿಗ್ಗೆ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ, ಅಭಿಷೇಕ ನಡೆಸಲಾಯಿತು. ನಂತರ ಬೆಳ್ಳಿ ಮೂರ್ತಿಗೆ ವಿವಿಧ ಪೂಜೆ ಸಲ್ಲಿಸಲಾಯಿತು. ನಂತರ ತಳಿರು, ತೋರಣಗಳಿಂದ ಅಲಂಕರಿಸಿದ ಅಡ್ಡಪಲ್ಲಕ್ಕಿಯಲ್ಲಿ ಹೇಮರಡ್ಡಿ ಮಲ್ಲಮ್ಮನ ಬೆಳ್ಳಿ ಮೂರ್ತಿಯನ್ನು ಇರಿಸಿ ಮಹಿಳೆಯರ ಕಳಸ, ಕುಂಭ ಮೆರವಣಿಗೆ ಹಾಗೂ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.