ಕಾರಟಗಿ: ‘ರೆಡ್ಡಿ ಸಮಾಜವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ತನ್ನೊಂದಿಗೆ ಇತರ ಸಮುದಾಯಗಳ ಅಭಿವೃದ್ಧಿಗೆ ಕೈಜೋಡಿಸಿದೆ. ಕಾಯಕ ನಿಷ್ಠರಾಗುವ ಮೂಲಕ ಇತರರಿಗೂ ಮಾದರಿಯಾಗಿದ್ದು, ವಿಶ್ವಾಸದೊಂದಿಗೆ ಸರ್ವ ಸಮಾಜಗಳೊಂದಿಗೆ ಉತ್ತಮ ಸಂಬಂಧ ಹೊಂದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲ್ಲೂಕು ವೇಮ-ಹೇಮರೆಡ್ಡಿ ಸಮಾಜ ಸೇವಾ ಟ್ರಸ್ಟ್ ಶನಿವಾರ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿರುವ ಸಿದ್ದೇಶ್ವರ ರಂಗಮಂದಿರದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮರ ಜಯಂತ್ಯುತ್ಸವ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಹೇಮರಡ್ಡಿ ಮಲ್ಲಮ್ಮ ಜಾತಿಗೆ ಸೀಮಿತರಲ್ಲ. ಎಲ್ಲ ಸಮುದಾಯಗಳಿಗೆ ಮಾದರಿಯಾಗಿದ್ದು, ಕಾಯಕ ನಿಷ್ಠೆ, ದೈವಭಕ್ತಿಗೆ ಹೆಸರಾಗಿದ್ದಾರೆ. ಮಹಾಸಾಧ್ವಿ ಆಗುವ ಮೂಲಕ ಮಹಿಳೆಯರಿಗೆ ಆದರ್ಶವಾಗಿದ್ದಾರೆ. ಅವರ ಆದರ್ಶವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಗೋಪಿನಾಥರೆಡ್ಡಿ, ಡಾ.ಚಂದ್ರಪ್ಪ ಗಂಗಾವತಿ, ಪ್ರಭಾಕರರೆಡ್ಡಿ, ಮಾಜಿ ಸಚಿವರಾದ ಎಂ.ಮಲ್ಲಿಕಾರ್ಜುನ ನಾಗಪ್ಪ, ಅಮರೇಗೌಡ ಬಯ್ಯಾಪುರ ಮೊದಲಾದವರು ಮಾತನಾಡಿ, ‘ಒಗ್ಗಟ್ಟಿಗೆ, ಕಾಯಕನಿಷ್ಟೆಗೆ, ಸದಾ ಬೇರೆಯವರೊಂದಿಗೆ ಬೆರೆತು ಅನ್ಯೋನ್ಯ ಆಗಿರುವುದಕ್ಕೆ ರಡ್ಡಿ ಸಮಾಜ ಮಾದರಿಯಾಗಿದೆ’ ಎಂದರು.
ಕೃಷ್ಣಾನಂದ ಶಾಸ್ತ್ರೀ ಕಜ್ಜಿಡೋಣಿ ಉಪನ್ಯಾಸ ನೀಡಿ, ‘ನಮ್ಮ ಗೆಲುವನ್ನು ಉತ್ಸಾಹದಿಂದ ಆಚರಿಸುವುದೇ ಜಯಂತಿ. ತಪಸ್ಸು, ಜಪ, ತಪದಿಂದ ಸಾಕ್ಷಾತ್ ಪರಮಾತ್ಮನೊಂದಿಗೆ (ಶ್ರೀಶೈಲ ಮಲ್ಲಿಕಾರ್ಜನ) ಅನುಸಂಧಾನ ನಡೆಸಿದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಕಾಯಕ ನಿಷ್ಠರಾಗಿ ಬೆಳೆದರು. ಏನೆಲ್ಲ ಬಂದರೂ ತಡೆದುಕೊಳ್ಳುವ ಮನೋಭಾವ ರೂಢಿಸಿಕೊಂಡರೆ ಕಷ್ಟದ ಬಳಿಕ ಸುಖ ಬರುತ್ತದೆ. ಇತರರ ಸುಖದಲ್ಲೇ ನಮ್ಮ ಸುಖವನ್ನು ಅನುಭವಿಸಬೇಕು’ ಎಂದರು.
ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಕೃಷಿ ಬಗ್ಗೆ ಉಪನ್ಯಾಸ ನೀಡಿ, ‘ದೇಶ ಆಹಾರ ಭದ್ರತೆ ಹೊಂದಲು ಕೃಷಿ ಕ್ಷೇತ್ರಕ್ಕೆ ದೊರೆತ ಆದ್ಯತೆಯೇ ಕಾರಣ. ರೈತರ ಉತ್ಪನ್ನಕ್ಕೆ ತಕ್ಕ ಬೆಲೆಯನ್ನು ರೈತರು ನಿರ್ಧರಿಸುವಂತಾಗಬೇಕು. ಕೃಷಿಯಲ್ಲಿ ಅಭಿವೃದ್ಧಿ ಸಾಧಿಸುವ ಮೂಲಕ ಭಾರತವು ಈಗ ನೀಡುವ ದೇಶವಾಗಿದೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರೆಡ್ಡಿ ಸಮಾಜದ ತಾಲ್ಲೂಕು ಅಧ್ಯಕ್ಷ ರುದ್ರಗೌಡ ಪಾಟೀಲ ನಂದಿಹಳ್ಳಿ ಪ್ರಸ್ತಾವಿಕವಾಗಿ ಮಾತನಾಡಿದರು.
ಹರಿಹರ ತಾಲ್ಲೂಕು ಎರೆಹೊಸಳ್ಳಿ ಹೇಮ-ವೇಮ ಸದ್ಬೋಧನಾ ವಿದ್ಯಾಪೀಠದ ಪೀಠಾಧಿಕಾರಿ ವೇಮಾನಂದಸ್ವಾಮಿ, ಬೂದಗುಂಪಾ ಕೊಟ್ಟೂರೇಶ್ವರ ಸಂಸ್ಥಾನ ಶಾಖಾ ಮಠದ ಸಿದ್ದೇಶ್ವರಸ್ವಾಮಿ, ಹಿರೇಮಠದ ಮರುಳಸಿದ್ದಯ್ಯ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು.
ಶ್ರೀಶೈಲದ ಗುರುಪಾದಯ್ಯಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಬಯ್ಯಾಪುರ, ಬಸನಗೌಡ ಬಾದರ್ಲಿ, ಶಾಸಕ ನಾರಾ ಭರತರೆಡ್ಡಿ, ರೆಡ್ಡಿ ಸಮಾಜದ ರಾಜ್ಯಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ, ರಾಜ್ಯ ರೆಡ್ಡಿ ಜನ ಸಂಘದ ಅಧ್ಯಕ್ಷ ಜಯರಾಮರೆಡ್ಡಿ, ಮಾಜಿ ಶಾಸಕ ಜಿ.ವೀರಪ್ಪ, ಪ್ರಮುಖರಾದ ಸಿ.ವಿ. ಚಂದ್ರಶೇಖರ, ನಾರಾ ಪ್ರತಾಪರೆಡ್ಡಿ, ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಜಗದೀಶಪ್ಪ ಸಾಹುಕಾರ ಸಿಂಗನಾಳ, ಮೌನೇಶ ದಢೇಸೂಗೂರು ಸೇರಿದಂತೆ ರೆಡ್ಡಿ ಸಮಾಜದ ಹಾಗೂ ವಿವಿಧ ಸಮಾಜಗಳ ಪ್ರಮುಖರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಮೆರವಣಿಗೆ: ಆರಂಭದಲ್ಲಿ ಪನ್ನಾಪುರ ತಿರುವು ಬಳಿಯ ಬನ್ನಿ ಮಹಾಂಕಾಳಿ ದೇವಸ್ಥಾನದಿಂದ ಸಾವಿರಾರು ಮಹಿಳೆಯರು ಹೊತ್ತ ಕುಂಭ, ಕಳಸದ ಮೆರವಣಿಗೆ, ಡೊಳ್ಳು, ತಾಷಾ, ವಾದ್ಯಮೇಳ, ವಿವಿಧ ಕಲಾತಂಡಗಳು, ಸಮಾಜದ ಸಹಸ್ರಾರು ಜನರ ಪಾಲ್ಗೊಳ್ಳುವಿಕೆ ಗಮನ ಸೆಳೆಯಿತು.
ಪ್ರೊ.ಲಿಂಗಾರೆಡ್ಡಿ ಆಲೂರ ನಿರ್ವಹಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರತೀಕ್ಷಾರಿಂದ ಭರತನಾಟ್ಯ, ಮೆಹಬೂಬ ಕಿಲ್ಲೇದಾರ ರೈತ ಗೀತೆ ಹಾಡಿದರು. ಶರಣಬಸವರೆಡ್ಡಿ ಸ್ವಾಗತಿಸಿದರು. ತಾಲ್ಲೂಕು ಸೇರಿದಂತೆ ವಿವಿಧ ಜಿಲ್ಲಾ, ತಾಲ್ಲೂಕುಗಳಿಂದ ಬಂದಿದ್ದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.